
ನವದೆಹಲಿ (ಅ.13): ದೆಹಲಿಯಲ್ಲಿ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನಾ ಮೆರವಣಿಗೆಯ ಸುದ್ದಿಯನ್ನು ವರದಿ ಮಾಡುತ್ತಿದ್ದ ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯ ಮೇಲೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ದೈಹಿಕ ದೌರ್ಜನ್ಯ ಎಸಗಿ, ತಳ್ಳಿ ಹಲ್ಲೆ ನಡೆಸಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ (BJP) ಅತ್ಯಂತ ಗಂಭೀರ ಆರೋಪ ಮಾಡಿದೆ. ದೌರ್ಜನ್ಯಕ್ಕೊಳಗಾದ ಪತ್ರಕರ್ತೆಯನ್ನು ರಿಚಾ ಪರಾಶರ್ (Richa Parashar) ಎಂದು ಗುರುತಿಸಲಾಗಿದ್ದು, ಘಟನೆಯ ಬಳಿಕ ತೀವ್ರ ಅಸ್ವಸ್ಥಗೊಂಡಿರುವ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ (Pradeep Bhandari) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತೆ ರಿಚಾ ಪರಾಶರ್ ಅವರು ಘಟನೆಯನ್ನು ವಿವರಿಸುತ್ತಿರುವ ವೀಡಿಯೋ ಒಂದನ್ನು ತಮ್ಮ ಅಧಿಕೃತ 'ಎಕ್ಸ್' (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರದೀಪ್ ಭಂಡಾರಿ ಅವರು ತಮ್ಮ 'ಎಕ್ಸ್' ಸಂದೇಶದಲ್ಲಿ, ಮೂರು ತಿಂಗಳ ಗರ್ಭಿಣಿಯಾಗಿರುವ ಮಹಿಳಾ ಪತ್ರಕರ್ತೆ ರಿಚಾ ಪರಾಶರ್ ಅವರು ಪ್ರತಿಭಟನೆಯ ಸುದ್ದಿಯನ್ನು ವರದಿ ಮಾಡುತ್ತಿದ್ದಾಗ ರಾಹುಲ್ ಗಾಂಧಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ! ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ ಆ ಮಹಿಳಾ ಪತ್ರಕರ್ತೆ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ರಾಹುಲ್ ಗಾಂಧಿ ಎಂತಹ ರೌಡಿ ಹಾಗೂ ಅವರ 'ಸ್ಮ್ಯಾಶ್ ದಿ ಪೇಟ್ರಿಯಾರ್ಕಿ' (Smash The Patriarchy) ಎನ್ನುವ ಘೋಷಣೆ ಎಷ್ಟು ಪೊಳ್ಳು ಎಂಬುದನ್ನು ತಿಳಿಯಲು ಪ್ರತಿಯೊಬ್ಬರೂ ಈ ಭೀಕರತೆಯನ್ನು ಕೇಳಬೇಕು ಎಂದು ಬರೆದುಕೊಂಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, "ರಾಹುಲ್ ಗಾಂಧಿ ಅವರು ಮಹಿಳಾ ಪತ್ರಕರ್ತೆಯನ್ನು ತಮ್ಮ ಮೊಣಕೈಯಿಂದ ತಳ್ಳಿ, ಆಕೆಯ ಭುಜವನ್ನು ಗಟ್ಟಿಯಾಗಿ ಹಿಡಿದು ನೆಲಕ್ಕೆ ತಳ್ಳಿದ ವೀಡಿಯೋವನ್ನು ನೀವೆಲ್ಲರೂ ನೋಡಿದ್ದೀರಿ. ಇದರಿಂದಾಗಿ ಆಕೆಯ ಪರಿಸ್ಥಿತಿ ಗಂಭೀರಗೊಂಡು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾವು ಆಕೆಯನ್ನು ಭೇಟಿ ಮಾಡಿದಾಗ, ತಾನು ಯಾವುದೇ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ, ಕೇವಲ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದರೂ ಸಹ ರಾಹುಲ್ ಗಾಂಧಿ ಸ್ವತಃ ತಮ್ಮ ಭುಜವನ್ನು ಜಗ್ಗಿ ನೆಲಕ್ಕೆ ತಳ್ಳಿದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಯಾವೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಆಕೆಗೆ ಸಹಾಯ ಮಾಡಲು ಮುಂದೆ ಬರಲಿಲ್ಲ, ಬದಲಿಗೆ ಆಕೆಯ ತೇಜೋವಧೆಗೆ ಯತ್ನಿಸಿದರು ಎಂದು ಭಂಡಾರಿ ಆರೋಪಿಸಿದರು.
ಮುಂದುವರಿದು ವಾಗ್ದಾಳಿ ನಡೆಸಿದ ಅವರು, ಪ್ರಭುತ್ವವನ್ನು ನಿರ್ಮೂಲನೆ ಮಾಡುವ ಮಾತನಾಡುವ ರಾಹುಲ್ ಗಾಂಧಿ ಇಂದು ಒಬ್ಬ ರೌಡಿಯಂತೆ ವರ್ತಿಸಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮದೇ ಪಕ್ಷದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ತಳ್ಳಿದ ವೀಡಿಯೋವನ್ನು ನೀವು ನೋಡಿರಬಹುದು. ಅವರು ತಮ್ಮ ಸ್ವಂತ ಕಾರ್ಯಕರ್ತರನ್ನೇ ಮೊಣಕೈಯಿಂದ ತಳ್ಳುತ್ತಾರೆ. ಇದೀಗ ಗರ್ಭಿಣಿ ಮಹಿಳಾ ಪತ್ರಕರ್ತೆಯ ಮೇಲೆ ಎಸಗಿರುವ ಈ ದೌರ್ಜನ್ಯವು ರಾಹುಲ್ ಗಾಂಧಿ ಅವರ ರಕ್ತದ ಕಣ ಕಣದಲ್ಲೂ ಈ ದೇಶದ ಪ್ರಜಾಪ್ರಭುತ್ವ ಮತ್ತು ಮಹಿಳೆಯರ ವಿರುದ್ಧ ದ್ವೇಷ ತುಂಬಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಸ್ಥಳೀಯ ಶಾಸಕ ಉಮಾಂಗ್ ಬಜಾಜ್, ರಾಜೇಶ್ ಭಾಟಿಯಾ ಸೇರಿದಂತೆ ಹಲವು ಬಿಜೆಪಿ ನಾಯಕರು ಆಸ್ಪತ್ರೆಗೆ ತೆರಳಿ ಪತ್ರಕರ್ತೆಯ ಆರೋಗ್ಯ ವಿಚಾರಿಸಿದ್ದು, ರಾಹುಲ್ ಗಾಂಧಿ ನಡವಳಿಕೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
3 month pregnant Female journalist Richa Parashar was thrashed by Rahul Gandhi when she was covering her protest!
Female journalist is admitted in the hospital, and she recounts the horrror!
Every person should listen to this horror to know how big a goon Rahul Gandhi is& how hollow is his slogan Smash The Patriachy!
— Pradeep Bhandari(प्रदीप भंडारी)🇮🇳 (@pradip103) October 12, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ