
ನವದೆಹಲಿ(ಮೇ.07): ಭಾರತದಲ್ಲಿ ಕೊರೋನಾಗೆ 2020-21ರಲ್ಲಿ ಬಲಿಯಾದವರ ಸಂಖ್ಯೆ 4.8 ಲಕ್ಷ ಅಲ್ಲ. 47 ಲಕ್ಷ ಎಂಬ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದೆ.
ಕಾಂಗ್ರೆಸ್ ಪಕ್ಷವು ಈ ವರದಿಯನ್ನು ಬಳಸಿಕೊಂಡಿದ್ದು, ‘ನಿಜವಾದ ಕೊರೋನಾ ಸಾವುಗಳ ಬಗ್ಗೆ ತನಿಖೆ ನಡೆಸಲು ಸರ್ವಪಕ್ಷ ಸದಸ್ಯರ ಆಯೋಗ ರಚನೆ ಆಗಬೇಕು ಹಾಗೂ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರು. ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದೆ. ‘ಸರ್ಕಾರ ನಿಜವಾದ ಸಾವು ಮರೆಮಾಚುತ್ತಿದೆ. ವಿಜ್ಞಾನ ಸುಳ್ಳು ಹೇಳಲ್ಲ. ಮೋದಿ ಸುಳ್ಳು ಹೇಳುತ್ತಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಆದರೆ, ‘ಡಬ್ಲ್ಯುಎಚ್‌ಒ ‘ಡೇಟಾ’ (ದತ್ತಾಂಶ) ಹಾಗೂ ಕಾಂಗ್ರೆಸ್‌ನ ‘ಬೇಟಾ’ (ರಾಹುಲ್ ಗಾಂಧಿ) ಹೇಳೋದೆಲ್ಲ ಸುಳ್ಳು. ಡಬ್ಲ್ಯುಎಚ್‌ಒ ಅಧ್ಯಯನ ಮಾನದಂಡವೇ ಸರಿಯಿಲ್ಲ. ಈ ಬಗ್ಗೆ ಈಗಾಗಲೇ ಡಬ್ಲ್ಯುಎಚ್‌ಒಗೆ ದೂರು ಸಲ್ಲಿಸಲಾಗಿದೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತಿರುಗೇಟು ನೀಡಿದ್ದಾರೆ.
ಇನ್ನು ಆರೋಗ್ಯ ತಜ್ಞರಾದ ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ, ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ. ಪೌಲ್ ಹಾಗೂ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಪ್ರತಿಕ್ರಿಯಿಸಿ, ‘2020, 21ರ ಕೋವಿಡ್ ಸಾವುಗಳ ನೈಜ ಲೆಕ್ಕಾಚಾರ ಭಾರತದ ಬಳಿ ಇದೆ. ದೇಶದಲ್ಲಿ ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್‌ಎಸ್) ಇದ್ದು, ಎಲ್ಲ ಸಾವುಗಳನ್ನೂ ಲೆಕ್ಕ ಹಾಕಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನ ಮಾದರಿಯೇ ಸರಿಯಿಲ್ಲ. ವರದಿ ಅಸಮರ್ಥನೀಯ ಹಾಗೂ ದುರದೃಷ್ಟಕರ’ ಎಂದಿದ್ದಾರೆ.
ಭಾರತದಲ್ಲಿ 4.8 ಲಕ್ಷ ಅಲ್ಲ, 47 ಲಕ್ಷ ಕೋವಿಡ್ ಸಾವು
ನವದೆಹಲಿ: ‘ಭಾರತದಲ್ಲಿ 2020ರ ಜನರಿಯಿಂದ ಡಿಸೆಂಬರ್ 2021ರ 2 ವರ್ಷದ ಅವಧಿಯಲ್ಲಿ ಕೋವಿಡ್‌ನಿಂದ ಬಲಿಯಾದವರು ಸರ್ಕಾರ ಹೇಳಿದಂತೆ 4.8 ಲಕ್ಷ ಅಲ್ಲ, 47 ಲಕ್ಷ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ಡಬ್ಲ್ಯುಎಚ್‌ಒ ವರದಿಯನ್ನು ಗಮನಿಸಿದಾಗ ಅಧಿಕೃತ ಸಾವಿನ ಅಂಕಿ-ಅಂಶಗಳಿಗಿಂತ 10 ಪಟ್ಟು ಹೆಚ್ಚು ಕೋವಿಡ್ ಸಂಬಂಧಿ ಸಾವು ಸಂಭವಿಸುರುವುದು ಕಂಡುಬರುತ್ತದೆ.
ಇನ್ನು ಇದೇ ಅವಧಿಯಲ್ಲಿ ವಿಶ್ವದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 60 ಲಕ್ಷ ಅಲ್ಲ. 1.5 ಕೋಟಿ ಎಂದೂ ಅದು ತಿಳಿಸಿದೆ. ಅತಿ ಹೆಚ್ಚು ಸಾವು ಸಂಭವಿಸಿದ್ದು ಆಗ್ನೇಯ ಏಷ್ಯಾ, ಯುರೋಪ್ ಹಾಗೂ ಅಮೆರಿಕದಲ್ಲಿ ಎಂದು ಅದು ತಿಳಿಸಿದೆ.
ಯಾವ ಮಾನದಂಡ?:
ಆರೋಗ್ಯ ಸಂಸ್ಥೆಯ ಸಾವಿನ ವರದಿಯು ಬರೀ ಕೋವಿಡ್‌ನಿಂದ ನೇರವಾಗಿ ಸಂಭವಿಸಿದ ಸಾವುಗಳಷ್ಟೇ ಅಲ್ಲದೆ, ಕೋವಿಡ್‌ನಿಂದ ಆರೋಗ್ಯ ವ್ಯವಸ್ಥೆಯಲ್ಲಾದ ಹಾಗೂ ಸಮಾಜದಲ್ಲಿ ಆದ ಏರುಪೇರಿನಿಂದ ಆದ ಸಾವಿನ ಸಂಖ್ಯೆಯನ್ನೂ ಒಳಗೊಂಡಿದೆ. ಇದೇ ಆಧಾರದಲ್ಲಿ ಅಧ್ಯಯನ ನಡಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ