
ರೇಷನ್ ಅಂಗಡಿಯಲ್ಲಿ ದಿನಸಿ ಸಾಮಗ್ರಿ ಕೊಳ್ಳಲು ಹೋದ ಜನರಿಗೆ ರಾಷ್ಟ್ರಧ್ವಜ ಕೊಂಡುಕೊಳ್ಳಲು ಒತ್ತಾಯಿಸಿದ ಸಿಬ್ಬಂದಿಯ ವಿಡಿಯೋವೊಂದು ವೈರಲ್ ಆಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ವರುಣ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. 20 ರೂ.ಗೆ ತಿರಂಗ ಧ್ವಜವನ್ನು ಕೊಂಡುಕೊಳ್ಳಲು ಹಲವರಿಗೆ ಆ ಸಿಬ್ಬಂದ ಒತ್ತಾಯಿಸಿದ್ದಾರೆ ಎಂದು ವಿಡಿಯೋದಲ್ಲಿ ನೋಡಬಹುದು.
ಹಲವು ವಿಚಾರಗಳಲ್ಲಿ ಕೇಸರಿ ಪಕ್ಷದ ವಿರುದ್ಧವೇ ಹರಿಹಾಯುವ ಫಿಲಿಬಿಟ್‌ನ ಬಿಜೆಪಿ ಸಂಸದ ವರುಣ್ ಗಾಂಧಿ, ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಸ್ವಾತಂತ್ರ್ಯದ 75ನೇ ವರ್ಷಾಚರಣೆ ಬಡವರಿಗೆ ಹೊರೆಯಾದರೆ ಅದು ದುರದೃಷ್ಟಕರ ಎಂಬ ಕ್ಯಾಪ್ಷನ್ ಅನ್ನು ಸಹ ಹಂಚಿಕೊಂಡಿದ್ದಾರೆ. ರೇಷನ್ ಕಾರ್ಡ್ ಹೊಂದಿದವರಿಗೆ ರಾಷ್ಟ್ರ ಧ್ವಜ ಕೊಂಡುಕೊಳ್ಳಲು ಒತ್ತಾಯಿಸಲಾಗುತ್ತಿದೆ. ಇಲ್ಲದಿದ್ದರೆ ಅವರಿಗೆ ನೀಡಬೇಕಾದ ಧಾನ್ಯಗಳನ್ನು ಕೊಡಲು ನಿರಾಕರಿಸಲಾಗುತ್ತಿದೆ. ಬಡವರ ತುತ್ತು ಅನ್ನ ಕಸಿದುಕೊಂಡು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಯೂರಿರುವ ‘ತಿರಂಗ’ದ ಬೆಲೆ ಕೀಳುವುದು ನಾಚಿಕೆಗೇಡಿನ ಸಂಗತಿ ಎಂದೂ ವರುಣ್ ಗಾಂಧಿ ಕಿಡಿ ಕಾರಿದ್ದಾರೆ.
UP Elections: ಬಿಜೆಪಿಗೆ ತನ್ನದೇ ನಾಯಕರಿಂದ ಸಂಕಷ್ಟ, ಕ್ರಮ ಕೈಗೊಳ್ಳುವ ಸಾಧ್ಯತೆ!
ಹರ್ಯಾಣದ ಕರ್ನಾಲ್‌ನಲ್ಲಿ ಈ ವಿಡಿಯೋವನ್ನು ಸುದ್ದಿ ಪೋರ್ಟಲ್‌ವೊಂದು ರೆಕಾರ್ಡ್ ಮಾಡಿದ್ದು, ಈ ವಿಡಿಯೋದಲ್ಲಿ ರೂ. 20 ಕೊಟ್ಟು ರಾಷ್ಟ್ರಧ್ವಜ ಕೊಂಡುಕೊಳ್ಳಲು ಒತ್ತಾಯಿಸಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ನಡೆಸುವ ರೇಷನ್ ಡಿಪೋವೊಂದರಲ್ಲಿ ಈ ರೀತಿ ಒತ್ತಾಯಿಸಲಾಗುತ್ತಿದೆ ಎಂದೂ ಹೇಳಲಾಗಿದೆ.
ರೇಷನ್ ಡಿಪೋದ ಸಿಬ್ಬಂದಿ ಎನ್ನಲಾದ ವ್ಯಕ್ತಿ, ರೇಷನ್ ಕೊಳ್ಳುವ ಪ್ರತಿ ವ್ಯಕ್ತಿ ಸಹ ರೂ. 20 ಕೊಟ್ಟು ತಿರಂಗ ಧ್ವಜ ಕೊಂಡುಕೊಳ್ಳಬೇಕೆಂದು ಹಾಗೂ ಅದನ್ನು ತಮ್ಮ ಮನೆಗಳಲ್ಲಿ ಹಾಕಿಕೊಳ್ಳಬೇಕೆಂದು ನಮಗೆ ಆದೇಶ ಬಂದಿದೆ ಎಂದು ಆ ವಿಡಿಯೋದಲ್ಲಿ ಹೇಳಿರುವುದನ್ನು ಕೇಳಬಹುದು. ಅಲ್ದೆ, ಧ್ವಜ ಕೊಂಡುಕೊಳ್ಳದಿದ್ದರೆ ಅಂತಹವರಿಗೆ ರೇಷನ್ ಕೊಡಬೇಡಿ ಎಂದು ನಮಗೆ ಹೇಳಲಾಗಿದೆ. ನಮಗೆ ಬಂದಿರುವ ಆದೇಶವನ್ನು ನಾವು ಪಾಲಿಸಬೇಕಿದೆ ಎಂದೂ ಆ ವ್ಯಕ್ತಿ ಹೇಳಿದ್ದಾರೆ.
UP Election: ಚುನಾವಣಾ ಅಖಾಡದಲ್ಲಿ ವರುಣ್ ಗಾಂಧಿ ಕಾಣಿಸುತ್ತಿಲ್ಲ ಯಾಕೆ..?
ಡಿಪೋ ಮಾಲೀಕನ ಲೈಸೆನ್ಸ್ ಅಮಾನತು..!
ಇನ್ನು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿಪೋ ಮಾಲೀಕನ ಲೈಸೆನ್ಸ್ ಅನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಜನರ ಹಾದಿ ತಪ್ಪಿಸುತ್ತಿದ್ದ ಡಿಪೋ ಮಾಲೀಕನ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಡೆಪ್ಯುಟಿ ಕಮೀಷನರ್ ಅನೀಶ್ ಯಾದವ್ ಹೇಳಿದ್ದಾರೆ. ಅಲ್ಲದೆ, ಈ ರೀತಿಯ ಇತರೆ ಉದಾಹರಣೆಗಳು ಇದ್ದರೆ ಆ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಿ ಎಂದು ಅವರು ಜನರನ್ನು ಮನವಿ ಮಾಡಿಕೊಂಡಿದ್ದಾರೆ. ಹಾಗೂ, ಜನರ ಅನುಕೂಲಕ್ಕಾಗಿ ರಾಷ್ಟ್ರಧ್ವಜಗಳನ್ನು ರೇಷನ್ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅವರಿಗೆ ಬೇಕಿದ್ದಲ್ಲಿ ಮಾತ್ರ ಧ್ವಜ ಕೊಂಡುಕೊಳ್ಳಬಹುದೆಂದೂ ಸ್ಪಷ್ಟನೆ ನೀಡಿದ್ದಾರೆ.
ಈ ವರ್ಷ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ 75 ವರ್ಷಗಳ ಸ್ವಾತಂತ್ರೋತ್ಸವ ಆಚರಿಸಲು ಸರ್ಕಾರದ ಭವ್ಯ ಯೋಜನೆಗಳ ನಡುವೆ ಬಿಜೆಪಿ ಸಂಸದ ವರುಣ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ 'ಹರ್ ಘರ್ ತಿರಂಗ' ಅಭಿಯಾನ ನಡೆಸಲಾಗುತ್ತಿದ್ದು, ಈ ಅಭಿಯಾನದಡಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಧ್ವಜ ಹಾರಿಸಲು ಅಥವಾ ಇಟ್ಟುಕೊಳ್ಳಲು ಮನವಿ ಮಾಡಲಾಗಿದೆ. ಇನ್ನು, ಈ ಅಭಿಯಾನದ ಚಾಲನೆಯ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಡಿಪಿಯನ್ನು "ತಿರಂಗ" (ತ್ರಿವರ್ಣ ಅಥವಾ ರಾಷ್ಟ್ರಧ್ವಜ) ಎಂದು ಬದಲಾಯಿಸಿದ್ದಾರೆ ಮತ್ತು ಅದೇ ರೀತಿ ಮಾಡಲು ನಾಗರಿಕರಿಗೂ ಮನವಿ ಮಾಡಿದ್ದಾರೆ.
ಇನ್ನು, ಕೇಂದ್ರ ಸರ್ಕಾರದ ಹಲವು ಯೋಜನೆ, ನಿರ್ಧಾರಗಳ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಆಗಾಗ ಕಿಡಿ ಕಾರುತ್ತಿರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ