ಕೊಯಂಬತ್ತೂರು ಲೋಕಸಭಾ ಕ್ಷೇತ್ರದಿಂದ ಅಣ್ಣಾಮಲೈ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಡಿಎಂಕೆ ಗಣಪತಿ ರಾಜ್‌ಕುಮಾರ್ ವಿರುದ್ಧ 17,366 ಮತಗಳ ಅಂತರದಿಂದ ಅಣ್ಣಾಮಲೈ ಸೋತಿದ್ದಾರೆ.
ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (K Annamalai) 17 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದಾರೆ. ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ (Coimbatore Lok sabha Constituency) ಅಣ್ಣಾಮಲೈ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಡಿಎಂಕೆ ಗಣಪತಿ ರಾಜ್‌ಕುಮಾರ್ (K Ganapathy Rajkumar) ವಿರುದ್ಧ 17,366 ಮತಗಳ ಅಂತರದಿಂದ ಅಣ್ಣಾಮಲೈ ಸೋತಿದ್ದಾರೆ. ಎಐಡಿಎಂಕೆಯಿಂದ ಸಿಂಗೈ ಜಿ ರಾಮಚಂದ್ರನ್ ಸ್ಪರ್ಧೆ ಮಾಡಿದ್ದರು. ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು . ತಮಿಳುನಾಡು 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.
ಕೊಯಮತ್ತೂರು ಕ್ಷೇತ್ರ ಪಲ್ಲಡಂ, ಸೂಲೂರು, ಕವುಂಡಂಪಳಯಂ, ಕೊಯಮತ್ತೂರು(ಉತ್ತರ), ಕೊಯಮತ್ತೂರು(ದಕ್ಷಿಣ), ಸಿಂಗಾನಲ್ಲೂರು ಸೇರಿದಂತೆ 6 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕೆ.ಅಣ್ಣಾಮಲೈ ತೀವ್ರ ಆಕ್ರಮಣಕಾರಿಯಾಗಿ ಪ್ರಚಾರ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸಹ ತಮಿಳುನಾಡಿನ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಅಣ್ಣಾಮಲೈ ಸೋತಿದ್ದರು.
18ನೇ ಲೋಕಸಭೆಯ 543 ಸದಸ್ಯರನ್ನು ಆಯ್ಕೆ ಮಾಡಲು ಭಾರತದಲ್ಲಿ 19 ಏಪ್ರಿಲ್ 2024 ರಿಂದ 1 ಜೂನ್ 2024 ರವರೆಗೆ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ಚುನಾವಣೆಗಳು ಏಳು ಹಂತಗಳಲ್ಲಿ ನಡೆದಿದ್ದು ಇಂದು ಫಲಿತಾಂಶ ಪ್ರಕಟವಾಗಿದೆ. ಚುನಾವಣೆಗೂ ಮುನ್ನವೇ ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಧಿಕಾರಕ್ಕೆ ಏರಲು 272 ಸೀಟ್‌ಗಳ ಗೆಲುವು ಮ್ಯಾಜಿಕ್ ನಂಬರ್ ಆಗಿದೆ. ಈ ಬಾರಿ ಒಟ್ಟು ಶೇ. 66.33ರಷ್ಟು ಮತದಾನವಾಗಿದೆ. ಬಿಜೆಪಿ ಏಕಾಂಗಿಯಾಗಿ 441 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್ 328 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಹುತೇಕ ಎಲ್ಲಾ ಎಕ್ಸಿಟ್ ಪೋಲ್‌ಗಳು ಕೂಡ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಯುತವಾಗಿ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ ಎನ್ನುವ ಸಮೀಕ್ಷೆ ನೀಡಿದ್ದವು. ದೈನಿಕ್ ಭಾಸ್ಕರ್ ನೀಡಿದ್ದ 316 ಸೀಟ್‌ಗಳು ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಯ ಕನಿಷ್ಠವಾಗಿದ್ದರೆ, ಟುಡೇಸ್ ಚಾಣಕ್ಯದ 400 ಸೀಟ್‌ಗಳು ಗರಿಷ್ಠವಾಗಿದ್ದವು.