ಕಾಂಗ್ರೆಸ್ ದತ್ತಿ ಸಂಸ್ಥೆಗೆ ಚೀನಾದಿಂದ ದೇಣಿಗೆ..!

By Kannadaprabha NewsFirst Published Jun 26, 2020, 9:48 AM IST
Highlights

ಕಾಂಗ್ರೆಸ್‌ನ ರಾಜೀವ್‌ ಗಾಂಧಿ ಫೌಂಡೇಷನ್‌ಗೆ ಚೀನಾದಿಂದ ದೇಣಿಗೆ ಪಡೆಯಲಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಈ ಕುರಿತಂತೆ ಪರ ಹಾಗೂ ವಿರೋಧ ಚರ್ಚೆಗಳು ಆರಂಭವಾಗಿವೆ. ಇದರ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜೂ.26): ಚೀನಾ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಡುವಣ ಸಮರ ತಾರಕಕ್ಕೇರಿದೆ. 2005-06ರಲ್ಲಿ ಕಾಂಗ್ರೆಸ್‌ನ ರಾಜೀವ್‌ ಗಾಂಧಿ ಫೌಂಡೇಷನ್‌ಗೆ ಚೀನಾದಿಂದ ದೇಣಿಗೆ ಪಡೆಯಲಾಗಿದೆ ಎಂದು ಬಿಜೆಪಿ ಆಪಾದಿಸಿದೆ. ದೇಶವನ್ನು ಮೋದಿ ಸರ್ಕಾರ ಚೀನಾಕ್ಕೆ ಒಪ್ಪಿಸಿದೆ ಎಂಬ ಕಾಂಗ್ರೆಸ್‌ ಟೀಕಾ ಪ್ರಹಾರದ ಬೆನ್ನಲ್ಲೇ ಬಿಜೆಪಿ ಗಂಭೀರ ಆರೋಪ ಹೊರಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ಆರೋಪಿಸಲಾಗುತ್ತಿರುವ ದೇಣಿಗೆಯನ್ನು ಪಾರದರ್ಶಕ ಸ್ವರೂಪದಲ್ಲೇ ಸ್ವೀಕರಿಸಲಾಗಿದೆ. ಈ ಕುರಿತ ಎಲ್ಲಾ ಮಾಹಿತಿಗಳನ್ನು ಫೌಂಡೇಷನ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದೆ. ರಾಜೀವ್‌ ಗಾಂಧಿ ಫೌಂಡೇಷನ್‌ಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖ್ಯಸ್ಥೆಯಾಗಿದ್ದು, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪಿ. ಚಿದಂಬರಂ ಸದಸ್ಯರಾಗಿರುವುದು ಗಮನಾರ್ಹ.

ಚೀನಾ ಪರ ಅಲ್ಲವೇ?:

ಗುರುವಾರ ಇಲ್ಲಿ ಮಾತನಾಡಿರುವ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ‘2005-06ನೇ ಸಾಲಿನ ವಾರ್ಷಿಕ ವರದಿ ಅನ್ವಯ, ರಾಜೀವ್‌ ಗಾಂಧಿ ಫೌಂಡೇಷನ್‌ಗೆ ಭಾರತದಲ್ಲಿ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ ಸ್ವೀಕರಿಸಲಾಗಿದೆ. ಸಾಮಾನ್ಯ ದೇಣಿಗೆದಾರರ ಹೆಸರಲ್ಲಿ ಚೀನಾ ನೀಡಿದ ದೇಣಿಗೆಯನ್ನು ಸೇರಿಸಲಾಗಿದೆ. ಹಾಗಿದ್ದರೆ, ಯುಪಿಎ ಸರ್ಕಾರ ಚೀನಾದಿಂದ ಲಂಚ ಸ್ವೀಕರಿಸಿತ್ತೇ? ದೇಣಿಗೆ ಸ್ವೀಕಾರದ ಬಳಿಕ ಚೀನಾದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ರಾಜೀವ್‌ ಗಾಂಧಿ ಫೌಂಡೇಶನ್‌ ಶಿಫಾರಸು ಮಾಡಿತ್ತು ಎಂಬುದು ನಿಜವಲ್ಲವೇ?. ಇಂಥ ನಿರ್ಧಾರ ಚೀನಾದ ಪರವಾಗಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

Fact Check: ಶಾ ಬೆಂಗಾವಲು ವಾಹನದ ಮೇಲೆ ದಾಳಿ?

ಅಲ್ಲದೆ ಇಂಥ ದೇಣಿಗೆ ಬಗ್ಗೆ ಅಂದಿನ ಯುಪಿಎ ಸರ್ಕಾರ, ಸರ್ಕಾರದ ಯಾವುದೇ ದಾಖಲೆಗಳಲ್ಲೂ ಪ್ರಸ್ತಾಪಿಸಿರಲಿಲ್ಲ. ಹೀಗಾಗಿ ಚೀನಾ ರಾಯಭಾರ ಕಚೇರಿಯಿಂದ ಹಣ ಪಡೆದಿದ್ದೇ ಆದಲ್ಲಿ ಅದನ್ನು ಹೇಗೆ ಬಳಸಲಾಗಿತ್ತು ಎಂಬುದರ ಬಗ್ಗೆ ಕಾಂಗ್ರೆಸ್‌ ಉತ್ತರ ನೀಡಬೇಕು ಎಂದು ಸಚಿವ ಪ್ರಸಾದ್‌ ಒತ್ತಾಯಿಸಿದ್ದಾರೆ.

ಸಚಿವ ರವಿಶಂಕರ್‌ ಪ್ರಸಾದ್‌ ಗಂಭೀರ ಆರೋಪ

ರಾಜೀವ್‌ ಗಾಂಧಿ ಫೌಂಡೇಷನ್‌ಗೆ ಭಾರತದಲ್ಲಿ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ ಸ್ವೀಕರಿಸಲಾಗಿದೆ. ಹಾಗಿದ್ದರೆ, ಯುಪಿಎ ಸರ್ಕಾರ ಚೀನಾದಿಂದ ಲಂಚ ಸ್ವೀಕರಿಸಿತ್ತೇ? ದೇಣಿಗೆ ಸ್ವೀಕಾರದ ಬಳಿಕ ಚೀನಾದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ರಾಜೀವ್‌ ಗಾಂಧಿ ಫೌಂಡೇಶನ್‌ ಶಿಫಾರಸು ಮಾಡಿತ್ತು ಎಂಬುದು ನಿಜವಲ್ಲವೇ?

- ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ


 

click me!