
ಚೆನ್ನೈ(ಏ.03): ದೇಶದಲ್ಲಿ ಪಂಚರಾಜ್ಯಗಳ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಿಂದನೆ ಪ್ರತಿನಿಂದನೆ ಜೋರಾಗಿಯೇ ಇದೆ. ತಮಿಳುನಾಡಿನಲ್ಲಿ ಏಪ್ರಿಲ್ 6 ರಂದು ವಿಧಾನಸಭೆ ಚುನಾವಣಾ ದಿನಾಂಕ ನಿಗದಿಯಾಗಿದ್ದು ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಬಿಜೆಪಿ ಯಾವತ್ತಿಗೂ ಮಹಿಳಾ ವಿರೋಧಿ ಎಂದು ಹೇಳುವುದರ ಮೂಲಕ ಡಿಎಂಕೆ ನಾಯಕಿ ಕನಿಮೋಳಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಧಾರಪುರಮ್ನ ರ್ಯಾಲಿವೊಂದರಲ್ಲಿ ಮಾತನಾಡುತ್ತಾ ಡಿಎಂಕೆ ಪಕ್ಷವು ಮಹಿಳಾ ವಿರೋಧಿ ಹಾಗೂ ಡಿಎಂಕೆ ಯಾವತ್ತಿಗೂ ಉದ್ಯಮಗಳ ವಿರೋಧಿ ಎಂದು ಹೇಳಿದ್ದರು.
ಹಿಂದಿ ರಾಜ್ಯಗಳಿಗೆ ಮಾತ್ರ ಮೋದಿ ಪ್ರಧಾನಿ
ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಕನಿಮೋಳಿ 'ಮಹಿಳೆಯ ಹಕ್ಕುಗಳ ಬಗ್ಗೆ ಮಾತನಾಡುವ ಬಿಜೆಪಿ ಸ್ವತ: ಉತ್ತರಪ್ರದೇಶದಲ್ಲಿ ಆಡಳಿತ ನಡೆಸುತ್ತಿದೆ. ಆದರೆ ಆ ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಉದ್ಯಮ ವಿರೋಧಿ ಎಐಡಿಎಂಕೆ ಹೊರತು ಡಿಎಂಕೆ ಅಲ್ಲ.' ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮಹಿಳಾ ವಿರೋಧಿ ಎಂದಿರುವ ಕನಿಮೋಳಿ ತಮಿಳುನಾಡಿನ ತೂತುಕುಡಿ ಕ್ಷೇತ್ರದ ಲೋಕಸಭಾ ಸದಸ್ಯೆ. 'ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಕೋಡ್ ಕಾಯ್ದೆಯನ್ನು ಜಾರಿಗೆ ತಂದಾಗ ಮಹಿಳೆಯರಿಗೆ ಸಮಾನ ಹಕ್ಕುಗಳ ನಿರಾಕರಣೆ ಮಾಡಿದ್ದು ಕೂಡ ಇವರ ಅಂಗ ಸಂಸ್ಥೆಗಳು. ತಮಿಳುನಾಡಿನಲ್ಲಿ ಈ ಕಾಯ್ದೆ ಜಾರಿಯಾಗಲು ಡಿಎಂಕೆ ಪಕ್ಷದ ಮಾಜಿ ಅಧ್ಯಕ್ಷ ಎಮ್ ಕರುನಾನಿಧಿ ಕಾರಣ,' ಎಂದು ಕನಿಮೋಳಿ ಹೇಳಿದ್ದಾರೆ.
ತಮಿಳುನಾಡಲ್ಲಿ ಪ್ರಾದೇಶಿಕ ಪಕ್ಷಗಳ ಆರ್ಭಟದ ನಡುವೆ ಬಿಜೆಪಿ ಅಲೆ
ತಮಿಳುನಾಡಿನಲ್ಲಿ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದ್ದು ಬಿಜೆಪಿ ಪರ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಸೇರಿದಂತೆ ಹಲವು ರಾಜಕೀಯ ದಿಗ್ಗಜರು ಪ್ರಚಾರ ಮಾಡುತ್ತಿದ್ದಾರೆ. ಇನ್ನೂ ಕಾಂಗ್ರೇಸ್ ಪರ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿದಂತೆ ಇತರರು ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ಸ್ಥಳಿಯ ಪಕ್ಷಗಳ ಪಾರುಪತ್ಯವು ಜೋರಾಗಿಯೇ ಇದೆ. ಹಾಗಾಗಿ ತಮಿಳುನಾಡು ಚುನಾವಣೆ ದೇಶದಲ್ಲಿ ಎಲ್ಲರ ಗಮನ ಸೆಳೆದಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ