ಭಾರತದ ಗಡಿಯಲ್ಲಿ ನುಸುಳಿದ ಚೀನಾ ಯೋಧನ ಬಂಧನ| ಡೆಮ್‌ಚೋಕ್ ಗಡಿಯಲ್ಲಿ ಸೆರೆ| ಸೇನಾ ದಾಖಲೆ, ವೈದ್ಯಕೀಯ ಸಲಕರಣೆ ಪತ್ತೆ| ಗೂಢಚಾರಿಕೆಗಾಗಿ ನುಸುಳಿದನೇ ಎಂದು ವಿಚಾರಣೆ| ಔಪಚಾರಿಕತೆ ಮುಗಿ ಶೀಘ್ರ ಚೀನಾಗೆ ಹಸ್ತಾಂತರ: ಭಾರತ
ನವದೆಹಲಿ(ಅ.20): ಭಾರತ-ಚೀನಾ ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ ಸೃಷ್ಟಿಆಗಿರುವ ನಡುವೆಯೇ ಪೂರ್ವ ಲಡಾಖ್‌ನ ಡೆಮ್‌ಚೋಕ್ ಗಡಿ ವಾಸ್ತವ ರೇಖೆಯೊಳಗೆ ನುಸುಳಿಬಂದ ಚೀನಾ ಯೋಧನೊಬ್ಬನನ್ನು ಭಾರತದ ಸೈನಿಕರು ಸೋಮವಾರ ಬಂಧಿಸಿದ್ದಾರೆ. ವಾಂಗ್ ಯಾ ಲಾಂಗ್ ಎಂಬುವರೇ ಗಡಿ ವಾಸ್ತವ ರೇಖೆಯೊಳಗೆ ನುಸುಳಿ ಬಂದ ಚೀನೀ ಸೈನಿಕ. ಈತನ ಬಳಿ ಕೆಲವು ಸೇನಾ ದಾಖಲೆಗಳು ಪತ್ತೆಯಾಗಿವೆ. ಈತ ಸೇನಾ ಗೂಢಚರ ಇರಬಹುದೇ ಎಂಬ ಅನುಮಾನದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಆದರೆ ಇದಕ್ಕೂ ಮುನ್ನ ಆತನನ್ನು ವಶಕ್ಕೆ ಪಡೆಯುತ್ತಲೇ ಆತನಿಗೆ ಆಮ್ಲಜನಕ, ಆಹಾರ ಹಾಗೂ ಕೊರೆವ ಚಳಿಯಿಂದ ರಕ್ಷಿಸುವ ಬೆಚ್ಚಗಿನ ಬಟ್ಟೆಯಂತಹ ವಸ್ತುಗಳನ್ನು ಒದಗಿಸುವ ಮೂಲಕ ಭಾರತೀಯ ಸೇನಾ ಪಡೆಗಳು ಮಾನವೀಯತೆ ಮೆರೆದಿವೆ.
undefined
ಡೆಮ್‌ಚೋಕ್ ಸೇರಿದಂತೆ ಗಡಿಯಲ್ಲಿ ಭಾರತ-ಚೀನಾ ಉಭಯ ಪಡೆಗಳ 50 ಸಾವಿರ ಸೈನಿಕರು ಜಮಾವಣೆಗೊಂಡಿದ್ದಾರೆ. ಇಂಥ ಸ್ಥಿತಿಯಿರುವಾಗ ಈತ ಏಕೆ ನುಸುಳಿ ಬಂದ ಎಂಬುದು ಯಕ್ಷಪ್ರಶ್ನೆಯಾಗಿದೆ. ವಿಚಾರಣೆ ವೇಳೆ ತಾನು ಕಳೆದುಹೋಗಿದ್ದ ಯಾಕ್ ಹುಡುಕುವ ವೇಳೆ ದಾರಿತಪ್ಪಿ ಗಡಿ ದಾಟಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
ಈತ ಸೆರೆ ಸಿಕ್ಕ ಬೆನ್ನಲ್ಲೇ ಚೀನಾ ಸೇನೆಯು ಭಾರತಕ್ಕೆ ಈತನ ಇರುವಿಕೆಯ ಬಗ್ಗೆ ಮಾಹಿತಿ ಬಯಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ‘ಉಭಯ ದೇಶಗಳ ನಡುವಿನ ಒಪ್ಪಂದದ ಅನುಸಾರ ಎಲ್ಲ ಔಪಚಾರಿಕತೆಯನ್ನು ಮುಗಿಸಿದ ಬಳಿಕ ಈತನನ್ನು ಚೀನಾಗೆ ಹಸ್ತಾಂತರಿಸಲಾಗುವುದು’ ಎಂದು ಹೇಳಿದೆ. ಮುಂದಿನ ವಾರ ಭಾರತ ಹಾಗೂ ಚೀನಾ ಕಮಾಂಡರ್ ಮಟ್ಟದ ಸಭೆ ನಡೆಯಲಿದ್ದು, ಆ ವೇಳೆ ಈತನ ಹಸ್ತಾಂತರ ನಡೆಯುವ ಸಾಧ್ಯತೆ ಇದೆ.