
ಮುಂಬೈ(ಜ.13): ಮಹಾರಾಷ್ಟ್ರದ ಮಾಜಿ ಸಚಿವೆ ಮತ್ತು ಬಿಜೆಪಿ ನಾಯಕಿ ಪಂಕಜಾ ಮುಂಡೆ ಮಂಗಳವಾರ ಸಂಜೆ ಮುಂಬೈನಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಪಂಕಜಾ ಬೆಂಬಲಿಗರು ಅವರನ್ನು ಬಿಜೆಪಿಯಿಂದ ಹೊರ ಬರುವಂತೆ ಒತ್ತಡ ಹೇರುತ್ತಿರುವುದರಿಂದ ಈ ಸಭೆ ಬಹಳಷ್ಟು ಮಹತ್ವ ಪಡೆದಿದೆ.
ಇನ್ನು ಅಹ್ಮದ್‌ನಗರ ಜಿಲ್ಲೆಯಲ್ಲಿ ಈಗಾಗಲೇ ಬೆಂಬಲಿಗರು ಬಿಜೆಪಿಗೆ ರಾಜೀನಾಮೆ ನೀಡಿ 'ಗೋಪಿನಾಥ್ ಮುಂಡೆ ಪಠಾರ್ಡಿ ತಾಲ್ಲೂಕು ವಿಕಾಸ್ ಮೋರ್ಚಾ' ರಚಿಸುವುದಾಗಿ ಘೋಷಿಸಿದ್ದಾರೆ.ಈ ವಿಚಾರವಾಗಿ ಮುಂಡೆ ಬೆಂಬಲಿಗ ದತ್ತಾ ಬೇಡೆ ಬರೆದಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾರ್ಮಿಕರನ್ನು ಉದ್ದೇಶಿಸಿ ಬರೆದಿರುವ ಈ ಪತ್ರದಲ್ಲಿ ಅವರು 'ಅರೇ ನೀವ್ಯಾಕೆ ಅಳುತ್ತಿದ್ದೀರಿ? ಹೋರಾಡಲು ಕಲಿಯಿರಿ ದಿವಂಗತ ಗೋಪಿನಾಥ್ ಮುಂಡೆ ತಮ್ಮ ಜೀವನದುದ್ದಕ್ಕೂ ಇಂತಹವರೊಂದಿಗೆ ಹೋರಾಡುವ ಮೂಲಕ ತಮ್ಮದೇ ಆದ ಲೋಕ ಸೃಷ್ಟಿಸಿದ್ದರು. ಎಲ್ಲಿವರೆಗೆ ನೀವು ಚಪ್ಪಲಿ ಹಿಡಿದು ಪ್ರತಿಭಟಿಸುತ್ತೀರಿ? ನಾವು ಸ್ವಾಭಿಮಾನದಿಂದ ಕೈಜೋಡಿಸಿ 'ಗೋಪಿನಾಥ್ ಮುಂಡೆ ಪಠಾರ್ಡಿ ತಾಲ್ಲೂಕು ವಿಕಾಸ್ ಮೋರ್ಚಾ' ಸ್ಥಾಪಿಸೋಣ. ಈ ಮೂಲಕ ಮುಂದೆ ಬರುವ ಪ್ರತಿಯೊಂದು ಚುನಾವಣೆಯಲ್ಲೂ ನಾವು ಹೋರಾಡುತ್ತೇವೆ ಮತ್ತು ಮುಂಡೆ ಹೆಸರಿನಲ್ಲಿರುವ ಶಕ್ತಿ ಏನು ಎಂದು ಬಿಜೆಪಿಗೆ ತೋರಿಸುತ್ತೇವೆ.
ಶಿವಸೇನೆಗೆ ಪಂಕಜಾ?
ಒಂದು ವೇಳೆ ಕಾರ್ಯಕರ್ತರ ಒತ್ತಾಯದಂತೆ ಪಂಕಜಾ ಮುಂಡೆ ಬಿಜೆಪಿ ಬಿಡಲು ನಿರ್ಧರಿಸಿದರೆ, ಒಂದೋ ಅವರು ಸ್ವಂತ ಪಕ್ಷ ಸ್ಥಾಪಿಸುತ್ತಾರೆ ಅಥವಾ ಶಿವಸೇನೆಗೆ ಸೇರುವ ಸಾಧ್ಯತೆಗಳಿವೆ. ಆದರೆ ಈವರೆಗೂ ಪಂಕಜಾ ಮುಂಡೆ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನು ಗೋಪಿನಾಥ್ ಮುಂಡೆ ಹಾಗೂ ಠಾಕ್ರೆ ಕುಟುಂಬದ ನಡುವಿನ ಸಂಬಂಧ ಬಹಳ ಆಪ್ತವಾಗಿದೆ ಎಂಬುವುದು ತಜ್ಞರ ಮಾತಾಗಿದೆ. ಅಪಘಾತದಲ್ಲಿ ಗೋಪಿನಾಥ್ ಸಾವಿನ ನಂತರ, ಅವರ ಅಂತ್ಯಕ್ರಿಯೆ ವೇಳೆ, ಉದ್ಧವ್ ಠಾಕ್ರೆ ಅವರು ಪಂಕಜಾರಿಗೆ ಅದೆಂತಹ ಬಿಕ್ಕಟ್ಟಿನಲ್ಲೂ ಸಹೋದರನಾಗಿ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬಿಜೆಪಿಯಲ್ಲಿ ರಾಜೀನಾಮೆ ಪರ್ವ
ಸಂಸದ ಪ್ರೀತಂ ಮುಂಡೆಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ಕೋಪಗೊಂಡಿರುವ ಅವರ ಬೆಂಬಲಿಗರು ಮಹಾರಾಷ್ಟ್ರದಾದ್ಯಂತ ರಾಜೀನಾಮೆ ನೀಡಲಾರಂಭಿಸಿದ್ದಾರೆ. ಮುಂಬೈನ ಮರಾಠವಾಡ, ಅಹ್ಮದ್‌ನಗರ, ಪುಣೆಯ ಬೆಂಬಲಿಗರು ಬಿಜೆಪಿ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಅಸಮಾಧಾನಕ್ಕೇನು ಕಾರಣ?
ಈ ಹಿಂದೆ ಪಂಕಜಾ ಅವರನ್ನು ರಾಜ್ಯ ರಾಜಕಾರಣದಲ್ಲಿ ಬದಿಗಿರಿಸಲಾಗಿತ್ತು. ಈಗ ಕೇಂದ್ರದಲ್ಲಿ ಮಂತ್ರಿ ಹುದ್ದೆಯನ್ನು ನೀಡುವ ಸಮಯ ಬಂದಾಗ ಡಾ. ಭಗವತ್ ಕರಾಡ್‌ರನ್ನು ಪ್ರೀತಮ್ ಬದಲಿಗೆ ಮಂತ್ರಿಯನ್ನಾಗಿ ಮಾಡಲಾಯಿತು. ಈ ವಿಚಾರ ಮುಂಡೆ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಡಾ. ಕರಾಡ್ ಅವರನ್ನು ರಾಜಕೀಯಕ್ಕೆ ಕರೆತಂದ ಶ್ರೇಯಸ್ಸು ಗೋಪಿನಾಥ್ ಮುಂಡೆಗೆ ಸಲ್ಲುತ್ತದೆ. .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ