ತಿಂಗಳ ಒಳಗೆ ಬ್ರಿಟನ್‌ನಿಂದ ಮಲ್ಯ ಗಡೀಪಾರು ಸಂಭವ..!

By Kannadaprabha News  |  First Published May 15, 2020, 8:29 AM IST

ಮದ್ಯದ ದೊರೆ ವಿಜಯ್‌ ಮಲ್ಯಗೆ ಭಾರತಕ್ಕೆ ಗಡೀಪಾರು ಸನ್ನಿಹಿತವಾಗಿದೆ. ಬ್ರಿಟನ್‌ನಲ್ಲಿ ವಾಸವಾಗಿರುವ ವಿಜಯ್‌ ಮಲ್ಯ ಎಲ್ಲವೂ ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಲಂಡನ್‌(ಮೇ.15): ಭಾರತದ ಬ್ಯಾಂಕುಗಳಿಗೆ 9000 ಕೋಟಿ ರು.ಗಿಂತ ಹೆಚ್ಚು ಮೊತ್ತದ ಸಾಲ ಮರುಪಾವತಿ ಮಾಡದೆ ಬ್ರಿಟನ್ನಿನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್‌ ಮಲ್ಯಗೆ ಭಾರತಕ್ಕೆ ಗಡೀಪಾರಾಗುವುದನ್ನು ತಪ್ಪಿಸಿಕೊಳ್ಳಲು ಇದ್ದ ಕೊನೆಯ ಅವಕಾಶವೂ ಕೈತಪ್ಪಿಹೋಗಿದೆ. 

"

Latest Videos

ಭಾರತಕ್ಕೆ ಗಡೀಪಾರು ಮಾಡುವಂತೆ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ ನೀಡಿದ್ದ ಆದೇಶವನ್ನು ಬ್ರಿಟನ್ನಿನ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಕೋರಿ ಮಲ್ಯ ಸಲ್ಲಿಸಿದ್ದ ಅರ್ಜಿ ಗುರುವಾರ ತಿರಸ್ಕೃತವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಭಾರತಕ್ಕೆ ಮಲ್ಯ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ 28 ದಿನದೊಳಗೆ ಆರಂಭವಾಗಲಿದೆ.

ಭಾರತಕ್ಕೆ ಗಡೀಪಾರು ಮಾಡುವ ಆದೇಶವನ್ನು ವಜಾಗೊಳಿಸಲು ಲಂಡನ್‌ ಹೈಕೋರ್ಟ್‌ ಕೆಲ ವಾರಗಳ ಹಿಂದಷ್ಟೇ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗಲು ಯುಕೆ ಕ್ರೌನ್‌ ಪ್ರಾಸಿಕ್ಯೂಷನ್‌ ಸವೀರ್‍ಸ್‌ ಮುಂದೆ ಮೂರು ರೀತಿಯ ಮನವಿಗಳನ್ನು ಮಲ್ಯ ಸಲ್ಲಿಸಿದ್ದರು. ಅವೆಲ್ಲವೂ ಈಗ ತಿರಸ್ಕೃತಗೊಂಡಿವೆ.

ರಾಜ್ಯದ ಸೋಂಕಿತರ ಸಂಖ್ಯೆ ಇಂದು 1000ಕ್ಕೆ..?

ಆದರೆ, ಕೊನೆಯ ಆಯ್ಕೆಯಾಗಿ ಯುರೋಪಿಯನ್‌ ಮಾನವ ಹಕ್ಕುಗಳ ಕೋರ್ಟ್‌ಗೆ ಮಲ್ಯ ಅರ್ಜಿ ಸಲ್ಲಿಸಲು ಅವಕಾಶವಿದೆ. ಭಾರತದಲ್ಲಿ ಸರಿಯಾದ ವಿಚಾರಣೆ ನಡೆಯುವುದಿಲ್ಲ ಎಂಬ ಕಾರಣ ನೀಡಿ ಅವರು ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ, ಅದು ಪುರಸ್ಕೃತವಾಗುವ ಸಾಧ್ಯತೆ ಕಡಿಮೆಯಿದೆ ಎಂದು ಗಡೀಪಾರು ತಜ್ಞರು ಹೇಳಿದ್ದಾರೆ. ಹೀಗಾಗಿ 64 ವರ್ಷದ ವಿಜಯ್‌ ಮಲ್ಯ 3 ವರ್ಷಗಳ ನಂತರ ಕೊನೆಗೂ ಭಾರತದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಕೈಗೆ ಸಿಗುವುದು ಬಹುತೇಕ ಖಚಿತವಾಗಿದೆ.

ಕೊರೋನಾ ವೈರಸ್‌ ಬಿಕ್ಕಟ್ಟು ಎದುರಿಸಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿದ ಬೆನ್ನಲ್ಲೇ ಟ್ವೀಟ್‌ ಮಾಡಿದ್ದ ಮಲ್ಯ, ‘ಕೋವಿಡ್‌ ಪ್ಯಾಕೇಜ್‌ಗೆ ಅಭಿನಂದನೆಗಳು. ಭಾರತ ಸರ್ಕಾರ ಎಷ್ಟು ಬೇಕಾದರೂ ನೋಟು ಪ್ರಿಂಟ್‌ ಮಾಡಬಹುದು. ಆದರೆ, ಶೇ.100ರಷ್ಟು ಸಾಲ ಮರುಪಾವತಿ ಮಾಡಲು ಸಿದ್ಧನಿರುವ ನನ್ನಂಥವರ ಸಣ್ಣ ಕೊಡುಗೆಯನ್ನು ನಿರ್ಲಕ್ಷಿಸುವುದೇಕೆ? ದಯವಿಟ್ಟು ಬೇಷರತ್ತಾಗಿ ನನ್ನ ಹಣ ಸ್ವೀಕರಿಸಿ ಈ ಪ್ರಕರಣವನ್ನು ಇಲ್ಲಿಗೇ ಮುಗಿಸಿ’ ಎಂದು ಕೋರಿದ್ದರು.
 

click me!