
ಸಿಂಧುದುರ್ಗ (ಏ.28): ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿದ್ದಕ್ಕೆ ಆಕ್ರೋಶಗೊಂಡು ಸರ್ಕಾರಿ ಇಂಜಿನಿಯರ್ ಒಬ್ಬರನ್ನು ಸಾರ್ವಜನಿಕವಾಗಿ ಅವಮಾನಿಸಿ, ಬಲವಂತವಾಗಿ ಕೆಸರು ನೀರಿನಲ್ಲಿ ನಡೆಸಿದ್ದ ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ನಾರಾಯಣ ರಾಣೆ ಅವರಿಗೆ ಸಿಂಧುದುರ್ಗ ನ್ಯಾಯಾಲಯವು ಸೋಮವಾರ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿ.ಎಸ್. ದೇಶ್‌ಮುಖ್ ಅವರು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 504ರ ಅಡಿಯಲ್ಲಿ (ಶಾಂತಿ ಭಂಗ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ನಿತೇಶ್ ರಾಣೆ ಅವರನ್ನು ದೋಷಿ ಎಂದು ಘೋಷಿಸಿದರು.:
ಶಾಸಕರಾದವರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕವಾಗಿ ಸರ್ಕಾರಿ ನೌಕರರನ್ನು ಅವಮಾನಿಸಬಾರದು. ಈ ಕಾರಣಕ್ಕಾಗಿ ನಿತೇಶ್ ರಾಣೆಗೆ 1 ತಿಂಗಳು ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 50,000 ರೂಪಾಯಿಗಳನ್ನು ಮಾನಸಿಕ ಹಿಂಸೆ ಮತ್ತು ಅವಮಾನ ಅನುಭವಿಸಿದ ಇಂಜಿನಿಯರ್ ಪ್ರಕಾಶ್ ದಾದೋಜಿ ಶೆಡೇಕರ್ ಅವರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 30 ಮಂದಿ ಆರೋಪಿಗಳಿದ್ದರು, ಆದರೆ ಕೇವಲ ನಿತೇಶ್ ರಾಣೆ ಮಾತ್ರ ದೋಷಿಯಾಗಿದ್ದು, ಉಳಿದ 29 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.
ಘಟನೆಯು 2019 ಜುಲೈ 4 ರಂದು ನಡೆದಿತ್ತು. ಸಾವಂತವಾಡಿಯ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಎಂಜಿನಿಯರ್ ಪ್ರಕಾಶ್ ಶೆಡೇಕರ್ ಅವರನ್ನು ಕಂಕವಲಿಯ ಗಡ್ ನದಿ ಸೇತುವೆಯ ಬಳಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಪರಿಶೀಲನೆಗೆ ರಾಣೆ ಕರೆಸಿದ್ದರು. ಆ ಸಮಯದಲ್ಲಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಣೆ ಮತ್ತು ಅವರ ಬೆಂಬಲಿಗರು ಅಧಿಕಾರಿಯನ್ನು ಅವಮಾನಿಸಿದ್ದರು.
ಈ ವೇಳೆ ಇಂಜಿನಿಯರ್ ಮೇಲೆ ಕೆಸರು ನೀರು ಸುರಿಯಲಾಗಿತ್ತು, ಬಿಳಿ ಪ್ಲಾಸ್ಟಿಕ್ ಪಟ್ಟಿಯಿಂದ ಅವರನ್ನು ಕಟ್ಟಲಾಗಿತ್ತು ಮತ್ತು ಬಲವಂತವಾಗಿ ಕೆಸರು ನೀರಿನಲ್ಲಿ ನಡೆಸಲಾಗಿತ್ತು ಎಂದು ಎಫ್‌ಐಆರ್ ದಾಖಲಾಗಿತ್ತು. ಆದರೆ, ವಿಚಾರಣೆಯ ವೇಳೆ ಕೆಸರು ಸುರಿದ ಮತ್ತು ಹಲ್ಲೆ ನಡೆಸಿದ ಆರೋಪಗಳಿಗೆ ಬಲವಾದ ಸಾಕ್ಷ್ಯಗಳು ಸಿಗದ ಕಾರಣ ನ್ಯಾಯಾಲಯ ಆ ಗಂಭೀರ ಆರೋಪಗಳಿಂದ ರಾಣೆಯನ್ನು ಮುಕ್ತಗೊಳಿಸಿತು. ಆದರೆ, "ಸಾರ್ವಜನಿಕವಾಗಿ ಕೆಸರು ನೀರಿನಲ್ಲಿ ನಡೆಸಿದ್ದು" ಸಾಬೀತಾದ ಕಾರಣ ಶಿಕ್ಷೆ ಪ್ರಕಟಿಸಲಾಗಿದೆ.
ನಿತೇಶ್ ರಾಣೆ ಅವರು ಈಗಾಗಲೇ 2019 ರಲ್ಲಿ 5 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು, ಆ ಅವಧಿಯನ್ನು ಶಿಕ್ಷೆಯಲ್ಲಿ ಕಡಿತಗೊಳಿಸಲಾಗುತ್ತದೆ. ಸದ್ಯ ನ್ಯಾಯಾಲಯವು ರಾಣೆ ಅವರ ಮನವಿಯ ಮೇರೆಗೆ ಶಿಕ್ಷೆಗೆ ತಡೆ ನೀಡಿದ್ದು, ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, "ಸಾರ್ವಜನಿಕರ ಹಿತದೃಷ್ಟಿಯಿಂದ ಧ್ವನಿ ಎತ್ತುವ ಉದ್ದೇಶವಿದ್ದರೂ, ಅಧಿಕಾರದ ದುರ್ಬಳಕೆ ಮಾಡಿ ಸರ್ಕಾರಿ ನೌಕರರನ್ನು ಅವಮಾನಿಸುವ ಇಂತಹ ಪ್ರವೃತ್ತಿಗಳನ್ನು ತಡೆಯಬೇಕಾದ ಅಗತ್ಯವಿದೆ," ಎಂದು ಮಾರ್ಮಿಕವಾಗಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ