ಹಗಲು ಬಿಟೆಕ್ ವಿದ್ಯಾರ್ಥಿ, ರಾತ್ರಿ ಸೆಕ್ಯೂರಿಟಿ ಗಾರ್ಡ್‌! 10 ಲಕ್ಷ ರೂ. ಸಾಲ ತೀರಿಸಲು ಈ ಹುಡುಗ ಪಡುತ್ತಿರುವ ಕಷ್ಟ ಎಂಥದ್ದು ಗೊತ್ತಾ?

Published : Nov 11, 2026, 01:30 PM IST
BTech Student by Day, Security Guard by Night

ಸಾರಾಂಶ

ಹೈದರಾಬಾದ್‌ನ 19 ವರ್ಷದ ಬಿಟೆಕ್ ವಿದ್ಯಾರ್ಥಿ ಅಭಿರಾಮ್ ₹10 ಲಕ್ಷ ಶಿಕ್ಷಣ ಸಾಲ ತೀರಿಸಲು ರಾತ್ರಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಗಲು ಕಾಲೇಜು, ರಾತ್ರಿ ಉದ್ಯೋಗದ ನಡುವೆ ಓದನ್ನು ಮುಂದುವರಿಸಿರುವ ಅವರ ಪರಿಶ್ರಮ ಮತ್ತು ಆತ್ಮವಿಶ್ವಾಸ ಈಗ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದೆ.

ಹಗಲು ಬಿಟೆಕ್ ವಿದ್ಯಾರ್ಥಿ, ರಾತ್ರಿ ಸೆಕ್ಯುರಿಟಿ ಗಾರ್ಡ್! ₹10 ಲಕ್ಷ ಸಾಲ ತೀರಿಸಲು ಯುವಕನ ಹೋರಾಟ

ಓದು ಮುಗಿಸಿ ಒಳ್ಳೆಯ ಉದ್ಯೋಗ ಪಡೆಯಬೇಕು, ಜೀವನದಲ್ಲಿ ಉತ್ತಮ ಸ್ಥಾನಕ್ಕೇರಬೇಕು ಎಂಬ ಕನಸು ಪ್ರತಿಯೊಬ್ಬ ವಿದ್ಯಾರ್ಥಿಗೂ ಇರುತ್ತದೆ. ಆದರೆ ಆ ಕನಸನ್ನು ನನಸಾಗಿಸಲು ಕೆಲವರು ಎದುರಿಸುವ ಕಷ್ಟಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಹೈದರಾಬಾದ್‌ನ 19 ವರ್ಷದ ಅಭಿರಾಮ್ ಎಂಬ ಬಿಟೆಕ್ ವಿದ್ಯಾರ್ಥಿ ಇಂತಹದ್ದೇ ಒಂದು ಸ್ಫೂರ್ತಿದಾಯಕ ಪ್ರಯತ್ನಕ್ಕೆ ಸಾಕ್ಷಿಯಾಗಿದ್ದಾರೆ. ಹಗಲು ಕಾಲೇಜಿಗೆ ಹೋಗುವ ಅವರು, ರಾತ್ರಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ₹10 ಲಕ್ಷ ಶಿಕ್ಷಣ ಸಾಲದ ಹೊರೆ.

ರಾತ್ರಿ ಕೆಲಸ, ಹಗಲು ಕಾಲೇಜು: ಬಿಡುವಿಲ್ಲದ ಜೀವನ!

ಅಭಿರಾಮ್ ಬಿಟೆಕ್ ಎರಡನೇ ವರ್ಷದ ವಿದ್ಯಾರ್ಥಿ. ಪ್ರತಿದಿನ ಬೆಳಗ್ಗೆ ಸುಮಾರು 7 ಗಂಟೆಗೆ ಅವರ ರಾತ್ರಿ ಪಾಳಿಯ ಕೆಲಸ ಮುಗಿಯುತ್ತದೆ. ಅದೇ ಸ್ಥಳದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಅವರ ತಂದೆ ಬೆಳಗಿನ ಪಾಳಿಗೆ ಬರುತ್ತಾರೆ. ನಂತರ ಮನೆಗೆ ತೆರಳಿ ಸ್ವಲ್ಪ ವಿಶ್ರಾಂತಿ ಪಡೆಯುವ ಅಭಿರಾಮ್ ಕಾಲೇಜಿಗೆ ತೆರಳುತ್ತಾರೆ.

ಕಾಲೇಜಿನಲ್ಲಿ ಪಾಠ ಕೇಳುವುದು, ಪರೀಕ್ಷೆಗೆ ಸಿದ್ಧತೆ ನಡೆಸುವುದು ಮುಗಿದ ಬಳಿಕ ಮತ್ತೆ ರಾತ್ರಿ ಕೆಲಸಕ್ಕೆ ಹಾಜರಾಗುತ್ತಾರೆ. ಹೀಗೆ ಓದು ಮತ್ತು ಉದ್ಯೋಗ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತಿದ್ದಾರೆ.

₹10 ಲಕ್ಷ ಸಾಲ, ಪ್ರತಿ ತಿಂಗಳು ₹27 ಸಾವಿರ EMI!

ಅಭಿರಾಮ್ ಅವರ ಕುಟುಂಬದ ಮೇಲೆ ಸುಮಾರು ₹10 ಲಕ್ಷ ಶಿಕ್ಷಣ ಸಾಲವಿದೆ. ಈ ಸಾಲಕ್ಕೆ ಪ್ರತಿ ತಿಂಗಳು ₹27,000 ಕಂತು (EMI) ಪಾವತಿಸಬೇಕಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಪಾವತಿಸುವುದು ಕುಟುಂಬಕ್ಕೆ ಸುಲಭದ ಕೆಲಸವಲ್ಲ. ಹೀಗಾಗಿ ಸಾಲದ ಹೊರೆ ಕಡಿಮೆ ಮಾಡಲು ಅಭಿರಾಮ್ ಸ್ವತಃ ದುಡಿಯಲು ನಿರ್ಧರಿಸಿದ್ದಾರೆ.

ಅವರ ತಂದೆಯೂ ಅದೇ ಸಂಸ್ಥೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಮತ್ತು ಮಗ ಇಬ್ಬರೂ ದುಡಿಯುವ ಮೂಲಕ ಕುಟುಂಬದ ಆರ್ಥಿಕ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಲಸದ ಬಗ್ಗೆ ಕೀಳರಿಮೆ ಬೇಡ: ಸಾಮಾಜಿಕ ಜಾಲತಾಣದಲ್ಲಿ ಸ್ಫೂರ್ತಿ!

ಅಭಿರಾಮ್ ಈ ಹಿಂದೆ ಪ್ಯಾಕಿಂಗ್ ಕೆಲಸ ಮತ್ತು ಫುಡ್ ಡೆಲಿವರಿ ಕೆಲಸಗಳನ್ನೂ ಮಾಡಿದ್ದಾರೆ. ಆದರೆ ಈ ಕೆಲಸಗಳಿಂದ ಓದಿಗೆ ಸಮಯ ಸಿಗುತ್ತಿರಲಿಲ್ಲ. ಹೀಗಾಗಿ ರಾತ್ರಿ ಪಾಳಿಯ ಸೆಕ್ಯುರಿಟಿ ಗಾರ್ಡ್ ಕೆಲಸವನ್ನು ಆಯ್ಕೆ ಮಾಡಿಕೊಂಡರು. ಕೆಲಸದ ನಡುವೆ ಸಿಗುವ ಬಿಡುವಿನ ಸಮಯದಲ್ಲಿ ಓದಿಕೊಳ್ಳಲು ಕೂಡ ಅವರಿಗೆ ಸಾಧ್ಯವಾಗುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ತಮ್ಮ ದೈನಂದಿನ ಜೀವನದ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿರುವ ಅವರು 'BTech Security Wala' ಎಂದೇ ಜನಪ್ರಿಯರಾಗಿದ್ದಾರೆ. ಯಾವುದೇ ಕೆಲಸ ಕೀಳಲ್ಲ, ಪ್ರಾಮಾಣಿಕವಾಗಿ ದುಡಿದು ಸಂಪಾದಿಸುವುದರಲ್ಲಿ ಅವಮಾನವಿಲ್ಲ ಎಂಬ ಸಂದೇಶವನ್ನು ಯುವಕರಿಗೆ ನೀಡುತ್ತಿದ್ದಾರೆ.

ಭವಿಷ್ಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಕನಸು!

ಅಭಿರಾಮ್ ಅವರ ಕುಟುಂಬದಲ್ಲಿ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ತಿಂಗಳಿಗೆ ಸುಮಾರು ₹16 ಸಾವಿರ ಸಂಪಾದಿಸಿದರೆ, ಅವರು ತಮ್ಮ ಕೆಲಸದಿಂದ ₹13 ಸಾವಿರ ಗಳಿಸುತ್ತಾರೆ. ಈ ಹಣ ಬಹುತೇಕ ಸಾಲದ EMI ಪಾವತಿಗೆ ಹೋಗುತ್ತದೆ. ತಾಯಿ ಮನೆಗೆಲಸ ಮಾಡಿ ಕುಟುಂಬದ ದೈನಂದಿನ ಖರ್ಚು ನಿಭಾಯಿಸುತ್ತಿದ್ದಾರೆ.

ಇಷ್ಟೆಲ್ಲ ಕಷ್ಟಗಳ ನಡುವೆಯೂ ಅಭಿರಾಮ್ ತಮ್ಮ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿ ಉತ್ತಮ ಉದ್ಯೋಗ ಪಡೆಯುವ ಗುರಿ ಹೊಂದಿದ್ದಾರೆ. ಮುಂದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ನೀಡಬೇಕು ಎಂಬುದು ಅವರ ಕನಸು.

ಒಟ್ಟಿನಲ್ಲಿ, ಅಭಿರಾಮ್ ಅವರ ಜೀವನ ನಮಗೆ ಒಂದು ಮುಖ್ಯ ಪಾಠ ಕಲಿಸುತ್ತದೆ. ಯಾವುದೇ ಕೆಲಸ ಚಿಕ್ಕದಲ್ಲ, ದುಡಿಮೆಗೆ ಅವಮಾನವಿಲ್ಲ. ಕಷ್ಟಗಳು ಎದುರಾದಾಗ ಕನಸುಗಳನ್ನು ಕೈಬಿಡುವ ಬದಲು ಅವುಗಳನ್ನು ನನಸಾಗಿಸಲು ದಾರಿ ಹುಡುಕಬೇಕು ಎಂಬುದಕ್ಕೆ ಈ ಯುವಕ ನಿಜವಾದ ಉದಾಹರಣೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Mysterious foreigner: ಒಂದೇ ಕುಟುಂಬದಲ್ಲಿ ಇಬ್ಬರು ಸೊಸೆಯರ ನಡುವೆ ಬಿರುಕು! ಸೋನಿಯಾ ಆತ್ಮಕಥೆ ಬೆನ್ನಲ್ಲೇ ಕಂಗನಾ ಹೊಸ ವಿವಾದ!
ಅದಾನಿ ಗ್ರೂಪ್ ನಿಂದ ಬರೋಬ್ಬರಿ ₹10 ಲಕ್ಷ ಕೋಟಿಗೂ ಅಧಿಕ ಹೂಡಿಕೆ, ಇಂಧನ ಒಂದೇ ಕ್ಷೇತ್ರಕ್ಕೆ ಶೇ.70ರಷ್ಟು ಹಣ ಮೀಸಲು!