
ನವದೆಹಲಿ(ಜೂ.17): ನೀಲಿ ಆರ್ಥಿಕತೆಯತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ಅಂದಾಜು 4077 ಕೋಟಿ ರು. ಮೊತ್ತದ ಆಳಸಮುದ್ರ ಅಧ್ಯಯನ, ಸಂಶೋಧನಾ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಈ ಮೂಲಕ ಇಂಥ ತಂತ್ರಜ್ಞಾನ ಸಿದ್ಧಿಸಿಕೊಂಡ ವಿಶ್ವದ ಕೇವಲ 6ನೇ ದೇಶವಾಗುವತ್ತ ದಾಪುಗಾಲಿಟ್ಟಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಆಳ ಸಮುದ್ರ ಯೋಜನೆಗೆ ಅನುಮೋದನೆ ನೀಡಲಾಗಿದೆ. ‘ಮುಂದಿನ 5 ವರ್ಷಗಳಲ್ಲಿ ಯೋಜನೆ ಹಂತಹಂತವಾಗಿ ಜಾರಿಯಾಗಲಿದೆ. ಇದು ನೀಲಿ ಆರ್ಥಿಕತೆಗೆ ಬೆಂಬಲ ನೀಡುವುದರ ಜೊತೆಗೆ ಭಾರತವನ್ನು ಹೊಸ ಯುಗದತ್ತ ಕೊಂಡೊಯ್ಯಲಿದೆ’ ಎಂದು ಅನುಮೋದನೆ ಮಾಹಿತಿ ನೀಡಿದ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಕಳೆದ ಬಜೆಟ್‌ನಲ್ಲೇ ಈ ಯೋಜನೆ ಘೋಷಿಸಿದ್ದ ಸರ್ಕಾರ, ಇದಕ್ಕೆ 4000 ಕೋಟಿ ರು. ನಿಗದಿಪಡಿಸಿತ್ತು.
ಏನಿದು ಯೋಜನೆ?:
ಆಳ ಸಮುದ್ರದಲ್ಲಿ ಸಂಪನ್ಮೂಲಗಳಿಗಾಗಿ ಶೋಧನೆ, ಆಳ ಸಮುದ್ರ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಉದ್ದೇಶದಿಂದ ಕೇಂದ್ರ ಭೂವಿಜ್ಞಾನ ಸಚಿವಾಲಯವು ಈ ಆಳ ಸಮುದ್ರ ಯೋಜನೆ ರೂಪಿಸಿದೆ.
ಜೊತೆಗೆ ಹವಾಮಾನ ಬದಲಾವಣೆಯಿಂದ ಏನಾದರೂ ಬದಲಾವಣೆ ಆಗಿದ್ದರೆ ಆ ಬಗ್ಗೆ ಅಧ್ಯಯನ, ಆಳ ಸಮುದ್ರದಲ್ಲಿನ ಜೀವವೈವಿಧ್ಯತೆಯ ಬಗ್ಗೆಯೂ ಅಧ್ಯಯನ ನಡೆಸಲಿದೆ. ಸಮುದ್ರದಲ್ಲಿ 6000 ಮೀಟರ್ (21000 ಅಡಿ) ಆಳದಲ್ಲಿ ಈ ಸಂಶೋಧನೆ ನಡೆಯಲಿದೆ.
6ನೇ ದೇಶ:
ಹಾಲಿ ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಚೀನಾ ದೇಶಗಳು ಮಾತ್ರವೇ ಇಂಥ ತಂತ್ರಜ್ಞಾನ ಹೊಂದಿವೆ. ಈ ಸಾಲಿಗೆ ಈಗ ಭಾರತವೂ ಸೇರಲಿದೆ.
ಯೋಜನೆಯ ಮುಖ್ಯಾಂಶ
- ಆಳ ಸಮುದ್ರ ಗಣಿಗಾರಿಕೆ ಮತ್ತು ಇದಕ್ಕೆ ಬೇಕಾದ ವಾಹನ ಅಭಿವೃದ್ಧಿ
- ಸಮುದ್ರ ಹವಾಮಾನ ಬದಲಾವಣೆ ಸಲಹಾ ಸೇವೆಗಳ ಅಭಿವೃದ್ಧಿ
- ಆಳ ಸಮುದ್ರ ಜೀವವೈವಿಧ್ಯತೆಯ ಸಂಶೋಧನೆಗಾಗಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂರಕ್ಷಣೆ
- ಆಳ ಸಮುದ್ರ ಸಮೀಕ್ಷೆ ಮತ್ತು ಸಂಶೋಧನೆ
- ಸಮುದ್ರದಿಂದ ಇಂಧನ ಮತ್ತು ಸಿಹಿನೀರು ಹೊರತೆಗೆಯುವ ತಂತ್ರಜ್ಞಾನ ಅಭಿವೃದ್ಧಿ
- ಸಮುದ್ರ ಜೀವಶಾಸ್ತ್ರ ಕುರಿತು ಅತ್ಯಾಧುನಿಕ ಸಮುದ್ರ ಕೇಂದ್ರ ಆರಂಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ