
ಕುಟುಂಬದ ಪ್ರೀತಿಯಿಂದ ವಂಚಿತರಾದ ಅನಾಥ ಮಕ್ಕಳು, ಆಸರೆಯಿಲ್ಲದ ನಿರ್ಗತಿಕರು, ಪ್ರೀತಿ-ಗೌರವಕ್ಕಾಗಿ ಹಂಬಲಿಸುವ ವೃದ್ಧರು ಮತ್ತು ವಿಶೇಷ ಆರೈಕೆ ಬಯಸುವ ಅಂಗವಿಕಲರ ಬಾಳಿನಲ್ಲಿ ಹೊಸ ಭರವಸೆಯ ಸೂರ್ಯೋದಯವಾಗಿದೆ. ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ ಹಾಗೂ ನಿರ್ದೇಶಕಿ ಇಶಾ ಅಂಬಾನಿ ಅವರು ಮುಂಬೈ ಸಮೀಪದ ಕರ್ಜತ್ನಲ್ಲಿ ನೀತಾ ಮುಖೇಶ್ ಅಂಬಾನಿ ಅನಂತ ಆಶ್ರಯ ಎಂಬ ಅತ್ಯಂತ ಭಾವುಕ ಹಾಗೂ ಬೃಹತ್ ಸಾಮಾಜಿಕ ಯೋಜನೆಗೆ ಭೂಮಿಪೂಜೆ ನೆರವೇರಿಸಿ, ಶಿಲಾನ್ಯಾಸ ಮಾಡಿದ್ದಾರೆ. ಸರಿಸುಮಾರು 100 ಎಕರೆಗಳ ವಿಶಾಲ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಈ ಸ್ವರ್ಗಸಮಾನ ಪಟ್ಟಣವು 5,000 ನಿರ್ಗತಿಕ ಜೀವಗಳಿಗೆ ಬದುಕಿನ ಕೊನೆಯವರೆಗೂ ಭದ್ರತೆ, ವಾತ್ಸಲ್ಯ, ಗೌರವ ಮತ್ತು ವಿಶ್ವದರ್ಜೆಯ ಸೌಕರ್ಯಗಳನ್ನು ನೀಡುವ ಹೊಸ ಕುಟುಂಬವಾಗಿ ರೂಪುಗೊಳ್ಳಲಿದೆ.
ಈ ಮಹತ್ವದ ಯೋಜನೆಯ ಹಿಂದಿರುವ ತಾಯ್ತನದ ಭಾವನಾತ್ಮಕ ಕನಸನ್ನು ಹಂಚಿಕೊಂಡ ನೀತಾ ಅಂಬಾನಿ, ಒಬ್ಬ ತಾಯಿಯಾಗಿ ಮಕ್ಕಳು ನಗುನಗುತ್ತಾ, ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರುವುದನ್ನು ನೋಡುವುದೇ ನನ್ನ ಪಾಲಿಗೆ ಅಪಾರ ಸಂತೋಷ. ಪೋಷಕರು ಇರಲಿ ಅಥವಾ ಇಲ್ಲದಿರಲಿ, ಪ್ರತಿಯೊಂದು ಮಗುವೂ ರಕ್ಷಣೆ ಮತ್ತು ಪ್ರೀತಿಗೆ ಸಂಪೂರ್ಣ ಅರ್ಹವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಅಥವಾ ಕುಟುಂಬದ ಬೆಚ್ಚಗಿನ ವಾತಾವರಣವನ್ನೇ ಕಾಣದವರಿಗೆ ಒಂದು ಸುಂದರ ಕುಟುಂಬವನ್ನು ಸೃಷ್ಟಿಸುವ ನಮ್ಮ ಅತ್ಯಂತ ವಿನಮ್ರ ಪ್ರಯತ್ನವೇ ಈ 'ಅನಂತ ಆಶ್ರಯ' ಎಂದು ಭಾವುಕರಾಗಿ ನುಡಿದರು.
ಇಲ್ಲಿ ಮಕ್ಕಳು ಯಾವುದೇ ಭಯವಿಲ್ಲದೆ ಶಿಕ್ಷಣ ಪಡೆದು, ಪ್ರೀತಿಯ ಮಡಿಲಲ್ಲಿ ಬೆಳೆದು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪೂರ್ಣ ಅವಕಾಶವನ್ನು ಪಡೆಯಲಿದ್ದಾರೆ. ಅದೇ ರೀತಿ, ಇಳಿ ವಯಸ್ಸಿನಲ್ಲಿ ಒಂಟಿತನ ಅನುಭವಿಸುವ ವೃದ್ಧರಿಗೆ ಇಲ್ಲಿ ಆತ್ಮೀಕ ಗೌರವ, ಒಡನಾಟ ಮತ್ತು ಅವರ ಪ್ರತಿಯೊಂದು ಸಣ್ಣ ಆಸೆ-ಅಗತ್ಯಗಳನ್ನು ಪ್ರೀತಿಯಿಂದ ಪೂರೈಸುವ ಭರವಸೆ ಸಿಗಲಿದೆ. ಪ್ರಕೃತಿ, ಗಿಡಮೂಲಿಕೆ ಮತ್ತು ಪ್ರಾಣಿಗಳ ಒಡನಾಟದೊಂದಿಗೆ ವೈದ್ಯಕೀಯ ಬೆಂಬಲ ಸಿಗುವ ಈ ಮನೆ, ಪ್ರತಿಯೊಬ್ಬರಿಗೂ ಕುಟುಂಬ ಜೀವನದ ಬೆಚ್ಚಗಿನ ಅನುಭವ ನೀಡಲಿದೆ.
ಪ್ರಕೃತಿಯ ಮಡಿಲಲ್ಲಿ ಪರಿಸರ ಸ್ನಮಕ್ಕಳ ಕುರಿತು ಭಾವುಕ ನುಡಿ!ೇಹಿಯಾಗಿ ಕಂಗೊಳಿಸಲಿರುವ ಈ ಬೃಹತ್ ಸಂಕೀರ್ಣದಲ್ಲಿ ಒಟ್ಟು 8 ವಸತಿ ಗ್ರಾಮಗಳನ್ನು ನಿರ್ಮಿಸಲಾಗುತ್ತಿದೆ. ವಿಶೇಷವೆಂದರೆ, ಈ ಪ್ರತಿಯೊಂದು ವಸತಿ ಗ್ರಾಮಕ್ಕೂ ಭಾರತದ ಪವಿತ್ರ ನದಿಗಳ ಹೆಸರಿಡಲಾಗುತ್ತಿದೆ. ನಿವಾಸಿಗಳಿಗೆ ಇಲ್ಲಿ ಚೊಕ್ಕಟವಾದ ಸಣ್ಣ ಮನೆಗಳನ್ನು ಒದಗಿಸಲಾಗುತ್ತಿದ್ದು, ಅವರ ಉಸ್ತುವಾರಿಗೆ ವಿಶೇಷ ಆರೈಕೆದಾರರು ಹಾಗೂ ಮನೆ ಪೋಷಕರನ್ನು ನೇಮಿಸಲಾಗುತ್ತದೆ. ಪ್ರತಿಯೊಬ್ಬ ನಿವಾಸಿಯ ವೈಯಕ್ತಿಕ ಆರೋಗ್ಯ, ಶಿಕ್ಷಣ, ದೈಹಿಕ ಸ್ಥಿತಿ ಮತ್ತು ಇಷ್ಟಕಷ್ಟಗಳ ಆಧಾರದ ಮೇಲೆ ಪ್ರತ್ಯೇಕ ಆರೈಕೆ ಯೋಜನೆಗಳನ್ನು ರೂಪಿಸಿ, ವೈಯಕ್ತಿಕ ಶ್ರದ್ಧೆಯಿಂದ ನೋಡಿಕೊಳ್ಳುವುದು ಈ ಯೋಜನೆಯ ವಿಶೇಷತೆಯಾಗಿದೆ.
ಈ ಆಶ್ರಯ ಧಾಮವು ಕೇವಲ ವಸತಿಗೆ ಸೀಮಿತವಾಗಿರದೆ, ನಿವಾಸಿಗಳ ಸಮಗ್ರ ವಿಕಾಸಕ್ಕೆ ಅಗತ್ಯವಾದ ಸಕಲ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಸಂಕೀರ್ಣದೊಳಗೆ ಮೀಸಲಾದ ಆಸ್ಪತ್ರೆ, ಪುನರ್ವಸತಿ ಕೇಂದ್ರ, ಎಲ್ಲರನ್ನೂ ಒಳಗೊಳ್ಳುವ ಶಾಲೆ, ಆಟದ ಮೈದಾನಗಳು, ಉದ್ಯಾನವನಗಳು ಹಾಗೂ ವೃತ್ತಿಪರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜೊತೆಗೆ ಬೇಕರಿ, ಕೆಫೆ, ಕರಕುಶಲ ಸ್ಟುಡಿಯೋ, ಪ್ರಾಣಿಗಳೊಂದಿಗೆ ಕಾಲ ಕಳೆಯಲು ವಿಶೇಷ ಫಾರ್ಮ್ ಮತ್ತು ತೀವ್ರವಾಗಿ ಅಸ್ವಸ್ಥರಾದವರ ಶುಶ್ರೂಷೆಗೆ ಮೀಸಲಾದ 'ಹಾಸ್ಪಿಸ್' ವಿಭಾಗವೂ ಇಲ್ಲಿದೆ. ವಿಶೇಷವಾಗಿ ಆಟಿಸಂ, ಸೆರೆಬ್ರಲ್ ಪಾಲ್ಸಿ, ಅಪಸ್ಮಾರದಂತಹ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಇದು ನಿರಂತರ ವೈದ್ಯಕೀಯ ಮತ್ತು ಚಿಕಿತ್ಸಕ ಬೆಂಬಲ ನೀಡಲಿದೆ.
'ಅನಂತ ಆಶ್ರಯ'ದ ಸಾಮಾಜಿಕ ಜವಾಬ್ದಾರಿ ಕೇವಲ 100 ಎಕರೆ ಕ್ಯಾಂಪಸ್ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಈ ಯೋಜನೆಯು ಕರ್ಜತ್ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 1,000 ಸ್ಥಳೀಯ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಗುಣಮಟ್ಟದ ಶಿಕ್ಷಣ, ಸಮುದಾಯ ಆರೋಗ್ಯ ರಕ್ಷಣೆ ಹಾಗೂ ಪ್ರತ್ಯೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಕುಟುಂಬದ ಪ್ರೀತಿಯಿಂದ ವಂಚಿತರಾದ ಸಾವಿರಾರು ಜೀವಗಳಿಗೆ 'ಅನಂತ ಆಶ್ರಯ' ನಿಜವಾದ ಅರ್ಥದಲ್ಲಿ ಮರುಜೀವ ನೀಡುವ ತಾಯಂದಿರ ಮಡಿಲಾಗಲಿದ್ದು, ಮಾನವೀಯ ಮೌಲ್ಯಗಳ ಶ್ರೇಷ್ಠ ಸಂಕೇತವಾಗಿ ಹೊರಹೊಮ್ಮಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ