ಪಾಕ್‌ ಗಡೀಲಿ 300 ಕೋಟಿ ರೂ. ಡ್ರಗ್ಸ್‌ ಎಸೆದು ಪರಾರಿ!

By Kannadaprabha NewsFirst Published Sep 21, 2020, 7:18 AM IST
Highlights

ಪಾಕ್‌ ಗಡೀಲಿ 300 ಕೋಟಿ ರೂ. ಡ್ರಗ್ಸ್‌ ಎಸೆದು ಪರಾರಿ!| ಯೋಧರ ಕಂಡು ಸ್ಮಗ್ಲರ್ಸ್‌ ಪರಾರಿ| ನುಸುಳಲೆತ್ನಿಸಿದಾಗ ಗುಂಡಿನ ದಾಳಿ

ಜಮ್ಮು(ಸೆ.21): ಇಲ್ಲಿನ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿ ಭಾರತದೊಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಲು ಯತ್ನಿಸುತ್ತಿದ್ದ ಪಾಕಿಸ್ತಾನಿ ನುಸುಳುಕೋರರ ಯತ್ನವನ್ನು ವಿಫಲಗೊಳಿಸಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌), ದೇಶದೊಳಕ್ಕೆ ತರಲು ಯತ್ನಿಸುತ್ತಿದ್ದ ಸುಮಾರು 300 ಕೋಟಿ ರು. ಮೌಲ್ಯದ ಹೆರಾಯಿನ್‌ ಮತ್ತು ಚೀನಾ ನಿರ್ಮಿತ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದೆ. ಭಾನುವಾರ ಬೆಳಗಿನ ಜಾವ 2 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಭಾರತೀಯ ಯೋಧರ ದಾಳಿಗೆ ಬೆದರಿದ ನುಸುಳುಕೋರರು, ಕತ್ತಲಲ್ಲಿ ಪರಾರಿಯಾಗಿದ್ದಾರೆ.

ಡ್ರಗ್ ಕೇಸ್ : ಕಿಶೋರ್‌, ಅಕೀಲ್‌ ಪೊಲೀಸ್‌ ಕಸ್ಟಡಿಗೆ

ಪಾಕ್‌ ಕಡೆಯಿಂದ ಅಕ್ರಮವಾಗಿ ಮಾದಕ ವಸ್ತು ಮತ್ತು ಶಸ್ತಾ್ರಸ್ತ್ರಗಳನ್ನು ಭಾರತಕ್ಕೆ ನುಸುಳಿಸುವ ಬಗ್ಗೆ ಗುಪ್ತಚರ ವರದಿಗಳು ಎಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ತೀವ್ರ ಎಚ್ಚರಿಕೆ ವಹಿಸಿದ್ದ ಭದ್ರತಾ ಪಡೆಗಳಿಗೆ ಭಾನುವಾರ ಮುಂಜಾನೆ 2 ಗಂಟೆಯ ವೇಳೆಗೆ ಆರ್‌.ಎಸ್‌. ಪುರ ವಲಯದ ಅರ್ನಿಯಾ ಪ್ರದೇಶದ ಗಡಿ ಚೆಕ್‌ಪೋಸ್ಟ್‌ಗಳಾದ ಬುಧ್‌ವಾರ್‌ ಮತ್ತು ಬುಲ್ಲೇಚಕ್‌ ಬಳಿ ಅನುಮಾನಾಸ್ಪದ ಚಲನವಲನ ಕಂಡುಬಂದಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ 2-3 ವ್ಯಕ್ತಿಗಳು ಬೇಲಿ ದಾಟಿ ಭಾರತದ ಗಡಿಯೊಳಗೆ ನುಸುಳುವ ಯತ್ನ ಮಾಡಿದ್ದು ಕಂಡುಬಂತು.

ಇದನ್ನು ಬಿಎಸ್‌ಎಫ್‌ ಯೋಧರು ತಡೆಯಲು ಯತ್ನಿಸಿದಾಗ ನುಸುಳುಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಯೋಧರು ಗುಂಡಿನ ದಾಳಿ ನಡೆಸಿದಾಗ, ನುಸುಳುಕೋರರು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ.

ಬಾಲಿವುಡ್ ಮುಖ್ಯ ಡ್ರಗ್ಸ್ ಸಪ್ಲೈಯರ್ NCB ಬಲೆಗೆ: ಸೆಲೆಬ್ರಿಟಿಗಳ ಲಿಸ್ಟ್ ರೆಡಿ

ಬಳಿಕ ಸ್ಥಳ ಪರಿಶೀಲನೆ ವೇಳೆ ಒಂದಕ್ಕೊಂದು ಕಟ್ಟಲಾಗಿದ್ದ ಸಣ್ಣ ಸಣ್ಣ 62 ಬ್ಯಾಗ್‌ಗಳಲ್ಲಿದ್ದ ಹೆರಾಯಿನ್‌, ಪ್ಲಾಸ್ಟಿಕ್‌ ಪೈಪ್‌, ಗುಂಡು ಸಮೇತ 2 ಪಿಸ್ತೂಲ್‌ ಮತ್ತು 100 ಸುತ್ತು ಗುಂಡು ಪತ್ತೆಯಾಗಿವೆ. ಗಡಿಯ ಬೇಲಿ ಮೇಲೆ ಪಿವಿಸಿ ಪೈಪ್‌ ಇಟ್ಟು ಅತ್ತ ಕಡೆಯಿಂದ ಮಾದಕ ವಸ್ತು ಪ್ಯಾಕೇಟ್‌ಗಳನ್ನು ತೂರಿಸುವುದು, ಇತ್ತ ಕಡೆ ಇರುವ ವ್ಯಕ್ತಿ ಅದನ್ನು ಸ್ವೀಕರಿಸುವ ತಂತ್ರವನ್ನು ಅನುಸರಿಸುವುದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪಾಕ್‌ ಯತ್ನ ವಿಫಲಗೊಳಿಸಿದ ಯೋಧರನ್ನು ಪ್ರಶಂಸಿಸಿದ್ದಾರೆ.

click me!