* ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ
* ಶನಿವಾರ ಮಧ್ಯಾಹ್ನ ರಾಜ್ಯಪಾಲ ಎಸ್.ಎನ್.ಆರ್ಯ ಅವರನ್ನು ಭೇಟಿಯಾಗಿ ರಾಜೀನಾಮೆ
* ನೂತನ ನಾಯಕರ ಆಯ್ಕೆಗಾಗಿ ಶನಿವಾರ ರಾತ್ರಿ 8 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ತ್ರಿಪುರಾ(ಮೇ.14): ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ಮಧ್ಯಾಹ್ನ ರಾಜ್ಯಪಾಲ ಎಸ್.ಎನ್.ಆರ್ಯ ಅವರನ್ನು ಭೇಟಿಯಾದ ಬಳಿಕ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನೂತನ ನಾಯಕರ ಆಯ್ಕೆಗಾಗಿ ಶನಿವಾರ ರಾತ್ರಿ 8 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಸಭೆಯ ನಂತರ ನೂತನ ನಾಯಕರ ಹೆಸರನ್ನು ಪ್ರಕಟಿಸಲಾಗುವುದು. ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ವಿನೋದ್ ತಾವ್ಡೆ ಮತ್ತು ತ್ರಿಪುರಾ ಉಸ್ತುವಾರಿ ವಿನೋದ್ ಸೋಂಕರ್ ಅವರು ಅಗರ್ತಲಾ ತಲುಪಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷವು ಹೊಸ ಮುಖದೊಂದಿಗೆ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಅವರು, ಪಕ್ಷ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ. ಸಂಘಟನೆ ಇದೆ, ಸರ್ಕಾರವಿದೆ, ಸಂಘಟನೆಯ ಹೊಸ ಪಾತ್ರವನ್ನು ಪೂರೈಸುವ ಕೆಲಸ ಮಾಡುತ್ತೇವೆ ಎಂದರು. ಇದೇ ವೇಳೆ ವೀಕ್ಷಕರಾಗಿ ಅಗರ್ತಲಾ ತಲುಪಿದ ಕೇಂದ್ರ ಸಚಿವ ಭೂಪೇಂದ್ರ ಯಾದವ್, 4 ವರ್ಷಗಳಲ್ಲಿ ತ್ರಿಪುರಾದಲ್ಲಿ ಸಿಎಂ ದೇವ್ ನೇತೃತ್ವದಲ್ಲಿ ಉತ್ತಮ ಕೆಲಸ ನಡೆದಿದೆ. ಬಿಪ್ಲಬ್ ಜಿ ರಾಜ್ಯದ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಕೊಡುಗೆ ನೀಡಿದ್ದಾರೆ. ಪಕ್ಷದಲ್ಲಿ ತಮ್ಮ ಪಾತ್ರವನ್ನು ಹೆಚ್ಚಿಸಿಕೊಳ್ಳಲು ದಾರಿ ಮಾಡಿಕೊಡುತ್ತಾರೆ. ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ ಎಂದಿದ್ದಾರೆ.
ಜಿಷ್ಣು ದೇವ್ ವರ್ಮಾ ಮುಂದಿನ ಮುಖ್ಯಮಂತ್ರಿ?
ದೇಬ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ತ್ರಿಪುರಾದಲ್ಲಿ ಪಕ್ಷದ ವ್ಯವಹಾರಗಳ ಬಗ್ಗೆ ಚರ್ಚಿಸಲು ಗುರುವಾರ ನವದೆಹಲಿಗೆ ತೆರಳಿದ್ದರು. ತ್ರಿಪುರಾ ಬಿಜೆಪಿ ಘಟಕದಲ್ಲಿ ಜಟಾಪಟಿ ನಡೆಯುತ್ತಿದೆ ಎಂಬ ಊಹಾಪೋಹಗಳಿದ್ದವು. ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ವರ್ಮಾ ಅವರು ತ್ರಿಪುರದ ರಾಜಮನೆತನದೊಂದಿಗೆ ಸಂಬಂಧ ಹೊಂದಿದ್ದಾರೆ.
ಬಿಪ್ಲಬ್ ದೇಬ್ 2018 ರಲ್ಲಿ ಸಿಎಂ ಹುದ್ದೆಯನ್ನು ಅಲಂಕರಿಸಿದರು
ಬಿಪ್ಲಬ್ ಕುಮಾರ್ ದೇಬ್ 2018 ರಲ್ಲಿ ಸಿಎಂ ಆಗುವ ಮೊದಲು ಆರ್‌ಎಸ್‌ಎಸ್‌ನೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದರು. ತ್ರಿಪುರಾದ ಗೋಮೋತಿ ಜಿಲ್ಲೆಯ ಉದಯಪುರದ ಅಕ್ರಬಾನ್‌ನಲ್ಲಿ ಜನಿಸಿದ ಬಿಪ್ಲಬ್ 15 ವರ್ಷಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುತ್ತಿದ್ದರು. 2016ರಲ್ಲಿ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ವಹಿಸಿಕೊಳ್ಳುವ ಮೊದಲು ದೆಹಲಿಯಲ್ಲಿ ಜಿಮ್ ಬೋಧಕರಾಗಿ ಕೆಲಸ ಮಾಡುತ್ತಿದ್ದರು.