
ನವದೆಹಲಿ (ಮಾ.21): ಮುಂಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಶಕ್ತಿ ವಿರುದ್ಧ ಹೋರಾಟ’ದ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿರುವ ಕೇಂದ್ರ ಸಚಿವ ಹರ್‌ದೀಪ್‌ಸಿಂಗ್ ಪುರಿ ನೇತೃತ್ವದ ಬಿಜೆಪಿ ನಿಯೋಗ, ‘ಶಕ್ತಿ ವಿರುದ್ಧದ ರಾಹುಲ್ ಹೇಳಿಕೆಯು, ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ದುರುದ್ದೇಶ ಹೊಂದಿದೆ. ಭಾರತದಲ್ಲಿ ಅಸಂಖ್ಯಾತ ಹಿಂದೂಗಳು ಶಕ್ತಿಯನ್ನು ಪೂಜಿಸುತ್ತಾರೆ.
ಜೊತೆಗೆ, ದೇವಿಯನ್ನೇ ಶಕ್ತಿ ಎಂದು ಆರಾಧಿಸುವ ಹಿಂದೂ ಪಂಗಡಗಳೂ ಇವೆ. ಹೀಗಿರುವಾಗ ಹಿಂದೂ ಧರ್ಮದ ಶಕ್ತಿ ವಿರುದ್ಧವೇ ಹೋರಾಡುವ ರಾಹುಲ್ ಹೇಳಿಕೆಯು ಹಿಂದೂಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹೋರಾಡಬೇಕು ಎಂದು ನೇರವಾಗಿ ಸಂದೇಶ ನೀಡುವಂತಿದೆ. ಇಂಥ ಹೇಳಿಕೆ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಹೀಗಾಗಿ ರಾಹುಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
72 ಲಕ್ಷ ರು.ಮೌಲ್ಯದ ಕಾನ್ಸರ್ ಔಷಧ ಇನ್ನು ಕೇವಲ 3 ಲಕ್ಷಕ್ಕೆ!
ಶಕ್ತಿ ನಾಶಕ್ಕೆ ಯತ್ನಿಸುವವರೇ ನಾಶ ಆಗ್ತಾರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಶಕ್ತಿ’ ಹೇಳಿಕೆಯ ವಿರುದ್ಧ ಹರಿತ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಯಾರು ಶಕ್ತಿಯನ್ನು ನಾಶ ಮಾಡಲು ಹೋಗುತ್ತಾರೋ ಅವರೇ ನಾಶವಾಗಿ ಬಿಡುತ್ತಾರೆ ’ ಎಂದು ಅಬ್ಬರಿಸಿದ್ದಾರೆ. ಅಲ್ಲದೆ ಇಂಡಿಯಾ ಮೈತ್ರಿಕೂಟ ಕೇವಲ ಹಿಂದೂಧರ್ಮವನ್ನು ಮಾತ್ರವೇ ಗುರಿ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಧಿ ಹಾಗೂ ಡಿಎಂಕೆ ಸೇರಿದಂತೆ ಅವರ ಇಂಡಿಯಾ ಒಕ್ಕೂಟದ ಅಂಗಪಕ್ಷಗಳು ‘ಶಕ್ತಿ’ ವಿರುದ್ಧ ಹೋರಾಡುವುದಾಗಿ ಹೇಳಿವೆ. ತಮಿಳುನಾಡಿನ ಜತೆಗೆ ಹಿಂದೂಧರ್ಮದಲ್ಲಿ ‘ಶಕ್ತಿ’ ಎಂದರೇನು ಗೊತ್ತೇ ಇದೆ’ ಎಂದರು.
‘ಇಂಡಿಯಾ ಮೈತ್ರಿಕೂಟದ ಜನರು ಪದೇ ಪದೇ ಉದ್ದೇಶಪೂರ್ವಕವಾಗಿ ಹಿಂದೂ ನಂಬಿಕೆಯನ್ನು ಅವಮಾನಿಸುತ್ತಾರೆ.ಅವರು ಇದನ್ನು ಚೆನ್ನಾಗಿ ಯೋಚಿಸಿಯೇ ಹೇಳುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ‘ಮಾತೃ ಶಕ್ತಿ, ನಾರಿ ಶಕ್ತಿ’ ಯಾಗಿದೆ ಆದರೆ, ಕಾಂಗ್ರೆಸ್ ಮತ್ತು ಡಿಎಂಕೆ ಇರುವ ಇಂಡಿಯಾ ಮೈತ್ರಿಯು ಇದನ್ನು ನಾಶಪಡಿಸುತ್ತದೆ ಎಂದು ಹೇಳುತ್ತದೆ’ ಎಂದು ವಾಗ್ದಾಳಿ ನಡೆಸಿದರು.
Lok Sabha Election 2024: ಪಕ್ಷಗಳ ಉಚಿತ ಸ್ಕೀಂ: ಇಂದು ಸುಪ್ರೀಂಕೋರ್ಟ್ ವಿಚಾರಣೆ
‘ಶಕ್ತಿಯು ದೈವಿಕತೆಯನ್ನು ಸೂಚಿಸುತ್ತದೆ ಮತ್ತು ತಮಿಳುನಾಡಿನಲ್ಲಿ ಮಾರಿಯಮ್ಮನ್, ಮಧುರೈ ಮೀನಾಕ್ಷಿಯಮ್ಮನ್ ಮತ್ತು ಕಂಚಿ ಕಾಮಾಕ್ಷಿಯಮ್ಮನಂತಹ ವಿವಿಧ ದೇವತೆಗಳ ರೂಪದಲ್ಲಿ ಶಕ್ತಿ ಸ್ವರೂಪಿ ಮಾತೆಯು ಪ್ರಕಟವಾಗುತ್ತಾಳೆ. ರಾಷ್ಟ್ರಕವಿ ಸುಬ್ರಮಣ್ಯ ಭಾರತಿ ಅವರೂ ಭಾರತ ಮಾತೆಯನ್ನು ‘ಶಕ್ತಿ’ ಎಂದು ಪೂಜಿಸಿದ್ದರು. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಾತೃಶಕ್ತಿ, ನಾರಿ ಶಕ್ತಿ. ಆದರೆ ಶಕ್ತಿಯನ್ನು ನಾಶಪಡಿಸುವ ಮಾತು ಆಡುವವರನ್ನು ತಮಿಳುನಾಡು ಶಿಕ್ಷಿಸಲಿದೆ. ನಾನು ಶಕ್ತಿ ಉಪಾಸಕ (ಆರಾಧಕ)’ ಎಂದು ಮೋದಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ