
ನವದೆಹಲಿ (ಜ. 25): ಮೂವರು ಮುಖ್ಯಮಂತ್ರಿಗಳ ಬದಲಾವಣೆ, ಬೂದಿ ಮುಚ್ಚಿದ ಕೆಂಡದಂತಿರುವ ಆಡಳಿತ ವಿರೋಧಿ ಅಲೆ, ಮತಾಂತರದ ಪಿಡುಗಿನಂಥ ಸವಾಲುಗಳು ಸದ್ಯದಲ್ಲೇ ಚುನಾವಣೆ ಎದುರಿಸುತ್ತಿರುವ ಉತ್ತರಾಖಂಡದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಮುಂದಿವೆ.
ಇವೆಲ್ಲವುಗಳಿಂದ ಪಾರಾಗಿ ದೇವಭೂಮಿಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಅನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದೆ ಬಿಜೆಪಿ. ಇಲ್ಲಿನ ಗೆಲುವಿನ ತಂತ್ರಗಾರಿಕೆ ರೂಪಿಸುವ ಹೊಣೆಹೊತ್ತಿರುವವರು ಚುನಾವಣಾ ಉಸ್ತುವಾರಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಕನ್ನಡಿಗ ಪ್ರಹ್ಲಾದ್ ಜೋಶಿ. ಉತ್ತರಾಖಂಡದ ರಾಜಕೀಯ ಬೆಳವಣಿಗೆಗಳ ಕುರಿತು ಅವರು ‘ಕನ್ನಡಪ್ರಭ’ ಜೊತೆ ಅವರು ಹಂಚಿಕೊಂಡ ಅನಿಸಿಕೆಗಳು ಹೀಗಿವೆ.
1. ಉತ್ತರಾಖಂಡದಲ್ಲಿ 5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಬಿಜೆಪಿಗೆ ಇದು ಬಹುದೊಡ್ಡ ಸವಾಲು ಅಲ್ವಾ?
ಉತ್ತರಾಖಂಡ ರಾಜ್ಯ ರಚನೆಯಾಗಿ ಬಿಜೆಪಿ ಅಧಿಕಾರದ ಚುಕ್ಕಾಣೆ ಹಿಡಿದ ಬಳಿಕ ಯಾವತ್ತೂ ಆಗಿರದ ಅಭಿವೃದ್ಧಿ ಕೆಲಸಗಳು ಆಗಿವೆ. ಇದಕ್ಕೂ ಮೊದಲು ಅಭಿವೃದ್ಧಿಯ ಮಾತೇ ಅಲ್ಲಿರಲಿಲ್ಲ. ಹತ್ತಾರು ನದಿಗಳು ಹರಿದರೂ ಕುಡಿಯುವ ನೀರಿಗೂ ತಾಪತ್ರಯ ಇತ್ತು. ನಾವು ಅದನ್ನು ಬಗೆಹರಿಸಿದ್ದೇವೆ. ರಸ್ತೆ ಸಂಪರ್ಕ, ಏಮ್ಸ್ ನಿರ್ಮಾಣ ಸೇರಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದೇವೆ. ಮೆಡಿಕಲ್ ಕಾಲೇಜು, ಹೊಸ ಹೊಸ ರೈಲ್ವೆ ಯೋಜನೆಗಳು, ಚಾರ್‌ಧಾಮ್ ಅಭಿವೃದ್ಧಿ ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಕ್ರಮಗಳು ನಮ್ಮ ಅವಧಿಯಲ್ಲೇ ಆಗಿವೆ.
UP Election: ಅಭಿವೃದ್ಧಿ ನಗಣ್ಯ, ಜಾತಿ ಲೆಕ್ಕಾಚಾರದಲ್ಲೇ ಮುಳುಗಿರುವ ರಾಜಕೀಯ ಪಕ್ಷಗಳು
ಮೋದಿ ಸರ್ಕಾರ ಇದ್ದರೆ ಮಾತ್ರ ರಾಜ್ಯದ ಅಭಿವೃದ್ಧಿ ಅಂತ ಅಲ್ಲಿನ ಜನರಿಗೂ ಅನಿಸಿದೆ. ಒಂದು ಬಾರಿ ಕಾಂಗ್ರೆಸ್, ಇನ್ನೊಂದು ಬಾರಿ ಬಿಜೆಪಿ ಅನ್ನುವ ದಾಖಲೆಯನ್ನೂ ಈ ಬಾರಿ ಬಿಜೆಪಿ ಸರಿಗಟ್ಟಲಿದೆ. ಅಭಿವೃದ್ಧಿ ಆಧಾರದ ಮೇಲೆ ಉತ್ತರಾಖಂಡ ಜನರ ಮತವನ್ನು ನಾವು ಕೇಳುತ್ತೇವೆ. ನಾವು ಈಗಾಗಲೇ ಸಿಎಂ ಅಭ್ಯರ್ಥಿ ಪುಷ್ಕರ್ ಧಾಮಿ ಅಂತ ಘೋಷಣೆ ಮಾಡಿದ್ದೇವೆ. ದೇಶದ ಅತೀ ದೊಡ್ಡ ಹಾಗೂ ಹಳೆಯ ಪಕ್ಷ ಅಂತ ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಒಬ್ಬ ಸಿಎಂ ಅಭ್ಯರ್ಥಿಯನ್ನು ಹೆಸರಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ನಲ್ಲಿ ಪ್ರತಿಯೊಬ್ಬರೂ ನಾವೇ ಮುಖ್ಯಮಂತ್ರಿ ಅಂತ ಹೇಳಿಕೊಳ್ಳುತ್ತಿದ್ದಾರೆ.
2 ಪ್ರವಾಹ, ಕೊರೊನಾ ನಿರ್ವಹಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ವಿಫಲ ಆಗಿದೆ ಅನ್ನೋದು ಕಾಂಗ್ರೆಸ್ ಆರೋಪ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?
ಕೊರೋನಾ ವಿಚಾರದಲ್ಲಿ ಇಡೀ ದೇಶ ಒಂದು ಹಂತಕ್ಕೆ ಸುರಕ್ಷಿತವಾಗಿದೆ ಅಂದರೆ ಅದಕ್ಕೆ ಬಿಜೆಪಿ, ಮೋದಿ ನೇತೃತ್ವದ ಸರ್ಕಾರ ಕಾರಣ. ರಾಜ್ಯಗಳ ಜೊತೆ ಮೋದಿ ಮತ್ತು ಕೇಂದ್ರ ಸರ್ಕಾರ ನಿಂತಿದ್ದು ಕೊರೋನಾ ನಿಯಂತ್ರಣಕ್ಕೆ ಕಾರಣವಾಯಿತು. ಇದರ ಪರಿಣಾಮ ಉತ್ತರಾಖಂಡದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಲಸಿಕಾಕರಣ ಆಗಿದೆ. ಸೋಂಕು ನಿಯಂತ್ರಣದಲ್ಲೂ ಇದೆ. ಅಂಥ ಗುಡ್ಡಗಾಡು ಪ್ರದೇಶದಲ್ಲೂ ಆರೋಗ್ಯ ಕಾರ್ಯಕರ್ತರು ಜನರನ್ನು ತಲುಪಿದ್ದಾರೆ. ಪ್ರವಾಹದ ಸಂದರ್ಭದಲ್ಲೂ ಮುಖ್ಯಮಂತ್ರಿ ಧಾಮಿ ಬರೀಗಾಲಲ್ಲಿ ಸುತ್ತಾಡಿ ಜನರನ್ನು ತಲುಪಿದ್ದಾರೆ.
3 ಉತ್ತರಾಖಂಡದಲ್ಲೂ ಆಡಳಿತ ವಿರೋಧ ಅಲೆ ಇದೆ. ಮುಖಂಡರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಬೆಳವಣಿಗೆ ಕುರಿತು ನಿಮ್ಮ ಪ್ರತಿಕ್ರಿಯೆ ?
ಒಬ್ಬರು ಸಚಿವರನ್ನು ಪಕ್ಷದಿಂದ ನಾವು ವಜಾ ಮಾಡಿರುವುದು ಬಿಟ್ಟರೆ ಯಾರೂ ಬಿಜೆಪಿ ಪಕ್ಷ ಬಿಟ್ಟು ಹೋಗಿಲ್ಲ. ಇನ್ನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಅನೇಕರು ಬರುತ್ತಿದ್ದಾರೆ. ಒಂದು ಪ್ರಕರಣದಲ್ಲಿ ಒಬ್ಬರನ್ನು ಪಕ್ಷವೇ ಹೊರಹಾಕಿದೆ.
UP Election: ಕಾಂಗ್ರೆಸ್ ಚೇತರಿಕೆ ಕಂಡರೆ ದಿಲ್ಲಿಯಲ್ಲಿ ಹೆಚ್ಚಲಿದೆ ಪ್ರಿಯಾಂಕಾ ರಾಜಕೀಯ ಮಹತ್ವ
4 ಹೊಸ ಮತದಾರರನ್ನು ಸೆಳೆಯಲು, ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಬಿಜೆಪಿ ತಂತ್ರಗಾರಿಕೆ ಏನು ?
ಚುನಾವಣಾ ರಣತಂತ್ರ ಕುರಿತು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಆದರೆ ಚುನಾವಣೆಯಲ್ಲಿ ಗೆಲುವು ದಾಖಲಿಸಲು ಏನು ರಣತಂತ್ರ ರೂಪಿಸಬೇಕೋ ಅದನ್ನು ಮಾಡುತ್ತಿದ್ದೇವೆ. ನಮ್ಮ ತಂತ್ರಗಾರಿಕೆ ಪರಿಣಾಮಗಳು ಫಲಿತಾಂಶದ ದಿನವಾದ ಮಾ.10ರಂದು ಗೊತ್ತಾಗಲಿದೆ.
5 ಈ ಬಾರಿ ಬಿಜೆಪಿ ಎಷ್ಟುಸ್ಥಾನಗಳಲ್ಲಿ ಗೆಲುವು ದಾಖಲಿಸುವ ನಿರೀಕ್ಷೆ ಇದೆ ?
ಅರವತ್ತು ದಾಟುತ್ತವೇವೆ ಅನ್ನೋದು ನಮ್ಮ ಘೋಷಣೆ. ಇದಕ್ಕೂ ಮೀರಿದ ಫಲಿತಾಂಶ ಬರಲಿದೆ ಅನ್ನೋ ನಿರೀಕ್ಷೆ ಬಿಜೆಪಿಗೆ ಇದೆ. ಇದಕ್ಕಾಗಿ ಪಕ್ಷ ಶ್ರಮಿಸುತ್ತಿದೆ.
ಕೊರೋನಾ ವಿಚಾರದಲ್ಲಿ ಇಡೀ ದೇಶ ಒಂದು ಹಂತಕ್ಕೆ ಸುರಕ್ಷಿತವಾಗಿದೆ ಅಂದರೆ ಅದಕ್ಕೆ ಬಿಜೆಪಿ, ಮೋದಿ ನೇತೃತ್ವದ ಸರ್ಕಾರ ಕಾರಣ.
ದೇಶದ ಅತೀ ದೊಡ್ಡ ಹಾಗೂ ಹಳೆಯ ಪಕ್ಷ ಅಂತ ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಒಬ್ಬ ಸಿಎಂ ಅಭ್ಯರ್ಥಿಯನ್ನು ಹೆಸರಿಸಲು ಸಾಧ್ಯವಾಗಿಲ್ಲ.
- ಡೆಲ್ಲಿ ಮಂಜು, ಕನ್ನಡ ಪ್ರಭ ಸಂದರ್ಶನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ