ಐದೂ ರಾಜ್ಯಗಳಲ್ಲಿ ಬಿಜೆಪಿಗೆ ಜಯ: ಮೋದಿ ವಿಶ್ವಾಸ!

By Suvarna NewsFirst Published Nov 8, 2021, 10:08 AM IST
Highlights

* ಚುನಾವಣೆಗಳಲ್ಲಿ ಪಕ್ಷವು ಜನರ ವಿಶ್ವಾಸ ಗಳಿಸಲಿದೆ

* ಜನರು-ಪಕ್ಷದ ನಡುವೆ ಕಾರ‍್ಯಕರ್ತರು ಸೇತುವೆ ಆಗಬೇಕು

* ಸೇವೆ, ಸಂಕಲ್ಪ, ಸಮರ್ಪಣೆಯೇ ಬಿಜೆಪಿ ಮೌಲ್ಯ

* ಬಿಜೆಪಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಪಕ್ಷ

* ನಮ್ಮ ಪಕ್ಷ ಕುಟುಂಬದ ಸುತ್ತ ಗಿರಕಿ ಹೊಡೆಯಲ್ಲ

ನವದೆಹಲಿ(ನ.08): ‘ಜನಸಾಮಾನ್ಯರು ಹಾಗೂ ಪಕ್ಷದ ನಡುವೆ ಕಾರ್ಯಕರ್ತರು ಸಂಪರ್ಕ ಸೇತುವಿನಂತೆ ಕೆಲಸ ಮಾಡಬೇಕು’ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಮುಂಬರುವ ಪಂಚರಾಜ್ಯ ಚುನಾವಣೆಗಳಲ್ಲಿ (Five States Elections) ಜನರ ವಿಶ್ವಾಸವನ್ನು ಬಿಜೆಪಿ (BJP) ಸಂಪಾದಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ದೇಶದಲ್ಲಿ ತಲೆದೋರಿದ ನಂತರ ಇದೇ ಮೊದಲ ಬಾರಿ ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ (BJP national executive meeting) ಮಾತನಾಡಿದ ಅವರು, ‘ಸೇವೆ, ಸಂಕಲ್ಪ ಹಾಗೂ ಸಮರ್ಪಣೆ’ ಎಂಬ ಮೌಲ್ಯಗಳ ಅಡಿ ಬಿಜೆಪಿ ಕೆಲಸ ಮಾಡುತ್ತದೆ. ಯಾವುದೋ ಒಂದು ಕುಟುಂಬದ ಸುತ್ತ ಗಿರಕಿ ಹೊಡೆಯುವುದಿಲ್ಲ. ಬಿಜೆಪಿ ಕುಟುಂಬ ಪಕ್ಷವಲ್ಲ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ (Congress) ಅನ್ನು ಚುಚ್ಚಿದರು.

‘ಬಿಜೆಪಿ (BJP) ಇತಿಹಾಸ ಅವಲೋಕಿಸಿದರೆ ಜನರಿಗೆ ಹತ್ತಿರವಾದ ವಿಷಯಗಳ ಬಗ್ಗೆ ಪಕ್ಷ ಸಂಯೋಜಿತವಾಗಿರುವುದು ಕಂಡುಬರುತ್ತದೆ. ಹೀಗಾಗಿ ಪಕ್ಷ ಹಾಗೂ ಜನರ ನಡುವಿನ ಕೊಂಡಿಯಂತೆ ಕಾರ್ಯಕರ್ತರು ಕೆಲಸ ಮಾಡಬೇಕು. ಕೋವಿಡ್‌ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮಾಡಿದ ಸೇವೆ ಸ್ಮರಣಾರ್ಹ’ ಎಂದು ಮೋದಿ ನುಡಿದರು. ಸಭೆಯ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌ ಅವರು ಪ್ರಧಾನಿ ಭಾಷಣದ ವಿವರ ನೀಡಿದರು.

ಈ ನಡುವೆ, ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌ ಹಾಗೂ ಮಣಿಪುರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಈ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಅಥವಾ ಪಕ್ಷಾಧ್ಯಕ್ಷರು ಕಾರ್ಯಕಾರಿಣಿಯಲ್ಲಿ ಉಪಸ್ಥಿತರಿದ್ದು, ಚುನಾವಣಾ ಸಿದ್ಧತೆಗಳ ಮಾಹಿತಿ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ‘ಚುನಾವಣೆ ನಡೆಯಲಿರುವ ಐದೂ ರಾಜ್ಯಗಳ ಮುಖ್ಯಮಂತ್ರಿಗಳ (Chief Ministers) ಅಭಿಪ್ರಾಯಗಳನ್ನು ನಾನು ಆಲಿಸಿದೆ. ಅವರು ಮಾಡಿದ ಕೆಲಸ ಹಾಗೂ ಜಯಗಳಿಸುವ ವಿಶ್ವಾಸವು ಅವರ ಮಾತುಗಳಲ್ಲೇ ವ್ಯಕ್ತವಾಗುತ್ತದೆ. ಜನರ ಆಶೋತ್ತರಗಳಿಗೆ ಬಿಜೆಪಿ ಸ್ಪಂದಿಸುತ್ತಿದೆ. ಈ ಎಲ್ಲ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜನರ ವಿಶ್ವಾಸ ಗಳಿಸಲಿದೆ ಎಂಬ ವಿಶ್ವಾಸ ನನ್ನದು. ಇದು ಸೇವೆಯ ಪ್ರತಿಫಲ’ ಎಂದು ನುಡಿದರು.

‘ಇನ್ನು ಪಕ್ಷದ ಸ್ಥಾಪನೆಯ ದಿನದಿಂದ ಈವರೆಗೂ ದುಡಿದವರನ್ನು ಸದಾ ಸ್ಮರಿಸಬೇಕು. ಅವರು ಇಂದು ನಮ್ಮ ಜತೆಗೆ ಇಲ್ಲದಿರಬಹುದು. ಆದರೆ ಅವರ ಕೊಡುಗೆಗಳ ಸ್ಮರಣೆ ಮಾಡಬೇಕು’ ಎಂದು ಮೋದಿ ಕರೆ ನೀಡಿದರು.

‘ಇಂದು ವಿಶ್ವವೇ ಭಾರತವನ್ನು ಕೊಂಡಾಡುತ್ತಿದೆ. ಇದಕ್ಕೆ ಕೇವಲ ಮೋದಿ ಕಾರಣ ಎಂದರೆ ತಪ್ಪು. ಜನರಲ್ಲಿನ ಆತ್ಮವಿಶ್ವಾಸ ಹಾಗೂ ಇಚ್ಛಾಶಕ್ತಿಯೇ ಇದಕ್ಕೆ ಕಾರಣ’ ಎಂದು ಭಾವುಕರಾಗಿ ನುಡಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಸಚಿವರು ಸೇರಿದಂತೆ ಪಕ್ಷದ ಕಾರ್ಯಕಾರಿಣಿ ಸಮಿತಿಯ 124 ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ (LK Advani), ಮುರಳಿ ಮನೋಹರ ಜೋಶಿ ಹಾಗೂ ಇನ್ನೂ ಹಲವು ಬಿಜೆಪಿ ರಾಜ್ಯದ ಮುಖ್ಯಮಂತ್ರಿಗಳು ವರ್ಚುವಲ್‌ ಆಗಿ ಸಭೆಯಲ್ಲಿ ಭಾಗಿಯಾಗಿದ್ದರು.

ಬಿಜೆಪಿ ಕಾರ‍್ಯಕಾರಿಣಿಗೆ ಆನ್‌ಲೈನ್‌ನಲ್ಲೇ ಸಿಎಂ, ಬಿಎಸ್‌ವೈ ಹಾಜರು

ಭಾನುವಾರ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಕ್ಷದ ರಾಜ್ಯ ಘಟಕದ ಅಪೇಕ್ಷಿತ ಮುಖಂಡರು ಬೆಂಗಳೂರಿನಿಂದ ವೆಬೆಕ್ಸ್‌ ಮೂಲಕ ಭಾಗವಹಿಸಿದ್ದರು.

ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸೇರಿದ ಮುಖಂಡರು ಸಭೆಯ ಕಲಾಪದಲ್ಲಿ ಭಾಗಿಯಾದರು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಆರ್‌.ಅಶೋಕ್‌, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಉಮೇಶ್‌ ಜಾಧವ್‌, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌ ಅವರು ಪಾಲ್ಗೊಂಡಿದ್ದರು.

click me!