13 ರಾಜ್ಯಗಳಲ್ಲಿ ಪೌರತ್ವ ಕಿಚ್ಚು : ಹಿಂಚಾಚಾರ

Kannadaprabha News   | Asianet News
Published : Dec 20, 2019, 07:38 AM ISTUpdated : Dec 20, 2019, 08:55 AM IST
13 ರಾಜ್ಯಗಳಲ್ಲಿ ಪೌರತ್ವ ಕಿಚ್ಚು : ಹಿಂಚಾಚಾರ

ಸಾರಾಂಶ

ದೇಶದಲ್ಲಿ ಪೌರತ್ವ ಕಾಯ್ದೆ ಕಿಚ್ಚು ಭುಗಿಲೆದ್ದಿದೆ. 13 ರಾಜ್ಯಗಳಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ತೀವ್ರ ಪ್ರತಿಭಟನೆ ನಡೆದಿದ್ದು, ಹಿಂಸಾರೂಪ ತಾಳಿದೆ. 

ನವದೆಹಲಿ [ಡಿ.20]:  ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆರಂಭವಾಗಿರುವ ಪ್ರತಿಭಟನೆಗಳು ಗುರುವಾರ ದೇಶವ್ಯಾಪಿಯಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಿದ ಹೊರತಾಗ್ಯೂ ಉತ್ತರ ಪ್ರದೇಶ, ಬಿಹಾರ, ಗುಜರಾತ್‌ ಹಾಗೂ ಕರ್ನಾಟಕ ಸೇರಿದಂತೆ ಕೆಲವೆಡೆ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿವೆ. ಹಿಂಸಾಚಾರದಲ್ಲಿ ಲಖನೌನಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಈ ದಿನ ಪ್ರತಿಪಕ್ಷಗಳು ಹಾಗೂ ಹಲವು ಸಂಘಟನೆಗಳು ದೇಶದ ಹಲವೆಡೆ ಪ್ರತಿಭಟನೆಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಹಿಂಸಾಚಾರ ಉಂಟಾಗಬಹುದು ಎಂಬ ಆತಂಕದಿಂದ ರಾಜ್ಯ ಸರ್ಕಾರಗಳು ನಿಷೇಧಾಜ್ಞೆ ಜಾರಿಗೆ ತಂದಿದ್ದವು. ಅದರ ಹೊರತಾಗ್ಯೂ ಗುಂಪು ಸೇರಿ ಪ್ರತಿಭಟನೆ ನಡೆಸಿದ ಜನರು, ಹಲವು ಕಡೆ ಹಿಂಸೆಗೆ ಇಳಿದರು. ಇದರ ಪರಿಣಾಮ ದಿಲ್ಲಿ ಸೇರಿದಂತೆ ಹಲವು ಕಡೆ ಮೊಬೈಲ್‌ ಹಾಗೂ ಇಂಟರ್ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಪೊಲೀಸರು ಉದ್ರಿಕ್ತರನ್ನು ಚದುರಿಸಲು ಗೋಲಿಬಾರ್‌, ಲಾಠಿಪ್ರಹಾರ, ಅಶ್ರುವಾಯು- ಇತ್ಯಾದಿಗಳನ್ನು ಪ್ರಯೋಗಿಸಬೇಕಾಯಿತು.

ಉ.ಪ್ರ.ದ 2 ಕಡೆ ಕಿಚ್ಚು, 1 ಸಾವು: ಉತ್ತರಪ್ರದೇಶದ ರಾಜಧಾನಿ ಲಖನೌ ಹಾಗೂ ಸಂಭಲ್‌ ನಗರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಲಖನೌನ ಮಾದೇಗಂಜ್‌ನಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ 12ಕ್ಕೂ ಹೆಚ್ಚು ಬೈಕ್‌ಗಳು, ಕಾರು, ವಾಹನಗಳಿಗೆ ಬೆಂಕಿ ಹಚ್ಚಿದರು. ಟೀವಿ ಮಾಧ್ಯಮದ ಒಂದು ನೇರಪ್ರಸಾರ ವಾಹನವೂ ಬೆಂಕಿಗೆ ಆಹುತಿಯಾಯಿತು. ಪ್ರತಿಭಟನೆ ವೇಳೆ ಗೋಲಿಬಾರ್‌ನಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ ಹಾಗೂ ಮೂವರಿಗೆ ಗಾಯಗಳಾಗಿವೆ. ಹಿಂಸೆ ನಡೆಸಿದ 20 ಜನರನ್ನು ಬಂಧಿಸಲಾಗಿದೆ. ಇನ್ನು ಸಂಭಲ್‌ನಲ್ಲಿ ಸರ್ಕಾರಿ ಬಸ್ಸಿಗೆ ಬೆಂಕಿ ಹಚ್ಚಿ ಇನ್ನೊಂದನ್ನು ಕಲ್ಲು ತೂರಿ ಪ್ರತಿಭಟನಾಕಾರರು ಜಖಂ ಮಾಡಿದರು. ಪೊಲೀಸ್‌ ಠಾಣೆ ಮೇಲೆ ಕೂಡ ಕಲ್ಲು ತೂರಾಟ ಮಾಡಿದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ‘ದಂಗೆಕೋರರನ್ನು ಸಿಸಿಟೀವಿ ಮೂಲಕ ಗುರುತಿಸಲಾಗುತ್ತದೆ. ಕೃತ್ಯಕ್ಕಾಗಿ ಅವರು ಭಾರೀ ಬೆಲೆ ತೆರಬೇಕಾಗುತ್ತದೆ. ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಎಚ್ಚರಿಸಿದ್ದಾರೆ.

ದಿಲ್ಲಿಯಲ್ಲಿ ಗಣ್ಯರು ವಶಕ್ಕೆ:

ಪ್ರತಿಭಟನೆಗಳ ಹೊರತಾಗಿಯೂ ದಿಲ್ಲಿಯಲ್ಲಿ ಪರಿಸ್ಥಿತಿ ಬಹುತೇಕ ಶಾಂತವಾಗಿತ್ತು. ಪ್ರತಿಭಟನಾಕಾರರು ಪೊಲೀಸರಿಗೆ ಶಾಂತಿಯ ಸಂಕೇತವಾಗಿ ಗುಲಾಬಿ ಹೂಗಳನ್ನು ನೀಡಿ ‘ಗಾಂಧಿಗಿರಿ’ ನಡೆಸಿದರು. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗೆ ಇಳಿದ ಪ್ರತಿಭಟನಾಕಾರರನ್ನು ಕೆಂಪುಕೋಟೆ ಬಳಿ ಪೊಲೀಸರು ವಶಕ್ಕೆ ಪಡೆದರು. ಇವರಲ್ಲಿ ಸ್ವರಾಜ್‌ ಅಭಿಯಾನ್‌ ಅಧ್ಯಕ್ಷ ಯೋಗೇಂದ್ರ ಯಾದವ್‌, ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ ಇದ್ದರು. ಮಂಡಿ ಹೌಸ್‌ ಬಳಿ ಪ್ರತಿಭಟನೆ ನಡೆಸಿದ ಎಡರಂಗ ನಾಯಕರಾದ ಸೀತಾರಾಂ ಯೆಚೂರಿ, ನಿಲೋತ್ಪಲ್‌ ಬಸು, ಡಿ. ರಾಜಾ ಹಾಗೂ ಬೃಂದಾ ಕಾರಟ್‌ರನ್ನು ಪೊಲೀಸರು ವಶಕ್ಕೆ ಪಡೆದರು. ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವರನ್ನು ಚದುರಿಸಲಾಯಿತು. ದಿಲ್ಲಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಏರ್‌ಟೆಲ್‌ ಸೇರಿ ಕೆಲವು ಕಂಪನಿಗಳು ಇಂಟರ್ನೆಟ್‌ ಸೇವೆ ನಿಲ್ಲಿಸಿದವು. 20 ಮೆಟ್ರೋ ರೈಲು ನಿಲ್ದಾಣಗಳನ್ನು ಬಂದ್‌ ಮಾಡಲಾಯಿತು.

ಬಿಹಾರ, ಗುಜರಾತ್‌:

ಬಿಹಾರದ ಪಟನಾ ಹಾಗೂ ಜೆಹಾನಾಬಾದ್‌ನಲ್ಲಿ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು. ಪಟನಾದಲ್ಲಿ ಜನ ಅಧಿಕಾರ ಪಕ್ಷದ ಕಾರ್ಯಕರ್ತರು ಹಾಗೂ ಎಡರಂಗ ಬೆಂಬಲಿತ ಕಾರ್ಯಕರ್ತರು ಬಸ್‌ ಹಾಗೂ ಕಾರುಗಳನ್ನು ಧ್ವಂಸಗೊಳಿಸಿದರು. ರಸ್ತೆ ಮಧ್ಯೆ ಟೈರಿಗೆ ಬೆಂಕಿ ಹಚ್ಚಿದರು. ಹಳಿ ಮೇಲೆ ಕುಳಿತು ರೈಲು ತಡೆದರು. ಇದೇ ವೇಳೆ ಗುಜರಾತ್‌ನ ಪ್ರಮುಖ ನಗರ ಅಹಮದಾಬಾದ್‌ನ ಸರ್ದಾರ್‌ ಬಾಗ್‌ನಲ್ಲಿ ಹಿಂಸೆಗಿಳಿದ ಜನರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ಮಾಡಿದರು.

ಬಂಗಾಳದಲ್ಲಿ ದೀದಿ ನೇತೃತ್ವ:

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ನಡೆದ ಪ್ರತಿಭಟನೆಗಳ ನೇತೃತ್ವವನ್ನು ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ವಹಿಸಿಕೊಂಡಿದ್ದು ವಿಶೇಷ. ಬಂಗಾಳದ ದಿನಾಜ್‌ಪುರದಲ್ಲಿ ಪ್ರತಿಭಟನೆ ವೇಳೆ ಕಚ್ಚಾ ಬಾಂಬ್‌ ಎಸೆದ ಇಬ್ಬರನ್ನು ಬಂಧಿಸಲಾಗಿದೆ. ಇನ್ನು ಕೋಲ್ಕತಾದಲ್ಲೇ ಎಡಪಕ್ಷಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು.

ಮಹಾರಾಷ್ಟ್ರದ 3 ಕಡೆ:

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಆಗಸ್ಟ್‌ ಕ್ರಾಂತಿ ಮೈದಾನದಲ್ಲಿ ಸಾವಿರಾರು ಜನರು ಪ್ರತಿಭಟಿಸಿದರು. ನಾಗಪುರ ಹಾಗೂ ಪುಣೆಯಲ್ಲಿ ಕೂಡ ಪೌರತ್ವ ಕಾಯ್ದೆ ವಿರೋಧಿ ಹೋರಾಟ ನಡೆದಿವೆ.

ಅಸ್ಸಾಂ, ತೆಲಂಗಾಣ, ತಮಿಳ್ನಾಡು, ಇತರೆಡೆ:

ಹೈದರಾಬಾದ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಪ್ರತಿಭಟನೆಗೆ ಇಳಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು. ತಮಿಳುನಾಡು ರಾಜಧಾನಿ ಚೆನ್ನೈನಲ್ಲೂ ಶಾಂತ ಪ್ರತಿಭಟನೆಗಳು ನಡೆದವು. ಅಸ್ಸಾಂ, ಮೇಘಾಲಯ ಸೇರಿ ಅನೇಕ ಈಶಾನ್ಯ ರಾಜ್ಯಗಳಲ್ಲೂ ಪ್ರತಿಭಟನೆಗಳು ಮುಂದುವರಿದಿವೆ. ಅಸ್ಸಾಂನಲ್ಲಿ ಇಂಟರ್ನೆಟ್‌ ಸೇವೆ ನಿಲ್ಲಿಸಲಾಗಿದ್ದು, ಶುಕ್ರವಾರ ಪುನಾರಂಭವಾಗಲಿದೆ ಎಂದು ಸರ್ಕಾರ ಹೇಳಿದೆ.

ಗುರುವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳಲ್ಲಿ ಕೆಳಕಂಡ ಈ ಸ್ಥಳಗಳು ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ‘ಟ್ರಬಲ್‌ ಸ್ಪಾಟ್‌’ ಆಗಿ ಕಾಡಿದವು.

ದಿಲ್ಲಿ: ಮಂಡಿ ಹೌಸ್‌, ಕೆಂಪುಕೋಟೆ, ಜಂತರ್‌ ಮಂತರ್‌

ಉತ್ತರಪ್ರದೇಶ: ಲಖನೌ, ಸಂಭಲ್‌

ಬಿಹಾರ: ಪಟನಾ, ಜೆಹಾನಾಬಾದ್‌

ಕರ್ನಾಟಕ: ಬೆಂಗಳೂರು, ಮಂಗಳೂರು, ಕಲಬುರಗಿ

ತೆಲಂಗಾಣ: ಹೈದರಾಬಾದ್‌

ಪ.ಬಂಗಾಳ: ಕೋಲ್ಕತಾ

ಗುಜರಾತ್‌: ಅಹಮದಾಬಾದ್‌

ಮಹಾರಾಷ್ಟ್ರ: ಮುಂಬೈ

ತಮಿಳುನಾಡು: ಚೆನ್ನೈ

ಅಸ್ಸಾಂ: ಗುವಾಹಟಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!