
ಸಾಗರ್ (ಏ.14): ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ದೇವರಿ ಕ್ಷೇತ್ರದ ಬಿಜೆಪಿ ಶಾಸಕ ಬೃಜಬಿಹಾರಿ ಪಟೇರಿಯಾ ಅವರ ಪುತ್ರಿ ಪ್ರಿಯಾಂಕಾ ಪಟೇರಿಯಾ ವಿರುದ್ಧ ಹಲ್ಲೆಯ ಗಂಭೀರ ಆರೋಪ ಕೇಳಿಬಂದಿದೆ. ಯುವಕನೊಬ್ಬನ ಮೇಲೆ ಪ್ರಿಯಾಂಕಾ ಚಪ್ಪಲಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಜಮುನಿಯಾ ಗ್ರಾಮದ ನಿವಾಸಿ ರಾಜೇಶ್ ಶರ್ಮಾ ಎಂಬುವವರು ಈ ಬಗ್ಗೆ ಗೌರ್ಝಾಮರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತ ರಾಜೇಶ್ ಶರ್ಮಾ ಸೋಮವಾರ ಗೌರ್ಝಾಮರ್ ಪ್ರದೇಶದ ಬ್ಯಾಂಕ್‌ಗೆ ತೆರಳಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬಂದು "ಶಾಸಕರ ಮಗಳು ಪ್ರಿಯಾಂಕಾ ನಿಮ್ಮನ್ನು ಹೊರಗೆ ಕರೆಯುತ್ತಿದ್ದಾರೆ" ಎಂದು ತಿಳಿಸಿದ್ದಾನೆ. ರಾಜೇಶ್ ಬ್ಯಾಂಕ್‌ನಿಂದ ಹೊರಬರುತ್ತಿದ್ದಂತೆ, ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತಿದ್ದ ಪ್ರಿಯಾಂಕಾ ಪಟೇರಿಯಾ ಆತನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ತಮ್ಮ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಯುವಕನಿಗೆ ಮನಬಂದಂತೆ ಹೊಡೆದಿದ್ದಾರೆ. ಈ ವೇಳೆ ಪ್ರಿಯಾಂಕಾ "ನೀನು ನನ್ನ ತಂದೆಯ ವಿರುದ್ಧ ಕೆಲಸ ಮಾಡುತ್ತಿದ್ದೀಯಾ" ಎಂದು ಕಿರುಚಾಡುತ್ತಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಪಟೇರಿಯಾ, "ಸಂಬಂಧಿತ ಯುವಕ ನನ್ನ ಕಾರನ್ನು ಬೆನ್ನಟ್ಟುತ್ತಿದ್ದ. ಆತನಿಂದ ನನಗೆ ಪ್ರಾಣಭಯ ಉಂಟಾಯಿತು, ಈ ಕಾರಣದಿಂದಲೇ ರಕ್ಷಣೆಗಾಗಿ ಸಿಟ್ಟಿನಲ್ಲಿ ನಾನು ಅಂತಹ ಹೆಜ್ಜೆ ಇಡಬೇಕಾಯಿತು" ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನು ರಾಜೇಶ್ ಶರ್ಮಾ ಅವರು ಜನಪದ ಅಧ್ಯಕ್ಷ ಪ್ರತಿನಿಧಿಯಾಗಿರುವ ವಿನೀತ್ ಪಟೇರಿಯಾ ಅವರ ಆಪ್ತರಾಗಿದ್ದಾರೆ. ವಿನೀತ್ ಪಟೇರಿಯಾ ಅವರು ಶಾಸಕ ಬೃಜಬಿಹಾರಿ ಪಟೇರಿಯಾ ಅವರ ಸ್ವಂತ ಸಹೋದರ. ಈ ಎರಡೂ ಕುಟುಂಬಗಳ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ರಾಜೇಶ್ ಶರ್ಮಾ ಅವರು ಶಾಸಕರ ಸಹೋದರನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸಿಟ್ಟಿನಿಂದ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ರಾಜೇಶ್ ಶರ್ಮಾ ದೂರು ನೀಡಿದ್ದಾರೆ. ಆದರೆ ಪ್ರಕರಣ ಶಾಸಕರ ಮಗಳಿಗೆ ಸಂಬಂಧಿಸಿದ್ದಾದ್ದರಿಂದ ಪೊಲೀಸರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. "ಪ್ರಕರಣದ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ, ಪ್ರಭಾವಿ ರಾಜಕೀಯ ಕುಟುಂಬವಾದ್ದರಿಂದ ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಸಂತ್ರಸ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ