
ನವದೆಹಲಿ (ಏ.14): ಇಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜನ್ಮದಿನ. ಭಾರತದ ಸಂವಿಧಾನವನ್ನು ರಚಿಸಿದ ಮಹಾನ್ ನಾಯಕನ ಜನ್ಮದಿನದಂದು ದೇಶದ ಎಲ್ಲಾ ಗಣ್ಯರು ಅವರ ಸೇವೆಯನ್ನು ನೆನಪಿಸಿಕೊಂಡು ಗುಣಗಾನ ಮಾಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣವಾದ ಟ್ವಿಟರ್, ಫೇಸ್‌ಬುಕ್‌ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸೇವೆಗಳನ್ನು ನೆನಪಿಸಿಕೊಂಡು ಪೋಸ್ಟ್ ಹಾಕುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯಲ್ಲಿ ತೆಲಂಗಾಣದ ಬಿಜೆಪಿ ನಾಯಕಿಯೊಬ್ಬರು ಮಾಡಿದ ಪೋಸ್ಟ್ ಎಡವಟ್ಟಾಗಿದೆ. ಅಂಬೇಡ್ಕರ್ ಜಯಂತಿಗೆ ನಾಡಿನ ಜನತೆಗೆ ಶುಭ ಕೋರುವ ಸಲುವಾಗಿ ಟ್ವಿಟರ್‌ನಲ್ಲಿ ಬಿಜೆಪಿ ನಾಯಕಿಯೊಬ್ಬರು ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಅಂಬೇಡ್ಕರ್ ಜಯಂತಿಯ ಸಂಭ್ರಮಾಚರಣೆಯಲ್ಲಿ ಬಿಜೆಪಿ ಯುವ ಮೋರ್ಚಾ (ಬಿಜೆವೈಎಂ) ತೆಲಂಗಾಣ ರಾಜ್ಯ ಮಹಿಳಾ ಅಭಿವೃದ್ಧಿ ಇಲಾಖೆ ಸಹ ಸಂಚಾಲಕಿ ಕಾಸಿರೆಡ್ಡಿ ಸಿಂಧು ರೆಡ್ಡಿ ಶುಕ್ರವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಗೆ ಶುಭಕೋರಿ ಪೋಸ್ಟ್‌ನಲ್ಲಿ ಬರೆಯಲಾಗಿತ್ತು.
ಆದರೆ, ಅವರ ಪೋಸ್ಟ್‌ನಲ್ಲಿ ಅಂಬೇಡ್ಕರ್ ಚಿತ್ರದ ಬದಲು, ಸ್ವತಃ ಸಿಂಧುರೆಡ್ಡಿ ಸ್ವಾಮಿ ವಿವೇಕಾನಂದ ಅವರ ಪುತ್ಥಳಿಗೆ ಕೈಮುಗಿಯುತ್ತಿರುವ ಚಿತ್ರವನ್ನು ಹಾಕಲಾಗಿತ್ತು. ತನ್ನ ತಪ್ಪಿನ ಅರಿವಾಗಿ ಕ್ಷಣಮಾತ್ರದಲ್ಲಿ ಆಕೆ ಈ ಟ್ವೀಟ್‌ಅನ್ನು ಡಿಲೀಟ್ ಮಾಡಿದ್ದರೂ, ಕೆಲವರು ಅವರ ಈ ಟ್ವೀಟ್‌ನ ಸ್ಕ್ರೀನ್ ಶಾಟ್ ತೆಗೆದುಕೊಂಡು ಅವರನ್ನು ಟ್ರೋಲ್ ಮಾಡಿದ್ದಾರೆ. ಅಂಬೇಡ್ಕರ್ ಯಾರು, ಸ್ವಾಮಿ ವಿವೇಕಾನಂದ ಯಾರು ಅನ್ನೋದು ಗೊತ್ತಿಲ್ಲ ಅಂದಮೇಲೆ ರಾಜಕಾರಣಿ ಯಾಕಾಗಿದ್ದೀರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಟೀಕೆ ಮಾಡಿದ್ದಾರೆ.
ಸಿಂಧು ರೆಡ್ಡಿ ತಮ್ಮ ಪೋಸ್ಟ್‌ನಲ್ಲಿ, "ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಭಾರತೀಯ ಸಮಾಜ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಉನ್ನತಿಗಾಗಿ ಅವರ ಅವಿರತ ಪ್ರಯತ್ನಗಳನ್ನು ಸ್ಮರಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದರು. ಇದರಲ್ಲಿ ಆಕೆ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಕೈಮುಗಿಯುತ್ತಿರುವ ಚಿತ್ರವನ್ನು ಹಾಕಿದ್ದರು. ಈ ಟ್ವೀಟ್‌ಗೆ ಬಿಆರ್‌ಎಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನಾಯಕರುಗಳು ರಾಜಕಾರಣ ಮಾಡುವ ಮುನ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅಂದರೆ ಯಾರು, ಸ್ವಾಮಿ ವಿವೇಕಾನಂದ ಅಂದರೆ ಯಾರು ಅನ್ನೋದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಭಾರತ್ ರಾಷ್ಟ್ರ ಸಮಿತಿ ನಾಯಕರು ಟೀಕೆ ಮಾಡಿದ್ದಾರೆ. ಬಿಆರ್‌ಎಸ್ ನಾಯಕ ಕೃಷಾಂಕ್ ಇವರೆಲ್ಲಾ, 'ವಾಟ್ಸ್‌ಅಪ್ ಯುನಿವರ್ಸಿಟಿಯ ವಿದ್ಯಾರ್ಥಿಗಳು' ಎಂದು ಟೀಕಿಸಿದ್ದಾರೆ.
ಅಂಬೇಡ್ಕರ್ ಸೋಲಿಸಿದ ಕಾಂಗ್ರೆಸ್ ತಿರಸ್ಕರಿಸಿ: ಶಾಸಕ ರಮೇಶ್ ಜಾರಕಿಹೊಳಿ ಕರೆ
ವೈ.ಸತೀಶ್ ರೆಡ್ಡಿ ಎನ್ನುವ ನಾಯಕ, ನಕಲಿ ಪದವಿ ಹೊಂದಿರುವವರ ಪಕ್ಷದಲ್ಲಿದ್ದರೆ, ಅಂಬೇಡ್ಕರ್ ಚಿತ್ರಕ್ಕೂ ಸ್ವಾಮಿ ವಿವೇಕಾನಂದರ ಚಿತ್ರಕ್ಕೂ ವ್ಯತ್ಯಾಸ ಗೊತ್ತಾಗೋದಿಲ್ಲ ಎಂದು ಟೀಕೆ ಮಾಡಿದ್ದಾರೆ. ಇದರ ನಡುವೆ ಕಾಸಿರೆಡ್ಡಿ ಸಿಂಧು ರೆಡ್ಡಿ ಅವರು ತಮ್ಮ ಮೊದಲ ಪೋಸ್ಟ್ ಅನ್ನು ಡಿಲೀಟ್ ಮಾಡಿ ನಂತರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿರುವ ಫೋಟೋದೊಂದಿಗೆ ಮತ್ತೊಂದು ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.
ಅಂಬೇಡ್ಕರ್‌ಗೆ ಅವಮಾನ: ಕ್ಷಮೆ ಕೋರಿದ ಜೈನ್ ವಿಶ್ವವಿದ್ಯಾಲಯ
ಇನ್ನೂ ಕೆಲವರು, ಬಹುಶಃ ಬಿಜೆಪಿಯಲ್ಲಿರುವ ಇಂಥ ಜ್ಞಾನ ಅಗತ್ಯ ಇರುವಂತೆ ಕಾಣುತ್ತಿದೆ ಎಂದು ಸಿಂಧುರೆಡ್ಡಿಯನ್ನು ಟೀಕಿಸಿದ್ದಾರೆ. ರಾಜಕಾರಣ ಅನ್ನೋದು ತೋರಿಕೆ, ವ್ಯಕ್ತಿ ಪ್ರದರ್ಶನ ಆದಾಗ ಮಾತ್ರವೇ ಇಂಥ ಪ್ರಮಾದಗಳು ಆಗುತ್ತವೆ ಎನ್ನುವ ಕಾಮೆಂಟ್‌ಗಳು ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ