50% ಕಮಿಷನ್‌ ಆರೋಪ: ಪ್ರಿಯಾಂಕಾ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲು

By BK Ashwin  |  First Published Aug 13, 2023, 2:08 PM IST

ಮಧ್ಯ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕರು ಕಮಿಷನ್‌ ಆರೋಪ ಮಾಡಿರುವ ಹಿನ್ನೆಲೆ ಪ್ರಿಯಾಂಕಾ ಗಾಂಧಿ ವಾದ್ರಾ, ಮಧ್ಯ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ 'ಎಕ್ಸ್' ಖಾತೆಗಳ "ಹ್ಯಾಂಡ್ಲರ್" ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂದೋರ್ ಪೊಲೀಸರು ಶನಿವಾರ ತಿಳಿಸಿದ್ದಾರೆ.


ಇಂದೋರ್ (ಆಗಸ್ಟ್‌ 13, 2023): ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭ್ರಷ್ಟಾಚಾರ ಆರೋಪ ಮಾಡಿರುವ ಸಂಬಂಧ ಪ್ರಿಯಾಂಕಾ ಗಾಂಧಿ ವಾದ್ರಾ, ಮಧ್ಯ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ 'ಎಕ್ಸ್' ಖಾತೆಗಳ "ಹ್ಯಾಂಡ್ಲರ್" ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂದೋರ್ ಪೊಲೀಸರು ಶನಿವಾರ ತಿಳಿಸಿದ್ದಾರೆ. ಮಧ್ಯ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕರು ಕಮಿಷನ್‌ ಆರೋಪ ಮಾಡಿರುವ ಹಿನ್ನೆಲೆ ಕೇಸ್‌ ದಾಖಲಿಸಲಾಗಿದೆ. 

ಈಗ ಎಕ್ಸ್ ಎಂದು ಕರೆಯಲ್ಪಡುವ ಟ್ವಿಟ್ಟರ್‌ನಲ್ಲಿ ಇಂದೋರ್ ಪೊಲೀಸ್ ಕಮಿಷನರ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಶನಿವಾರ ತಡರಾತ್ರಿ ಜ್ಞಾನೇಂದ್ರ ಅವಸ್ಥಿ ಎಂಬ ವ್ಯಕ್ತಿಯ ಹೆಸರನ್ನು ಹೊಂದಿರುವ ನಕಲಿ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗುತ್ತಿದೆ ಎಂದು ಸ್ಥಳೀಯ ಬಿಜೆಪಿಯ ಕಾನೂನು ಸೆಲ್ ಸಂಚಾಲಕ ನಿಮೇಶ್ ಪಾಠಕ್ ದೂರಿದ್ದಾರೆ ಎಂದು ಹೇಳಿದರು. 50ರಷ್ಟು ಕಮಿಷನ್ ನೀಡುವಂತೆ ರಾಜ್ಯದ ಗುತ್ತಿಗೆದಾರರಿಗೆ ಕೇಳಲಾಗುತ್ತಿದೆ ಎಂದು ಜ್ಞಾನೇಂದ್ರ ಅವಸ್ಥಿ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

Tap to resize

Latest Videos

ಇದನ್ನು ಓದಿ: ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಈ ಹಿನ್ನೆಲೆ ಇಂದೋರ್‌ ನಗರದ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಜ್ಞಾನೇಂದ್ರ  ಅವಸ್ಥಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಕಮಲ್‌ ನಾಥ್ ಮತ್ತು ಅರುಣ್ ಯಾದವ್ ಅವರ 'ಎಕ್ಸ್' ಖಾತೆಗಳ "ಹ್ಯಾಂಡ್ಲರ್" ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಾಗೂ, ನಿಮೇಶ್ ಪಾಠಕ್ ಅವರ ದೂರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. 

ಅದಕ್ಕೂ ಮುನ್ನ, ಇಂದೋರ್‌ ನಗರದ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಮಲ್‌ ನಾಥ್ ಮತ್ತು ಅರುಣ್ ಯಾದವ್ ಅವರ ಟ್ವಿಟ್ಟರ್‌ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಮ್ಸನೇಹಿ ಮಿಶ್ರಾ ಮಾಹಿತಿ ನೀಡಿದ್ದರು. ಹಾಗೂ, ನಿಮೇಶ್ ಪಾಠಕ್ ಅವರ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಅವರು ಹೇಳಿದರು.

Party Rounds: ಪ್ರಿಯಾಂಕ ಗಾಂಧಿಗಾಗಿ ಕರ್ನಾಟಕದಲ್ಲಿ ಸೇಫ್‌ ಕ್ಷೇತ್ರ ಹುಡುಕಾಡ್ತಿರೋ ಕಾಂಗ್ರೆಸ್‌ ಹೈಕಮಾಂಡ್‌!

ದಾರಿ ತಪ್ಪಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸುವುದರ ಮೂಲಕ ರಾಜ್ಯ ಸರ್ಕಾರ ಮತ್ತು ನಮ್ಮ ಪಕ್ಷದ ಇಮೇಜ್ ಅನ್ನು ಕೆಡಿಸಲು ಕಾಂಗ್ರೆಸ್ ನಾಯಕರು ಸಂಚು ಮಾಡಿದ್ದಾರೆ ಎಂದು ನಿಮೇಶ್‌ ಪಾಠಕ್ ಆರೋಪಿಸಿದ್ದಾರೆ. ಈ ಹಿನ್ನೆಲೆ ಆಯಾ ಟ್ವಿಟ್ಟರ್‌ ಹ್ಯಾಂಡಲ್‌ಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶುಕ್ರವಾರ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಧ್ಯ ಪ್ರದೇಶದ ಗುತ್ತಿಗೆದಾರರ ಒಕ್ಕೂಟವು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, 50 ಪ್ರತಿಶತ ಕಮಿಷನ್ ಪಾವತಿಸಿದ ನಂತರವೇ ತಮ್ಮ ಪಾವತಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ದೂರಿದ್ದಾರೆ ಎಂದು ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌( ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ, "ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ 40% ಕಮಿಷನ್ ಸಂಗ್ರಹಿಸುತ್ತಿತ್ತು, ಮಧ್ಯ ಪ್ರದೇಶದಲ್ಲಿ ಬಿಜೆಪಿ ಭ್ರಷ್ಟಾಚಾರದ ತನ್ನದೇ ದಾಖಲೆಯನ್ನು ಮುರಿದು ಮುನ್ನಡೆದಿದೆ, 40% ಕಮಿಷನ್ ಸರ್ಕಾರವನ್ನು ಕರ್ನಾಟಕದ ಜನರು ಕಿತ್ತೊಗೆದರು, ಈಗ ಮಧ್ಯ ಪ್ರದೇಶದ ಜನರು 50% ಕಮಿಷನ್ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕುತ್ತಾರೆ’’ ಎಂದು ಅವರು ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ಇನ್ನು, ಕಮಲ್‌ ನಾಥ್‌ ಮತ್ತು ಅರುಣ್‌ ಯಾದವ್ ಕೂಡ ಇದೇ ರೀತಿಯ ಪೋಸ್ಟ್‌ಗಳನ್ನು ಮಾಡಿದ್ದಾರೆ. 

ಇದನ್ನೂ ಓದಿ: ಕರ್ನಾಟಕದಲ್ಲಿ 'ಕೈ' ದಿಗ್ವಿಜಯ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲೂ ಗೆಲುವಿಗೆ ಪ್ಲ್ಯಾನ್‌: ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ

ಇನ್ನೊಂದೆಡೆ, ಪ್ರಿಯಾಂಕಾ ಗಾಂಧಿಯವರ ಆರೋಪವನ್ನು ಸುಳ್ಳು ಎಂದು ಹೇಳಿದ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಕಾಂಗ್ರೆಸ್‌ ನಾಯಕಿಯ ಆರೋಪ ಬೆಂಬಲಿಸುವ ಪುರಾವೆಯನ್ನು ಕೇಳಿದರು. ಇಲ್ಲದಿದ್ದರೆ ಕಾನೂನು ಕ್ರಮಕ್ಕಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿಯ ಮುಂದೆ ಆಯ್ಕೆಗಳು ತೆರೆದಿರುತ್ತವೆ ಎಂದು ಗೃಹ ಸಚಿವರು ಎಚ್ಚರಿಸಿದರು. ವಿರೋಧ ಪಕ್ಷ ಸುಳ್ಳುಗಳನ್ನು ಹಬ್ಬಿಸುತ್ತಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ಹೇಳಿದ್ದಾರೆ. ಶುಕ್ರವಾರ ಸಂಜೆ ಗ್ವಾಲಿಯರ್ ಪೊಲೀಸರು ಸಹ ಪ್ರಿಯಾಂಕಾ ಗಾಂಧಿ ಅವರ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Karnataka Election Result 2023: ಪ್ರಗತಿ ಕಲ್ಪನೆಗೆ ಆದ್ಯತೆ ನೀಡಿದ ಕನ್ನಡಿಗರು: ಪ್ರಿಯಾಂಕಾ ಗಾಂಧಿ

click me!