ಬಿಎಸ್‌ಎಫ್‌ನಿಂದ ನಿರ್ದಿಷ್ಟ ಪಕ್ಷಕ್ಕೆ ಮತಕ್ಕೆ ಬೆದರಿಕೆ: ಟಿಎಂಸಿ ಗಂಭೀರ ಆರೋಪ!

By Kannadaprabha NewsFirst Published Jan 22, 2021, 8:09 AM IST
Highlights

ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಜನರಿಗೆ ಬೆದರಿಕೆಯೊಡ್ಡುತ್ತಿದೆ| ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಗಂಭೀರ ಆರೋಪ|  ಭಾರತೀಯ ಚುನಾವಣಾ ಆಯೋಗಕ್ಕೆ ದೂರು 

ಕೋಲ್ಕತ್ತ(ಜ.22): ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಜನರಿಗೆ ನಿರ್ದಿಷ್ಟ ಪಕ್ಷಕ್ಕೆ ಮತ ಹಾಕಬೇಕೆಂದು ಬೆದರಿಸುತ್ತಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಬಿಎಸ್‌ಎಫ್‌, ‘ಅಕ್ರಮ ನುಸುಳುಕೋರರನ್ನು, ಕಳ್ಳಸಾಗಾಣಿಕೆಯನ್ನು ತಡೆಯುವಲ್ಲಿ ಗಡಿ ಭದ್ರತಾ ಪಡೆ ಸಕ್ರಿಯವಾಗಿದೆ. ಟಿಎಂಸಿ ಮಾಡಿರುವ ಆರೋಪ ಆಧಾರರಹಿತ, ಸತ್ಯಕ್ಕೆ ದೂರವಾದುದು’ ಎಂದಿದೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ಸುನಿಲ್‌ ಅರೋರಾ ಅವರು ರಾಜ್ಯಕ್ಕೆ ಮೂರು ದಿನಗಳ ಕಾಲ ಭೇಟಿ ನೀಡಿದ್ದು, ಈ ವೇಳೆ ಟಿಎಂಸಿ ದೂರು ದಾಖಲಿಸಿದೆ.

ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ಪ್ರಧಾನ ಕಾರ‍್ಯದರ್ಶಿ ಪಾರ್ಥ ಚಟರ್ಜಿ, ‘ ವರ್ಷವಿಡೀ ನಿಮ್ಮನ್ನು ವಿಚಾರಿಸಿಕೊಳ್ಳಲು ಗಡಿಯಲ್ಲಿ ಸೈನಿಕರನ್ನು ಬಿಟ್ಟರೆ ಬೇರೆ ಯಾರೂ ಇರುವುದಿಲ್ಲ ಎಂದು ಕೆಲ ಸೈನಿಕರು ಗ್ರಾಮಸ್ಥರಿಗೆ ಬೆದರಿಸಿದ್ದಾರೆ. ಇದು ತೀರಾ ಅಪಾಯಕಾರಿ ಸನ್ನಿವೇಶ. ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸಬೇಕು’ ಎಂದಿದ್ದಾರೆ.

click me!