
ಈ ದಂಪತಿಯ ಮೂಢನಂಬಿಕೆ ಅವರ ಕಂದನ ಪ್ರಾಣವನ್ನೇ ಕಸಿದಿದೆ. ಹೃದಯ ವಿದ್ರಾವಕ ಘಟನೆಯೊಂದರಲ್ಲಿ 5 ವರ್ಷದ ಮಗ ಅನಾರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ಪೋಷಕರು ಹಾಗೂ ಚಿಕ್ಕಮ್ಮ ಆತನನ್ನು ಗಂಗೆಯಲ್ಲಿ ಮುಳುಗಿಸಿದ್ದಾರೆ. ಪರಿಣಾಮ ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿದೆ.
ಬಾಲಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗಂಗಾ ನದಿಯು ಅವನನ್ನು ಗುಣಪಡಿಸುತ್ತದೆ ಎಂದು ಅವನ ಹೆತ್ತವರು ನಂಬಿದ್ದರು ಎನ್ನಲಾಗಿದೆ. ಇದಕ್ಕಾಗಿ ದೆಹಲಿ ಮೂಲದ ಕುಟುಂಬವು ಜ.24, ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಹರಿದ್ವಾರಕ್ಕೆ ತೆರಳಿದೆ. ಬಳಿಕ ಅಲ್ಲಿ ಕೊರೆಯುತ್ತಿರುವ ಚಳಿಯಲ್ಲಿ, ಹರಿಯುತ್ತಿರುವ ನೀರಿನಲ್ಲಿ ಬಾಲಕನನ್ನು ಮುಳುಗಿಸಿರುವುದನ್ನು ಕಾಣಬಹುದು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕನ ಪೋಷಕರು ಪ್ರಾರ್ಥನೆಗಳನ್ನು ಪಠಿಸುತ್ತಿರುವಾಗ ಆತನ ಚಿಕ್ಕಮ್ಮ ಅವನನ್ನು ನೀರಿನ ಅಡಿಯಲ್ಲಿ ಮುಳುಗಿಸಿದ್ದಾರೆ. ತಕ್ಷಣ ಆತ ನೀರಿನಿಂದ ಹೊರಗೆ ಬರದಂತೆ ಒತ್ತಿ ಹಿಡಿದಿದ್ದಾರೆ.
ಸುತ್ತ ನೆರೆದ ಜನಗಳು ಅವನನ್ನು ಮೇಲೆತ್ತಲು ಹೇಳುತ್ತಿದ್ದರೂ ಯಾರೊಬ್ಬರೂ ಪ್ರತಿಕ್ರಿಯಿಸುವುದಿಲ್ಲ. ಕಡೆಗೆ ಜನರ ನಡುವೆಯಿಂದ ಬಂದ ಒಬ್ಬರು ಮಗುವನ್ನು ಬಲವಂತವಾಗಿ ಮೇಲೆತ್ತುತ್ತಾರೆ. ಆಗ ಹುಡುಗನ ಚಿಕ್ಕಮ್ಮ ಹಾಗೆ ಎತ್ತಿದವರಿಗೆ ಹೊಡೆಯುವುದನ್ನು ಕಾಣಬಹುದಾಗಿದೆ. ಮೇಲೆ ತಂದು ಮಗುವನ್ನು ಪರೀಕ್ಷಿಸುವಾಗಾಗಲೇ ಮಗು ಸಾವನ್ನಪ್ಪಿದೆ.
ಈ ಕುಟುಂಬವನ್ನು ಹರಿದ್ವಾರಕ್ಕೆ ಕರೆದುಕೊಂಡು ಬಂದ ಕ್ಯಾಬ್ ಚಾಲಕ ಹೇಳುವ ಪ್ರಕಾರ, ಹುಡುಗನಿಗೆ ತುಂಬಾ ಅಸೌಖ್ಯವಿದೆ ಮತ್ತು ಅವನು ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ. ದೆಹಲಿ ವೈದ್ಯರು ಭರವಸೆ ಕೈ ಬಿಟ್ಟಿದ್ದಾರೆ ಎಂದು ಕುಟುಂಬ ದಾರಿಯಲ್ಲಿ ತಿಳಿಸಿತ್ತು.
ಇನ್ನೊಂದು ವೀಡಿಯೋದಲ್ಲಿ ಬಾಲಕನ ಚಿಕ್ಕಮ್ಮ ಶವದ ಪಕ್ಕದಲ್ಲಿ ಕುಳಿತು ಮಗು ಮತ್ತೆ ಬದುಕುವುದು ಖಚಿತ ಎಂದು ಹೇಳುತ್ತಿರುವುದನ್ನು ಕಾಣಬಹುದು.
ದೆಹಲಿಯ ಉನ್ನತ ಆಸ್ಪತ್ರೆಯಲ್ಲಿ ಬಾಲಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ಎಂದು ಕುಟುಂಬದವರು ತಿಳಿಸಿರುವುದಾಗಿ ಹರಿದ್ವಾರ ನಗರ ಪೊಲೀಸ್ ಮುಖ್ಯಸ್ಥ ಸ್ವತಂತ್ರ ಕುಮಾರ್ ತಿಳಿಸಿದ್ದಾರೆ. ವಾದ್ಯರು ಮಗುವನ್ನು ಉಳಿಸಲು ಸಾಧ್ಯವಿಲ್ಲ ಎಂದಿದ್ದರಿಂದ ಗಂಗಾ ಸ್ನಾನವು ಅವನನ್ನು ಗುಣಪಡಿಸುತ್ತದೆ ಎಂದು ನಂಬಿ ಇಲ್ಲಿಗೆ ಕರೆತಂದಿದ್ದಾಗಿ ಕುಟುಂಬ ಹೇಳಿದೆ ಎಂದು ಅವರು ಹೇಳಿದ್ದಾರೆ.
ಸಧ್ಯ ಬಾಲಕನ ಪೋಷಕರು ಮತ್ತು ಆತನ ಚಿಕ್ಕಮ್ಮನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತಾಯಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಇದಂತೂ ಬಹಳ ಶಾಕಿಂಗ್ ಆಗಿದೆ ಎಂದಿದ್ದಾರೆ. ಹಲವರು ಮೂಢನಂಬಿಕೆಯನ್ನು ಜರಿದರೆ ಮತ್ತೆ ಕೆಲವರು ಪೋಷಕರ ಉದ್ದೇಶವನ್ನು ಅನುಮಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ