ಟುಕ್ ಟುಕ್ ಪ್ರೇಮ! ಭಾರತದ ಆಟೋವನ್ನು ಬಿಟ್ಟಿರಲಾರದೆ ಲಂಡನ್‌ಗೇ ಹೊತ್ತೊಯ್ದ ವಿದೇಶಿ ದಂಪತಿ ಮನಮಿಡಿಯುವ ಕಥೆ

Published : Nov 01, 2026, 11:42 PM IST
British couple takes a piece of India home

ಸಾರಾಂಶ

ಬ್ರಿಟನ್ ಮೂಲದ ಹೆಲೆನ್ ಮತ್ತು ಮಿಕ್ ದಂಪತಿ ಭಾರತ ಪ್ರವಾಸಕ್ಕಾಗಿ 'ಟಿಮ್ಮಿ' ಎಂಬ ಹೆಸರಿನ ಆಟೋರಿಕ್ಷಾವನ್ನು ಖರೀದಿಸಿದ್ದರು. 75 ದಿನಗಳ ಕಾಲ 4218 ಕಿ.ಮೀ ಪ್ರಯಾಣಿಸಿದ ನಂತರ ಆಟೋದ ಮೇಲಿನ ಭಾವನಾತ್ಮಕ ನಂಟಿನಿಂದಾಗಿ ಅದನ್ನು ಹಡಗಿನ ಮೂಲಕ ಲಂಡನ್‌ಗೆ ಕೊಂಡೊಯ್ದಿದ್ದಾರೆ. ಉದ್ಯಮಿ ಹರ್ಷ ಗೋಯೆಂಕಾ ಈ ಸುಂದರ ಕಥೆಯನ್ನು ಹಂಚಿಕೊಂಡಿದ್ದಾರೆ.

ಇದು ಸಿನಿಮಾವನ್ನೂ ಮೀರಿಸಿದ ಎಮೋಷನಲ್ ಕತೆ! ನಾವು, ನೀವು ಪ್ರವಾಸಕ್ಕೆ ಹೋದರೆ, ಸವಿ ನೆನಪಿಗಾಗಿ ಫೋಟೋಗಳನ್ನ ಕ್ಲಿಕ್ ಮಾಡಿಕೊಳ್ತೇವೆ. ಏನಾದರೂ ವಸ್ತುಗಳನ್ನ ಖರೀದಿಸಿ ಮನೆಗೆ ತಂದು ಇಟ್ಕೊಳ್ತೇವೆ. ಆದರೆ ಈ ವಿದೇಶಿ ದಂಪತಿ ಸ್ವಲ್ಪ ಭಿನ್ನ. ಭಾರತಕ್ಕೆ ಬಂದಿದ್ದ ಬ್ರಿಟನ್ ದಂಪತಿ ಹೋಗುವಾಗ ತೆಗೆದುಕೊಂಡು ಹೋಗಿದ್ದು ಏನು ಗೊತ್ತಾ? ಅದುವೇ ರಿಕ್ಷಾ!

ಬಿಟ್ಟಿರಲಾರದೇ ಒಂದು ಆಟೋರಿಕ್ಷಾವನ್ನೇ ಕಾನೂನುಬದ್ಧವಾಗಿ ಹೊತ್ತೊಯ್ದಿದ್ದಾರೆ. ಹೌದು, ಇದೊಂದು ಭಾವುಕ ಕತೆ. ಬ್ರಿಟನ್ ಮೂಲದ ಹೆಲೆನ್ ಮತ್ತು ಮಿಕ್ ದಂಪತಿ ಭಾರತಕ್ಕೆ ಬಂದಿದ್ದರು. ಅವರು ಇಡೀ ಭಾರತವನ್ನು ಕಣ್ತುಂಬಿಕೊಳ್ಳಲು ಆಟೋರಿಕ್ಷಾವನ್ನು ಆಯ್ಕೆ ಮಾಡಿಕೊಂಡರು. ತಮಿಳುನಾಡಿನ ಚೆನ್ನೈನಲ್ಲಿ ನೋಂದಣಿಯಾಗಿದ್ದ ಕೆಂಪು-ಕಪ್ಪು ಬಣ್ಣದ ಬಜಾಜ್ ಆಟೋವನ್ನು ಖರೀದಿಸಿ ಅದಕ್ಕೆ ಪ್ರೀತಿಯಿಂದ 'ಟಿಮ್ಮಿ'ಎಂದು ಹೆಸರಿಟ್ಟರು. ಆಟೋದ ಮುಂಭಾಗದಲ್ಲಿ ಎರಡು ಮುದ್ದಾದ ಕಣ್ಣುಗಳು ಹಾಗೂ ನಗುವಿನ ಚಿತ್ರವನ್ನು ಬಿಡಿಸಿ ಜೀವ ತುಂಬಿದರು.

ಕಳೆದ 75 ದಿನಗಳಲ್ಲಿ ಈ ಟಿಮ್ಮಿಯ ಜೊತೆಗೆ ಭಾರತದಾದ್ಯಂತ ಸುತ್ತಾಡಿದ್ದಾರೆ. 4218 ಕಿಲೋ ಮೀಟರ್ ದೂರ ಆಟೋದಲ್ಲಿ ಸುತ್ತಿದೆ. ಆಗ್ರಾದ ತಾಜ್‌ಮಹಲ್‌ನಿಂದ ಹಿಡಿದು ಹಳ್ಳಿ-ದಿಲ್ಲಿಗಳವರೆಗೆ.. ಭಾರತದ ಬಿಸಿಲು-ಮಳೆ, ಧೂಳು-ಟ್ರಾಫಿಕ್ ಎಲ್ಲದರಲ್ಲೂ ಆಟೋ ಅವರ ನೆರಳಿನಂತೆ ಜೊತೆಗಿತ್ತು. ದಿನ ಕಳೆದಂತೆ ಆ ಆಟೋ ಕೇವಲ ವಾಹನವಾಗಿ ಉಳಿಯಲಿಲ್ಲ. ಅದು ಅವರ ಕುಟುಂಬದ ಅವಿಭಾಜ್ಯ ಅಂಗವಾಗಿಬಿಟ್ಟಿತ್ತು..

ಕಣ್ಣೀರ ವಿದಾಯಕ್ಕೆ ಮನಸ್ಸಾಗಲಿಲ್ಲ..

ಕೊನೆಗೆ ಒಂದು ದಿನ ಪ್ರವಾಸ ಮುಗಿಯಿತು.. ತಮ್ಮ ತಾಯ್ನಾಡಿಗೆ ಮರಳುವ ಸಮಯ ಬಂದೇ ಬಿಟ್ಟಿತು. ಸಾವಿರಾರು ಕಿಲೋ ಮೀಟರ್ ತಮ್ಮನ್ನು ಹೊತ್ತು ತಿರುಗಿದ, ಪ್ರತಿಯೊಂದು ಕ್ಷಣದಲ್ಲೂ ಜೊತೆಯಾಗಿದ್ದ ‘ಟಿಮ್ಮಿ’ಯನ್ನು ಭಾರತದಲ್ಲೇ ಬಿಟ್ಟುಹೋಗಲು ಮನಸ್ಸು ಒಪ್ಪಲಿಲ್ಲ. ಅದನ್ನು ಇಲ್ಲಿಯೇ ಯಾರಿಗೋ ಮಾರಲು ಇಷ್ಟ ಆಗಲಿಲ್ಲ. ಒಂದು ವೇಳೆ ಮಾರಿದರೆ ಜೀವದ ಗೆಳೆಯನನ್ನೇ ಬಿಟ್ಟು ಹೋದಂತೆ ಆಗಲಿದೆ ಎಂಬ ನಿರ್ಧಾರಕ್ಕೆ ಬಂದು ಬಿಟ್ಟರು. ಅದಕ್ಕಾಗಿ ದಂಪತಿ ತಮ್ಮ ಪ್ರೀತಿಯ ಟಿಮ್ಮಿಯನ್ನು ಲಂಡನ್‌ಗೆ ಕೊಂಡೊಯ್ಯುವ ಬಗ್ಗೆ ಮನಸ್ಸು ಮಾಡಿಯೇ ಬಿಟ್ಟರು.

ಆಟೋವನ್ನು ಹಡಗಿನ ಮೂಲಕ ಲಂಡನ್‌ಗೆ ಸಾಗಿಸುವುದು ಸುಲಭದ ಮಾತಾಗಿರಲಿಲ್ಲ. ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿ.. ನಿಯಮಗಳನ್ನು ಪೂರೈಸಿ ಕೊನೆಗೂ ಟಿಮ್ಮಿಯನ್ನು ಹಡಗೇರಿಸಿದರು. ಬರೋಬ್ಬರಿ 6 ತಿಂಗಳ ಸುದೀರ್ಘ ಕಾಯುವಿಕೆಯ ನಂತರ.. ಅಕ್ಟೋಬರ್ 23 ರಂದು ಆಟೋ ಲಂಡನ್‌ನ ಬಂದರಿಗೆ ತಲುಪಿತು. ಸಾವಿರಾರು ಮೈಲಿ ದೂರದ ಸಮುದ್ರ ದಾಟಿ ಬಂದ ತಮ್ಮ ನೆಚ್ಚಿನ ಆಟೋವನ್ನು ಲಂಡನ್‌ನಲ್ಲಿ ನೋಡಿದಾಗ ದಂಪತಿಯ ಕಣ್ಣಂಚು ತೇವವಾಗಿತ್ತು..

ಖ್ಯಾತ ಉದ್ಯಮಿ ಹರ್ಷ ಗೋಯೆಂಕಾ ಈ ಸುಂದರ ಕಥೆಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಭಾರತದ ರಸ್ತೆಗಳಿಂದ ಬ್ರಿಟನ್‌ನ ಬೀದಿಗಳವರೆಗೆ..ಎಂಥ ಅದ್ಭುತ ಪಯಣ! ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಬ್ರಿಟನ್‌ನ ಸರ್ಕಾರದ ನಿಯಮಾವಳಿಗಳು ಮತ್ತು ಕಾಗದಪತ್ರಗಳ ಕೆಲಸಗಳು ಮುಗಿದ ನಂತರ ಟಿಮ್ಮಿ ಲಂಡನ್‌ನ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡಲಿದೆ.

ಪ್ರೀತಿ ಮತ್ತು ಬಾಂಧವ್ಯಕ್ಕೆ ಯಾವುದೇ ಭಾಷೆ, ದೇಶದ ಗಡಿಗಳಿರುವುದಿಲ್ಲ. ನಿಸ್ವಾರ್ಥವಾಗಿ ಜೊತೆಗಿದ್ದದ್ದು ಕೇವಲ ಮೂರು ಚಕ್ರದ ವಾಹನವೇ ಆದರೂ, ಅದು ತಂದುಕೊಟ್ಟ ನೆನಪುಗಳು ಜೀವಮಾನದ್ದು ಎಂಬುದನ್ನು ಈ ದಂಪತಿ ಸಾಬೀತು ಮಾಡಿದ್ದಾರೆ. ಭಾರತದ ಹೆಮ್ಮೆಯ ಆಟೋವೊಂದು ಇಂದು ಸಾಗರದಾಟಿ ಲಂಡನ್‌ನಲ್ಲಿ ರಾರಾಜಿಸುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವೇ ಸರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನಿಂದ ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳಿಗೆ ಬುಲೆಟ್ ಟ್ರೈನ್: 4000 ಕಿಮೀ ಯೋಜನೆಗೆ ಮೋದಿ ಅಂಕಿತ!
ವಿದೇಶ ಪ್ರಯಾಣಿಕರಿಗೂ ‘ಡಿಜಿ ಯಾತ್ರಾ’ ಸೌಲಭ್ಯ: ಬೆಂಗಳೂರು ಸೇರಿ 7 ಏರ್‌ಪೋರ್ಟ್‌ಗಳಲ್ಲಿ ಪ್ರಾಯೋಗಿಕ ಜಾರಿ