* ಪ್ರತಿಯೊಬ್ಬ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡಬೇಕು
* ಸಿಎಎ, NRCಯಿಂದ ಮುಸ್ಲಿಮರಿಗೆ ಸಮಸ್ಯೆ ಇಲ್ಲ: ಭಾಗವತ್ ಸ್ಪಷ್ಟನೆ
* ಈ ವಿಷಯವನ್ನು ವೋಟಿಗಾಗಿ ರಾಜಕೀಯ ಮಾಡಲಾಗುತ್ತಿದೆ
ನವದೆಹಲಿ(ಜು.22): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯಿಂದ ಭಾರತೀಯ ಮುಸ್ಲಿಮರಿಗೆ ತೊಂದರೆ ಇಲ್ಲ. ಈ ವಿಷಯವನ್ನು ವೋಟಿಗಾಗಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಬುಧವಾರ ಗುವಾಹಟಿ ವಿಶ್ವವಿದ್ಯಾಲಯ ಪ್ರೊ.ಗೋಪಾಲ್ ಮಹಾತ್ಮ ಅವರ ಪುಸ್ತಕ ಬಿಡುಗಡೆಗೆ ಆಗಮಿಸಿದ್ದ ಅವರು, ‘1950ರ ನೆಹರು ಲಿಖಾಯತ್ ಒಪ್ಪಂದದ ಪ್ರಕಾರ ಪ್ರತಿಯೊಬ್ಬ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡಬೇಕು. ಭಾರತ ಇದನ್ನು ಪಾಲಿಸುತ್ತಿದೆ. ಪಾಕಿಸ್ತಾನ ವಿಫಲವಾಗಿದೆ’ ಎಂದು ಹೇಳಿದರು.
ಸಿಎಎ ಇರುವುದು ನೆರೆಯ ದೇಶಗಳಿಂದ ಧರ್ಮದ ಕಾರಣಕ್ಕೆ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದವರಿಗಾಗಿ. ಹಾಗೆಯೇ ಎನ್‌ಆರ್‌ಸಿ ಅಂದರೆ ಭಾರತೀಯರನ್ನು ಗುರುತಿಸುವ ಪ್ರಕ್ರಿಯೆ ಎಂದರು.
ಇದೇ ವೇಳೆ ಜಾತ್ಯತೀತತೆ, ಸಮಾಜವಾದ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನಾವು ಯಾರಿಂದಲೂ ಪಾಠ ಕಲಿಯಬೇಕಿಲ್ಲ. ನಮ್ಮ ಸಂವಿಧಾನ ಕರ್ತವ್ಯ ಮತ್ತು ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ. ಹಕ್ಕುಗಳೆಲ್ಲವೂ ಬೇಕು, ಆದರೆ ಕರ್ತವ್ಯ ನಿರ್ವಹಿಸಲು ಆಗುವುದಿಲ್ಲ ಎಂದಾಗ ಸಮಸ್ಯೆ ಉದ್ಭವಿಸುತ್ತವೆ ಎಂದು ಹೇಳಿದರು.