ಆದಿವಾಸಿ ವ್ಯಕ್ತಿಯ ಮುಖದ ಮೇಲೆ ಮೂತ್ರ ಮಾಡಿದ್ದ ಪ್ರವೇಶ್ ಶುಕ್ಲಾ ಮನೆಗೆ ನುಗ್ಗಿದ ಬುಲ್ಡೋಜರ್‌!

By Santosh Naik  |  First Published Jul 5, 2023, 4:41 PM IST

Bulldozer Action At Pravesh Shukla: ಮಾನಸಿಕ ಅಸ್ವಸ್ಥನಾಗಿದ್ದ ಆದಿವಾಸಿ ವ್ಯಕ್ತಿಯ ಮುಖದ ಮೇಲೆ ಮೂತ್ರ ಮಾಡಿದ್ದ ಪ್ರಕರಣದಲ್ಲಿ ಮಧ್ಯಪ್ರದೇಶ ಸರ್ಕಾರ ಪ್ರವೇಶ್ ಶುಕ್ಲಾ ತನ್ನದೇ ಕ್ರಮವನ್ನು ತೆಗೆದುಕೊಂಡಿದೆ.
 


ಭೋಪಾಲ್‌ (ಜು.5): ಕುಡಿದ ಮತ್ತಿನಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ಆದಿವಾಸಿ ವ್ಯಕ್ತಿಯ ಮುಖದ ಮೇಲೆ ಮೂತ್ರ ಮಾಡಿದ್ದ ಬಿಜೆಪಿ ಕಾರ್ಯಕರ್ತ ಪ್ರವೇಶ್‌ ಶುಕ್ಲಾ ವಿರುದ್ಧ ಮಧ್ಯಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಈತ ಮಾಡಿರುವುದು ಅಪರಾಧ ಎಂದು ಮೇಲ್ನೋಟಕ್ಕೆ ಸಾಬೀತಾದ ಬೆನ್ನಲ್ಲಿಯೇ ಆತನ ಮನೆಯ ದಾಖಲೆಗಳನ್ನು ಪರಿಶೀಲಿಸಿದ ಮಧ್ಯಪ್ರದೇಶದ ಅಧಿಕಾರಿಗಳು, ಅಕ್ರಮವಾಗಿ ಕಟ್ಟಿದ್ದ ಮನೆಯ ಮೇಲೆ ಬುಲ್ಡೋಜರ್‌ ನುಗ್ಗಿಸಿದ್ದಾರೆ. ಅದರೊಂದಿಗೆ ನ್ಯಾಷನಲ್‌ ಸೆಕ್ಯುರಿಟಿ ಆಕ್ಟ್‌ ಅನ್ನು ಈತನ ಮೇಲೆ ಹಾಕುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಅದರೊಂದಿಗೆ ಕುಬ್ರಿಯಲ್ಲಿ ನಿರ್ಮಾಣ ಮಾಡಲಾಗಿರುವ ಪ್ರವೇಶ್‌ ಶುಕ್ಲಾ ಅವರ ಮನೆಯನ್ನು ಸರ್ಕಾರ ನೆಲಸಮ ಮಾಡಿದೆ. ಅತಿಕ್ರಮ ಪ್ರದೇಶದಲ್ಲಿ ಕಟ್ಟಲಾಗಿದ್ದ ಈತನ ಮನೆಯ ಭಾಗವನ್ನು ಬುಲ್ಡೋಜರ್‌ ಬಳಸಿ ಕೆಡವಲಾಗಿದೆ. ಪ್ರವೇಶ್‌ ಶುಕ್ಲಾ ಮಾಡಿದ ಅಪರಾಧಕ್ಕೆ ಇಡೀ ರಾಜ್ಯವೇ ಮಾದರಿ ಪಡುವಂತೆ ಶಿಕ್ಷೆ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಇದರೊಂದಿಗೆ ಬಿಜೆಪಿ ಕೂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ಸಮಿತಿಯನ್ನು ನೇಮಕ ಮಾಡಿದೆ. ಅವರ ಇಡೀ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಮನೆಯನ್ನು ಕೆಡವಲು ಸರ್ಕಾರದಿಂದ ಸೂಚನೆಗಳನ್ನು ಪಡೆದ ನಂತರ, ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಪ್ರವೇಶ್ ಶುಕ್ಲಾ ಗ್ರಾಮವನ್ನು ತಲುಪಿದ್ದರು. ಅಲ್ಲಿ ಅವರ ಮನೆಯನ್ನು ಬುಲ್ಡೋಜರ್‌ಗಳಿಂದ ಕೆಡವಲಾಗಿದೆ. ಇದರೊಂದಿಗೆ ಆತನ ಮೇಲೆ ಎನ್‌ಎಸ್‌ಎ ಹೇರಲಾಗಿದೆ. ಪ್ರವೇಶ್ ಶುಕ್ಲಾ ಅವರನ್ನು ಬಂಧಿಸಿದ ನಂತರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಆತನ ವಿಚಾರಣೆ ನಡೆಸಿದ್ದಾರೆ. ಈ ವಿಡಿಯೋ ಒಂದೂವರೆಯಿಂದ ಎರಡು ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿದೆ. ವೀಡಿಯೊ ವೈರಲ್‌ ಆದ ನಂತರವೇ ಪ್ರವೇಶ್ ಶುಕ್ಲಾ ಮೇಲೆ ಬುಲ್ಡೋಜರ್ ಕ್ರಮಕ್ಕೆ ಬೇಡಿಕೆ ಬಂದಿತ್ತು. ಆರೋಪಿ ಯಾರೇ ಆಗಿರಲಿ ಅಪರಾಧ ಮಾಡಿದ್ದರೆ ಆತನ ಮನೆಯ ಮೇಲೆ ಬುಲ್ಡೋಜರ್ ಓಡಲಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದರು. ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಗುರುತಿಸಿದ್ದ ಮನೆಯನ್ನು ಕೆಡವಲಾಗಿದೆ.

Bulldozers demolishing the house of Pravesh Shukla who had urinated on a mentally challenged person. Shukla has been arrested and NSA slapped against him. pic.twitter.com/3AAYwERpFJ

— Pramod Kumar Singh (@SinghPramod2784)

ಮಾನಸಿಕ ಅಸ್ವಸ್ಥನ ಮುಖದ ಮೇಲೆ ಮೂತ್ರ ಮಾಡಿದ ಬಿಜೆಪಿ ಕಾರ್ಯಕರ್ತ!

ಸಮಿತಿ ರಚಿಸಿದ ಬಿಜೆಪಿ: ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಈ ವಿಚಾರದಲ್ಲಿ ತನಿಖಾ ಸಮಿತಿ ರಚಿಸಿದ್ದಾರೆ. ರಾಜ್ಯ ಕೋಲ್ ಬುಡಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮಲಾಲ್ ರೌಟೆಲ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಶಾಸಕ ಶರದ್ ಕೋಲ್, ಶಾಸಕ ಅಮರ್ ಸಿಂಗ್ ಮತ್ತು ರಾಜ್ಯ ಉಪಾಧ್ಯಕ್ಷ ಕಾಂತದೇವ್ ಸಿಂಗ್ ಸದಸ್ಯರಾಗಿದ್ದಾರೆ. ಈ ಸಮಿತಿಯು ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸಲಿದೆ.

Tap to resize

Latest Videos

ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ ಬಂಧನ: ಆರೋಪಿ ಮೇಲೆ ಕಠಿಣ ಕ್ರಮ ಎಂದ ಸಿಎಂ

ಬಿಜೆಪಿಯ ನಾಯಕ ಪ್ರವೇಶ್ ಶುಕ್ಲಾ ಆದಿವಾಸಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು ದೇಶಾದ್ಯಂತ ಟೀಕೆಗೆ ಗುರಿಯಾಗಿದೆ. ವೀಡಿಯೋ ಹೊರಬಿದ್ದ ಬಳಿಕ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿತ್ತು. ಬೇರೆ ರಾಜ್ಯಗಳು ಕೂಡ ಉದಾಹರಣೆ ಪಡೆದುಕೊಳ್ಳುವಂಥ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದರು. ಇದೀಗ ಪ್ರವೇಶ್ ಶುಕ್ಲಾ ವಿರುದ್ಧ ಸರ್ಕಾರ ತನ್ನ ಕ್ರಮ ಕೈಗೊಂಡಿದೆ.

click me!