ಹಿಮಾಚಲ ಪ್ರದೇಶದ ಕುಲುವಿನಲ್ಲಿ ಹೊಸ ವರ್ಷಾಚರಣೆ ಮಾಡಲು ಹೋದ ಟೆಕ್ಕಿಯೋರ್ವನ ಶವ ನಾಪತ್ತೆಯಾದ ಬರೋಬರಿ ತಿಂಗಳ ಬಳಿಕ ಈಗ ನದಿಯೊಂದರ ಬಳಿ ಪತ್ತೆಯಾಗಿದೆ.
ಕುಲು: ಹಿಮಾಚಲ ಪ್ರದೇಶದ ಕುಲುವಿನಲ್ಲಿ ಹೊಸ ವರ್ಷಾಚರಣೆ ಮಾಡಲು ಹೋದ ಟೆಕ್ಕಿಯೋರ್ವನ ಶವ ನಾಪತ್ತೆಯಾದ ಬರೋಬರಿ ತಿಂಗಳ ಬಳಿಕ ಈಗ ನದಿಯೊಂದರ ಬಳಿ ಪತ್ತೆಯಾಗಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ, ಗಾಜಿಯಾಬಾದ್ ನಿವಾಸಿಯಾದ ಟೆಕ್ಕಿ ಅಭಿನವ್ ಮಿಂಗ್ವಾಲ್ ಹಾಗೂ ಆತನ ಸ್ನೇಹಿತರು ಕಳೆದ ವರ್ಷ ಡಿಸೆಂಬರ್ 15 ರಂದು ಹಿಮಾಚಲ ಪ್ರದೇಶದ ಕುಲುವಿಗೆ ಪ್ರವಾಸ ತೆರಳಿದ್ದರು. ಡಿಸೆಂಬರ್ 28 ರಂದು ಆತನ ಸ್ನೇಹಿತರು ಬಸ್ ಮೂಲಕ ವಾಪಸ್ ಗಾಜಿಯಾಬಾದ್‌ಗೆ ಮರಳಿದ್ದರು. ಆದರೆ ಅಭಿನವ್ ಮಿಂಗ್ವಾಲ್ ಹೊಸ ವರ್ಷದ ಪಾರ್ಟಿ ಮುಗಿಸಿ ಬರುವುದಾಗಿ ಹೇಳಿ ಅಲ್ಲೇ ಉಳಿದಿದ್ದ. ಅಲ್ಲದೇ ತಾನು ವಾಸವಿದ್ದ ಹಾಸ್ಟೆಲ್‌ನ್ನು ಕೂಡ ಬದಲಾಯಿಸಿದ್ದ. ನಂತರ ಡಿ. 31 ರಂದು ತನ್ನ ಕುಟುಂಬದ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದು, ಜ.1 ರಂದು ರಿಟರ್ನ್ ಟಿಕೆಟ್ ಬುಕ್ ಮಾಡಿದ್ದು, ಜನವರಿ 2 ರಂದು ಮನೆಗೆ ಬರುವುದಾಗಿ ಹೇಳಿದ್ದ. ಆದರೆ ಜನವರಿ 2 ಬಂದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಗಾಬರಿಗೊಂಡಿದ್ದರು.
ಈಗ ಆತ ನಾಪತ್ತೆಯಾಗಿ 35 ದಿನಗಳ ನಂತರ ಕುಲು ಸಮೀಪದ ಪಾರ್ವತಿ ನದಿಯಲ್ಲಿ ಬಂಡೆಗಳ ಮಧ್ಯೆ ಯುವಕನೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ಹೊಸ ವರ್ಷದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ಥಳದಿಂದ ಸುಮಾರು 800 ಮೀಟರ್ ದೂರದಲ್ಲಿ ಈತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶವೂ ಕಾಡು ಹಾಗೂ ಕಲ್ಲು ಬಂಡೆಗಳಿಂದ ಕೂಡಿದೆ. ಈ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಬಾರಿ ಪೊಲೀಸರು ಹಾಗೂ ಅಭಿನವ್ ( Abhinav Mingwal)ಕುಟುಂಬ ಆಗಮಿಸಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿರಲಿಲ್ಲ. ಆದರೆ ಈಗ ಶವ ಪತ್ತೆಯಾಗಿದೆ.
ಸೈಕೋ ಟೆಕ್ಕಿ ದಿಲ್ಲಿ ಪ್ರಸಾದ್‌ನ ಮೊಬೈಲ್ ನಲ್ಲಿ 208 ಖಾಸಗಿ ವೀಡಿಯೊಗಳು ಪತ್ತೆ!
ನದಿಯಲ್ಲಿ ಶವ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮಧ್ಯಾಹ್ನದ ಸಮಯವಾಗಿದ್ದು, ಶವ ಸಂಪೂರ್ಣವಾಗಿ ಕೊಳೆತಿದ್ದು, ಗುರುತು ಪತ್ತೆಯಾಗದ ಸ್ಥಿತಿಯಲ್ಲಿತ್ತು. ನಂತರ ಅಭಿನವ್ ಕುಟುಂಬದವರಿಗೆ ಕರೆ ಮಾಡಿ ಗುರುತು ಪತ್ತೆ ಮಾಡಲು ಕರೆಯಲಾಯಿತು. ಅಭಿನವ್ ಪೋಷಕರು ಆಗಮಿಸಿ ಶವದ ಮೇಲಿದ್ದ ಬಟ್ಟೆಯನ್ನು ಆಧರಿಸಿ ಶವ ಅವರ ಕುಟುಂಬಕ್ಕೆ ಸೇರಿದ್ದು ಎಂಬುದನ್ನು ಖಚಿತಪಡಿಸಿದರು ಎಂದು ಕುಲು ಪೊಲೀಸ್ ವರಿಷ್ಠಾಧಿಕಾರಿ ಸಾಕ್ಷಿ ವರ್ಮಾ ಕಾರ್ತಿಕೇಯನ್ (Sakshi Verma Kartikeyan) ಮಾಹಿತಿ ನೀಡಿದರು.
ನಮಗೆ ಶವ ಸಿಕ್ಕಿರುವ ಪ್ರದೇಶ ನೋಡಿ ಅಚ್ಚರಿಯಾಗಿದೆ ಏಕೆಂದರೆ ನಾವು ಅಲ್ಲಿ ಹಲವು ಬಾರಿ ಅಭಿನವ್‌ಗಾಗಿ ಕೂಲಂಕುಷವಾಗಿ ಶೋಧ ನಡೆಸಿದ್ದೇವೆ. ಅಲ್ಲದೇ ಆತನಿಗೆ ಎನ್‌ಡಿಆರ್‌ಎಫ್ ತಂಡ ಹಾಗೂ ಸ್ಥಳೀಯ ಈಜುಗಾರರು ಕೂಡ ನದಿಯಲ್ಲಿ ಶೋಧ ನಡೆಸಿದ್ದರು. ಶವದ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಯಾವ ಕಾರಣದಿಂದ ಸಾವು ಸಂಭವಿಸಿದೆ ಎಂಬುದು ತಿಳಿಯಲಿದೆ ಎಂದು ಎಸ್‌ಪಿ ಹೇಳಿದರು.
ಅಭಿನವ್ ಬೆಂಗಳೂರಿನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದು, ಈತ ತನ್ನ ಸ್ನೇಹಿತರಾದ ಗಾಜಿಯಾಬಾದ್‌ನ ಗುರು ಚೇತನ್( Gur Chetan) ಹಾಗೂ ಅಪೇಕ್ಷಿತ್ ಸಿಂಗ್ (Apekshit Singh) ಜೊತೆ ಕುಲುವಿಗೆ ಪ್ರವಾಸ ತೆರಳಿದ್ದರು. ಸ್ನೇಹಿತರು ನಂತರದಲ್ಲಿ ವಾಪಸ್ ಆಗಿದ್ದರೆ, ಅಭಿನವ್ ಮಾತ್ರ ಹೊಸ ವರ್ಷದ ಸಂಭ್ರಮಾಚರಣೆಯನ್ನು ಅಲ್ಲೇ ನಡೆಸಿ ವಾಪಸ್ ಬರುವುದಾಗಿ ಅಲ್ಲೇ ಉಳಿದಿದ್ದ.
ಟೆಕ್ ಉದ್ಯೋಗಿಗಳಿಗೆ ತಲೆಬಿಸಿ: ಯಾಕೆ ದಿನ ದಿನಕ್ಕೂ ವಜಾಗೊಳ್ತಿದ್ದಾರೆ ಟೆಕ್ಕಿಗಳು ಗೊತ್ತಾ?
ಅಲ್ಲದೇ ಡಿಸೆಂಬರ್ 31 ರಂದು ತಾನು ವಾಸವಿದ್ದ ಹಾಸ್ಟೆಲ್ ವಿಳಾಸವನ್ನು ಗೂಗಲ್ ಮ್ಯಾಪ್‌ನಲ್ಲಿ ಆತ ಹುಡುಕಿರುವುದು ಕಂಡು ಬಂದಿದೆ. ಕಳೆದ 5 ವಾರಗಳಿಂದ ಅಭಿನವ್ ಕುಟುಂಬ ದಿಗಿಲು ಹಾಗೂ ಸಂಕಟದಿಂದಲೇ ನಿರಂತರ ಹುಡುಕಾಡಿದೆ. ಅಲ್ಲದೇ ಆತನ ಕುಟುಂಬ ಅಭಿನವ್ ಅನ್ನು ಹುಡುಕಿ ಕೊಟ್ಟಲ್ಲಿ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಘೋಷಿಸಿತ್ತು. ಆದರೆ ಶವವೂ ಸಿಗದ ಹಿನ್ನೆಲೆಯಲ್ಲಿ ನಿರಾಸೆಯಿಂದ ಹಿಂದಿರುಗಿತ್ತು. ಆದರೆ ಅವರು ಗಾಜಿಯಾಬಾದ್ ತಲುಪಿದ ಸ್ವಲ್ಪ ಹೊತ್ತಿನಲ್ಲಿ ಅಭಿನವ್ ಶವ ಪತ್ತೆಯಾಗಿರುವುದ ಅಚ್ಚರಿಗೆ ಕಾರಣವಾಗಿದೆ.
ಹೌದು ಇದು ನಮ್ಮ ಅಭಿನವ್, ನಾವು ಆತನನ್ನು ಆತ ಧರಿಸಿರುವ ಬಟ್ಟೆಯಿಂದ ಗುರುತಿಸಿದ್ದೇವೆ. ನಾವು ಆ ಸ್ಥಳದಲ್ಲಿ ಹಲವು ಬಾರಿ ಶೋಧ ನಡೆಸಿದ್ದೇವೆ. ಆದರೆ ಆಗ ಆತ ನಮಗೆ ಕಾಣಿಸಿಲ್ಲ. ಹೀಗಾಗಿ ಯಾರೂ ಆತನನ್ನು ಕೊಲೆ ಮಾಡಿದ್ದು, ನಾವು ಈಚೆ ಬರುವುದನ್ನೇ ಕಾದು ಶವವನ್ನು ಆ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ಅಭಿನವ್ ಭಾವ ಸಾಗರ್ ಬಾಟ್ಲಾ (Sagar Bathla) ಹೇಳಿದ್ದಾರೆ.