ಫೆಬ್ರವರಿ ವೇಳೆ 65 ಕೋಟಿ ಭಾರತೀಯರಿಗೆ ಸೋಂಕು!| ಈಗಾಗಲೇ 43 ಕೋಟಿ ಜನರಿಗೆ ಸೋಂಕು ಹಬ್ಬಿರುವ ಸಾಧ್ಯತೆ| ಬಹುತೇಕ ಪ್ರಕರಣ ದಾಖಲಾಗದೇ ಇರುವ ಸಂಭವ ಹೆಚ್ಚು
ನವದೆಹಲಿ(ಅ.20): 2021ರ ಫೆಬ್ರುವರಿ ವೇಳೆಗೆ ಭಾರತದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂಬ ಶುಭ ಸುದ್ದಿಯೊಂದನ್ನು ನೀಡಿದ್ದ ತಜ್ಞರ ಸಮಿತಿಯೊಂದು, ಅದೇ ವೇಳೆಗೆ ದೇಶದ ಅರ್ಧ ಭಾಗ ಜನರು ಅಂದರೆ 65 ಕೋಟಿ ಜನರಿಗೆ ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಮಾಹಿತಿಯನ್ನು ನೀಡಿದೆ.
ದೇಶದಲ್ಲಿ ಕೊರೋನಾ ಸೋಂಕಿನ ಮುನ್ನೋಟದ ಕುರಿತು ವರದಿ ನೀಡಲು ರಚಿಸಲಾಗಿದ್ದ ಹೈದ್ರಾಬಾದ್ ಐಐಟಿಯ ಪ್ರೊಫೆಸರ್ ಡಾ. ವಿದ್ಯಾಸಾಗರ್ ನೇತೃತ್ವದ 12 ಜನರ ಸಮಿತಿಯಲ್ಲಿ ಒಬ್ಬರಾಗಿರುವ ಕಾನ್ಪುರ ಐಐಟಿಯ ಪ್ರೊಫೆಸರ್ ಮಣೀಂದ್ರ ಅಗರ್‌ವಾಲ್ ಇಂಥದ್ದೊಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲೇ ಭಾರತದಲ್ಲಿ ಸೋಂಕು ಗರಿಷ್ಠ ಮಟ್ಟಕ್ಕೆ ಮುಟ್ಟಿಇದೀಗ ಇಳಿಕೆ ಹಾದಿಯಲ್ಲಿದೆ. ನಮ್ಮ ಲೆಕ್ಕಾಚಾರದ ಅನ್ವಯ ಪ್ರಸಕ್ತ ದೇಶದ ಶೇ.30ರಷ್ಟುಜನರಿಗೆ ಅಂದರೆ ಅಂದಾಜು 44 ಕೋಟಿ ಜನರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಮುಂದಿನ ಫೆಬ್ರುವರಿ ವೇಳೆಗೆ ಸೋಂಕಿತರ ಪ್ರಮಾಣ ಶೇ.50ಕ್ಕೆ ಅಂದರೆ 65 ಕೋಟಿಗೆ ತಲುಪಲಿದೆ. ಆ ಮೂಲಕ ಸೋಂಕು ನಿಯಂತ್ರಣಕ್ಕೆ ನೆರವಾಗಲಿದೆ ಎಂದು ಮಣೀಂದ್ರ ಹೇಳಿದ್ದಾರೆ.
ಸಂಭನವೀಯ ಸೋಂಕಿತರ ಲೆಕ್ಕಾಚಾರಕ್ಕೆ ದೇಶಾದ್ಯಂತ ಸೆರೋ ಸರ್ವೇ ನಡೆಸಲಾಗುತ್ತಿದೆಯಾದರೂ, ಅದು ಅಷ್ಟುಸೂಕ್ತ ಪ್ರಮಾಣದಲ್ಲಿಲ್ಲ. ನಾವು ಕಂಪ್ಯೂಟರ ಮಾದರಿ ಆಧರಿಸಿ ಹಾಕಿರುವ ಲೆಕ್ಕಾಚಾರದ ಅನ್ವಯ ಫೆಬ್ರುವರಿ ವೇಳೆಗೆ ದೇಶದ ಒಟ್ಟು ಜನಸಂಖ್ಯೆ 130 ಕೋಟಿ ಪೈಕಿ 65 ಕೋಟಿ ಜನರಿಗೆ ಸೋಂಕು ತಗುಲಿರಲಿದೆ. ಆದರೆ ಈ ಪೈಕಿ ಬಹುತೇಕ ಪ್ರಕರಣಗಳು ದಾಖಲಾಗದೇ ಹೋಗುವ ಸಾಧ್ಯತೆ ಅಧಿಕ ಎಂದು ಅವರು ಹೇಳಿದ್ದಾರೆ.