ಬಿಜೆಪಿ ಸಂಸ್ಥಾಪನಾ ದಿನ: ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಭಾಷಣ

By Suvarna News  |  First Published Apr 6, 2022, 8:59 AM IST

* ಬಿಜೆಪಿ ಸಂಸ್ಥಾಪನಾ ದಿನ ಹಿನ್ನೆಲೆ

* 14 ದಿನ ‘ಸಾಮಾಜಿಕ ನ್ಯಾಯ ಪಾಕ್ಷಿಕ’ ಆಯೋಜನೆ

* ಈ ವೇಳೆ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಪ್ರಚಾರ

* ಪಾಕ್ಷಿಕದ ಸಂದರ್ಭದಲ್ಲಿ ಕೆರೆಕಟ್ಟೆಗಳ ಸ್ವಚ್ಛತೆಗೆ ಮೋದಿ ಸೂಚನೆ

* ಏ.7ಕ್ಕೆ ಸೇವಾ ಅಭಿಯಾನ, ಏ.9ರ ಫುಲೆ ಜಯಂತಿ, ಏ.14ರ ಅಂಬೇಡ್ಕರ್‌ ಜಯಂತಿ ಅದ್ಧೂರಿ ಆಚರಣೆ


ನವದೆಹಲಿ(ಏ.06): ಬಿಜೆಪಿ ಸಂಸ್ಥಾಪನಾ ದಿನವಾದ ಏ.6ರ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಸಂಸದರು, ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್‌ ವಿಧಾನದ ಮೂಲಕ ಮಾತನಾಡಲಿದ್ದಾರೆ. ದಿನಾಚರಣೆಯ ಕಾರಣ, 14 ದಿನಗಳ ಕಾಲ ‘ಸಾಮಾಜಿಕ ನ್ಯಾಯ ಪಾಕ್ಷಿಕ’ದ ಹೆಸರಿನಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಬಿಜೆಪಿ ಆಯೋಜಿಸಿದೆ. ಈ ವೇಳೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.

ಬುಧವಾರ ಬಿಜೆಪಿ ಕಾರ‍್ಯಕರ್ತರು ಸೇರಿದಂತೆ ಪಕ್ಷದ ಪ್ರತಿಯೊಬ್ಬರು ಒಟ್ಟಿಗೆ ಕುಳಿತು ಮೋದಿ ಅವರ ಭಾಷಣ ಕೇಳಲು ವ್ಯವಸ್ಥೆ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶಾಸಕರು, ಸಂಸದರಿಗೆ ಸೂಚಿಸಿದ್ದಾರೆ. ಅಲ್ಲದೆ ಕಾರ‍್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಾರಿಸುವಂತೆ ಮತ್ತು ರಾಷ್ಟ್ರಗೀತೆಗಳನ್ನು ಹಾಕುವಂತೆ ನಿರ್ದೇಶನ ನೀಡಿದ್ದಾರೆ.

Tap to resize

Latest Videos

ಸರ್ಕಾರದ ಯೋಜನೆ ಬಗ್ಗೆ ಜನ ಜಾಗೃತಿ

ಈ ಬಗ್ಗೆ ಮಂಗಳವಾರ ವಿವರಣೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌, ‘ಏ.7ರಂದು ಸೇವಾ ಅಭಿಯಾನ ಏರ್ಪಾಟಾಗಿದೆ. ಮೋದಿ ಅವರ ಸೂಚನೆಯಂತೆ 14 ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ವೇಳೆ ಬಿಜೆಪಿ ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ‘ಆಯುಷ್ಮಾನ್‌ ಭಾರತ್‌’ ಹಾಗೂ ‘ಜನ ಔಷಧಿ’ ಕೇಂದ್ರಗಳಿಂದ ಜನರಿಗೆ ಏನು ಉಪಯೋಗವಾಗಿದೆ ಎಂಬುದನ್ನು ವಿವರಿಸಲಿದ್ದಾರೆ. ಏ.8 ಹಾಗೂ 9ರಂದು ಬಡವರಿಗೆ ಮನೆ ನಿರ್ಮಾಣ ಹಾಗೂ ಮನೆಮನೆಗೆ ಕುಡಿವ ನೀರು ಪೂರೈಸುವ ಯೋಜನೆಯ ಬಗ್ಗೆ ಜನಜಾೃತಿ ಮೂಡಿಸಲಿದ್ದಾರೆ’ ಎಂದು ಹೇಳಿದರು.

ಏ.9 ಜ್ಯೋತಿರಾವ್‌ ಫುಲೆ ಹಾಗೂ 14ರಂದು ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ಅವರ ಜನ್ಮದಿನಾಚರಣೆಗಳು ಇರಲಿವೆ. ಈ ದಿನಾಚರಣೆಗಳನ್ನು ದೊಡ್ಡ ಮಟ್ಟದಲ್ಲಿ ದೇಶಾದ್ಯಂತ ಬಿಜೆಪಿ ಆಚರಿಸಲಿದೆ. ಏ.12ರಂದು ಕೋವಿಡ್‌ ಲಸಿಕಾಕರಣದ ಬಗ್ಗೆ ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಉಚಿತ ಪಡಿತರ ಆಹಾರ ಧಾನ್ಯ ವಿತರಣೆ, ಎಸ್ಸಿ-ಎಸ್ಟಿಹಾಗೂ ಹಿಂದುಳಿದವರ ಕಲ್ಯಾಣ ಯೋಜನೆಗಳ ಬಗ್ಗೆ ಒಂದೊಂದು ದಿನ ಪ್ರಚಾರ ನಡೆಸಲಿದ್ದಾರೆ. ಇನ್ನು ಸಂಸದರು ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ನಿಮಿತ್ತ ಕೆರೆ ಸ್ವಚ್ಛತೆ ಕೈಗೊಳ್ಳಬೇಕು ಎಂದೂ ಮೋದಿ ಸೂಚಿಸಿದ್ದಾರೆ’ ಎಂದು ಜೋಶಿ ವಿವರಿಸಿದರು.

click me!