ಮುಸ್ಲಿಂ ಮೀಸಲಾತಿ ರದ್ದು ಮಾಡಿ ಒಕ್ಕಲಿಗ, ಲಿಂಗಾಯತರಿಗೆ ಕೊಟ್ಟ ಪ್ರಕರಣ: ಏ.18ಕ್ಕೆ ಸುಪ್ರೀಂನಲ್ಲಿ ವಿಚಾರಣೆ

By Kannadaprabha NewsFirst Published Apr 14, 2023, 7:20 AM IST
Highlights

ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ಇತ್ತೀಚೆಗೆ ರದ್ದುಪಡಿಸಿದ ಹಾಗೂ ಒಕ್ಕಲಿಗ ಮತ್ತು ಲಿಂಗಾಯತರ ಮೀಸಲಾತಿ ಹೆಚ್ಚಿಸಿದ ಕರ್ನಾಟಕದ ನಿರ್ಧಾರ ಇದೀಗ ಸುಪ್ರೀಂಕೋರ್ಟ್‌ ಕಟಕಟೆ ಏರಿದೆ.

ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ಇತ್ತೀಚೆಗೆ ರದ್ದುಪಡಿಸಿದ ಹಾಗೂ ಒಕ್ಕಲಿಗ ಮತ್ತು ಲಿಂಗಾಯತರ ಮೀಸಲಾತಿ ಹೆಚ್ಚಿಸಿದ ಕರ್ನಾಟಕದ ನಿರ್ಧಾರ ಇದೀಗ ಸುಪ್ರೀಂಕೋರ್ಟ್‌ ಕಟಕಟೆ ಏರಿದೆ. ಮುಸ್ಲಿಂ ಮೀಸಲು ರದ್ದು ಪ್ರಶ್ನಿಸಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ಸೇರಿ ಕೆಲವರು ಅರ್ಜಿ ಸಲ್ಲಿಸಿದ್ದು, ಏ.18ರಂದು ವಿಚಾರಣೆ ನಡೆಸಲು ಕೋರ್ಟ್ ದಿನಾಂಕ ನಿಗದಿಪಡಿಸಿದೆ.

ಇದೇ ವೇಳೆ, ಮೀಸಲು ನಿರ್ಧಾರದ ಬಗ್ಗೆ ಗುರುವಾರ ಕೆಲವು ಕಟು ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಕೋರ್ಟ್ (supreme court), ಮೇಲ್ನೋಟಕ್ಕೆ ಈ ನಿರ್ಧಾರ ಆಧಾರವಿಲ್ಲದ್ದು ಹಾಗೂ ದೋಷಪೂರಿತವಾದದ್ದು ಎಂದು ಕಂಡುಬರುತ್ತದೆ. ನಮ್ಮ ಮುಂದೆ ಸಲ್ಲಿಸಲಾಗಿರುವ ದಾಖಲೆಗಳನ್ನು ಗಮನಿಸಿದಾಗ ಸಂಪೂರ್ಣ ತಪ್ಪಾದ ಊಹೆಗಳನ್ನು ಆಧರಿಸಿ ಮಾಡಿದ ನಿರ್ಣಯದಂತಿದೆ ಎಂದು ಹೇಳಿದೆ. ಈ ನಡುವೆ, ವಿಷಯ ಕೋರ್ಟಿನಲ್ಲಿರುವ ಕಾರಣ ಹೊಸ ಮೀಸಲು ಆಧರಿಸಿ ಯಾವುದೇ ನೇಮಕ ಹಾಗೂ ಶಾಲಾ-ಕಾಲೇಜು ಪ್ರವೇಶ ನಡೆಯುವುದಿಲ್ಲ ಎಂದು ಕೋರ್ಟಿಗೆ ಕರ್ನಾಟಕ ತಿಳಿಸಿದೆ.

Latest Videos

ತಾಕತ್ತಿದ್ದರೆ ಒಳ ಮೀಸಲಾತಿ ತೆಗೆಯಲಿ: ಕಾಂಗ್ರೆಸ್‌ಗೆ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಸವಾಲು

ವಾದ-ಪ್ರತಿವಾದ:

ಮುಸ್ಲಿಂ ಮೀಸಲು ರದ್ದು (Muslim reservation cancel) ಪ್ರಶ್ನಿಸಿ ವಕೀಲರಾದ ಸಿಬಲ್‌ (kapil sibal), ದುಷ್ಯಂತ್‌ ದವೆ ಹಾಗೂ ಗೋಪಾಲ ಶಂಕರನಾರಾಯಣನ್‌ (Gopal Sankaranarayanan) ಸಲ್ಲಿಸಿದ್ದ ಅರ್ಜಿ ಗುರುವಾರ ವಿಚಾರಣೆಗೆ ಬಂತು. ಮೂವರೂ ವಾದ ಮಂಡಿಸಿ, ಯಾವುದೇ ಅಧ್ಯಯನ ನಡೆಸದೇ ಹಾಗೂ ದತ್ತಾಂಶಗಳಿಲ್ಲದೇ ಮುಸ್ಲಿಮರ ಶೇ.4 ಕೋಟಾ ರದ್ದು ಮಾಡಲಾಗಿದೆ. ಕರ್ನಾಟಕದಲ್ಲಿ ಶೇ.13ರಷ್ಟಿರುವ ಮುಸ್ಲಿಮರಿಗೆ ಅನ್ಯಾಯವಾಗಿದೆ. ಸಮಾನತೆ ಹಕ್ಕಿಗೆ ಧಕ್ಕೆಯಾಗಿದೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಪರ ವಕೀಲ ತುಷಾರ್‌ ಮೆಹ್ತಾ (Tushar Mehta), ಅರ್ಜಿಗಳಿಗೆ ಸಂಬಂಧಿಸಿದಂತೆ ಉತ್ತರಿಸಲು ಕಾಲಾವಕಾಶ ನೀಡಿ ಎಂದು ಕೋರಿದರು. ಅಲ್ಲದೆ, ವಿಷಯ ಕೋರ್ಟಿಗೆ ಬಂದಿರುವ ಕಾರಣ ಮಾ.24ರಂದು ಕೈಗೊಂಡ ಮೀಸಲು ನಿರ್ಣಯ ಆಧಾರದಲ್ಲಿ ನೇಮಕಾತಿ ಹಾಗೂ ಶಾಲೆ-ಕಾಲೇಜು ಪ್ರವೇಶ ನಡೆಯುವುದಿಲ್ಲ ಎಂದು ಭರವಸೆ ನೀಡಿದರು. ಆಗ ಮಧ್ಯಪ್ರವೇಶಿಸಿದ ಒಕ್ಕಲಿಗರ ಪರ ವಕೀಲ ಮುಕುಲ್‌ ರೋಹಟಗಿ (Mukul Rohatgi), ನಮ್ಮ ಪ್ರತಿಕ್ರಿಯೆ ಕೇಳದೇ ಯಾವುದೇ ಮಧ್ಯಂತರ ಆದೇಶ ಪಾಸು ಮಾಡಬೇಡಿ ಎಂದು ಕೋರಿದರು.

ರಾಜ್ಯದ ಒಳಮೀಸಲಾತಿಯಿಂದ ದೇಶದಲ್ಲಿ ದೊಡ್ಡ ಬದಲಾವಣೆ: ಸಿಎಂ ಬೊಮ್ಮಾಯಿ

ಈ ವೇಳೆ ಮೀಸಲು ನಿರ್ಣಯದ ಬಗ್ಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ ಪೀಠ, ನಿರ್ಧಾರವನ್ನು ಬೆಂಬಲಿಸಲು ಹೆಚ್ಚಿನ ಪುರಾವೆಗಳನ್ನು ಒದಗಿಸುವಂತೆ ಕೇಳಿತು. ಹಿಂದಿನ ಕಾಂಗ್ರೆಸ್‌ ಸರ್ಕಾರವು ಶೇ.4 ಮುಸ್ಲಿಂ ಮೀಸಲನ್ನು ಯಾವ ಆಧಾರದಲ್ಲಿ ನೀಡಿತು ಎಂಬುದನ್ನೂ ವಿವರಿಸುವಂತೆ ಸೂಚಿಸಿತು. ಇದೇ ವೇಳೆ, ಕರ್ನಾಟಕದ ನಿರ್ಧಾರವು 1992ರಲ್ಲಿ ತಾನು ವಿಧಿಸಿದ ಶೇ.50 ಮೀಸಲು ಮಿತಿಯನ್ನು ಮೀರಿದೆ ಎಂಬುದನ್ನು ಕೋರ್ಟು ಗಮನಿಸಿತು. ಈ ಮಿತಿಯ ಯಾವುದೇ ಉಲ್ಲಂಘನೆಗೆ ಅಸಾಮಾನ್ಯ ಸಂದರ್ಭಗಳು ಮತ್ತು ಅಸಾಧಾರಣ ಕಾರಣಗಳು ಬೇಕಾಗುತ್ತವೆ ಎಂದಿತು.

ನಮ್ಮ ಮುಂದಿನ ದಾಖಲೆ ಗಮನಿಸಿದಾಗ, ಈ ನಿರ್ಧಾರಕ್ಕೆ ಮನ್ನಣೆ ಸಿಗದು ಎಂದು ಗೊತ್ತಿದ್ದರೂ ಮಾಡಿದಂತಿದೆ. ಆಧಾರ ರಹಿತ ಹಾಗೂ ದೋಷಪೂರಿತ ಎಂದು ಕಂಡು ಬರುತ್ತಿದೆ ಎಂದಿತು. ಬಳಿಕ ಏ.18ಕ್ಕೆ ವಿಚಾರಣೆ ಮುಂದೂಡಿದ ಪೀಠ, ಅರ್ಜಿಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕರ್ನಾಟಕ, ಒಕ್ಕಲಿಗರು ಮತ್ತು ಲಿಂಗಾಯತಗಳ ಪ್ರತಿನಿಧಿಗಳನ್ನು ಕೇಳಿತು. ಮುಂದಿನ ಆದೇಶದವರೆಗೆ ತನ್ನ ನಿರ್ಧಾರದ ಆಧಾರದ ಮೇಲೆ ಯಾವುದೇ ನೇಮಕಾತಿ ಅಥವಾ ಪ್ರವೇಶಗಳನ್ನು ಮಾಡದಂತೆ ನಿರ್ದೇಶನ ನೀಡಿತು.

ಏನಿದು ಪ್ರಕರಣ?:

ಇತ್ತೀಚೆಗೆ ಕರ್ನಾಟಕ ಮುಸ್ಲಿಮರಿಗೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾ ಅಡಿ ಶಿಕ್ಷಣ ಹಾಗೂ ಉದ್ಯೋಗದಲ್ಲಿದ್ದ ಶೇ.4ರ ಮೀಸಲಾತಿಯನ್ನು ರದ್ದುಪಡಿಸಿ, ಅದನ್ನು ಒಕ್ಕಲಿಗರು ಹಾಗೂ ಲಿಂಗಾಯತರಿಗೆ ತಲಾ ಶೇ.2ರಷ್ಟುಹಂಚಿತ್ತು. ಮುಸ್ಲಿಮರನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ ಕೋಟಾ ಅಡಿ ಸೇರ್ಪಡೆ ಮಾಡಿತ್ತು. ಇದೇ ವೇಳೆ ಬೇರೆ ಬೇರೆ ವರ್ಗಗಳ ಮೀಸಲಾತಿಯಲ್ಲಿ ಇನ್ನೂ ಕೆಲ ಬದಲಾವಣೆಗಳನ್ನು ಮಾಡಿತ್ತು. ಅದರೊಂದಿಗೆ ರಾಜ್ಯದಲ್ಲೀಗ ಮೀಸಲಾತಿ ಮಿತಿ ಶೇ.57ಕ್ಕೆ ಏರಿಕೆಯಾಗಿದೆ. ಈ ಪೈಕಿ ಮುಸ್ಲಿಂ ಮೀಸಲು ರದ್ದತಿ ನಿರ್ಧಾರವನ್ನು ಕಪಿಲ್‌ ಸಿಬಲ್‌ ಹಾಗೂ ಇತರರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಕೋರ್ಟ್‌ ಹೇಳಿದ್ದೇನು?

 ಶೇ.50ರ ಮೀಸಲಾತಿ ಮಿತಿಯನ್ನು ಕರ್ನಾಟಕದಲ್ಲಿ ಉಲ್ಲಂಘಿಸಲಾಗಿದೆ

ಮಿತಿಯ ಉಲ್ಲಂಘನೆಗೆ ಅಸಾಮಾನ್ಯ, ಅಸಾಧಾರಣ ಕಾರಣ ಬೇಕಾಗುತ್ತವೆ

ನಿರ್ಧಾರಕ್ಕೆ ಮನ್ನಣೆ ಸಿಗದು ಎಂದು ಗೊತ್ತಿದ್ದರೂ ಮೀಸಲು ಕೊಟ್ಟಿರುವಂತಿದೆ

ಇದು ಆಧಾರರಹಿತ, ದೋಷಪೂರಿತವಾಗಿರುವಂತೆ ಕಂಡುಬರುತ್ತಿದೆ: ಕೋರ್ಟ್

 ಮೀಸಲು ನಿರ್ಧಾರವನ್ನು ಬೆಂಬಲಿಸಲು ಹೆಚ್ಚಿನ ಪುರಾವೆಗಳನ್ನು ಒದಗಿಸಬೇಕು

click me!