Election Laws Amendment Bill: ವೋಟರ್‌ ಐಡಿ ಜತೆ ಆಧಾರ್‌ ಜೋಡಣೆಗೆ ವಿಧೇಯಕ ಮಂಡಿಸಲು ಕೇಂದ್ರ ಸಿದ್ಧತೆ!

By Suvarna NewsFirst Published Dec 20, 2021, 7:48 AM IST
Highlights

*ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸಿದ್ಧತೆ
*ಆಧಾರ್‌ ನೀಡಿಕೆ ಕಡ್ಡಾಯವಲ್ಲ, ಐಚ್ಛಿಕ
*ಅನ್ಯ ದಾಖಲೆಗಳನ್ನೂ ನೀಡಲು ಅವಕಾಶ
*ಮತಪಟ್ಟಿಗೆ ಹೆಸರು ಸೇರಿಸಲು 4 ಕಟಾಫ್‌ ದಿನ

ನವದೆಹಲಿ (ಡಿ. 20): 12 ಅಂಕಿಗಳ ವಿಶಿಷ್ಟಗುರುತಿನ ಸಂಖ್ಯೆ ಆಧಾರ್‌ (Aadhaar) ಅನ್ನು ಮತದಾರರ ಪಟ್ಟಿಜತೆ (Voter Card) ಜೋಡಣೆ ಮಾಡುವ ಸಲುವಾಗಿ ಕಾನೂನು ತಿದ್ದುಪಡಿ ತರಲು ಲೋಕಸಭೆಯಲ್ಲಿ ಸೋಮವಾರ ಕೇಂದ್ರ ಸರ್ಕಾರ ಚುನಾವಣಾ ಕಾನೂನು (ತಿದ್ದುಪಡಿ) ವಿಧೇಯಕ- 2021 (Election Laws (Amendment Bill) 2021) ಮಂಡನೆ ಮಾಡಲು ಸಜ್ಜಾಗಿದೆ. ಒಬ್ಬನೇ ಮತದಾರ ಒಂದೇ ಕ್ಷೇತ್ರದ ಒಂದಕ್ಕಿಂತ ಹೆಚ್ಚು ಕಡೆ ಅಥವಾ ಬೇರೆ ಬೇರೆ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದನ್ನು ಪತ್ತೆ ಹಚ್ಚಿ ಅಳಿಸಿ ಹಾಕಲು ಈ ವಿಧೇಯಕದಿಂದ ಅನುಕೂಲವಾಗಲಿದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನವ ಮತದಾರರಿಗೆ ವರ್ಷಕ್ಕೆ ಒಂದರ ಬದಲು ನಾಲ್ಕು ಬಾರಿ ಅವಕಾಶ ಕಲ್ಪಿಸುವ ಅಂಶವೂ ಈ ವಿಧೇಯಕದಲ್ಲಿದೆ. ಸೇನಾಧಿಕಾರಿಣಿಯ ಪತಿಯಂದಿರನ್ನೂ ಸೇವಾ ಮತದಾರರು ಎಂದು ಪರಿಗಣಿಸುವ ಪ್ರಸ್ತಾಪ ಕೂಡ ಮಸೂದೆಯಲ್ಲಿದೆ.

ಏನೇನಿದೆ?:

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಯಸುವವರಿಂದ ಗುರುತು ಸಾಬೀತಿಗೆ ಆಧಾರ್‌ ಸಂಖ್ಯೆಯನ್ನು ಕೇಳುವುದಕ್ಕೆ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಮಸೂದೆಯಲ್ಲಿದೆ. ಈಗಾಗಲೇ ಮತಪಟ್ಟಿಯಲ್ಲಿ ಹೆಸರು ಹೊಂದಿರುವವರ ವಿವರ ದೃಢೀಕರಣಕ್ಕೆ ಹಾಗೂ ಆ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತ ಹೊಂದಿದ್ದಾನೆಯೇ ಅಥವಾ ಒಂದೇ ಕ್ಷೇತ್ರದ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದಾನೆಯೇ ಎಂಬುದರ ಪತ್ತೆಗೆ ಆಧಾರ್‌ ಸಂಖ್ಯೆ ಕೇಳುವ ಅವಕಾಶವನ್ನು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ವಿಧೇಯಕ ಕಲ್ಪಿಸುತ್ತದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕೋರಿ ಸಲ್ಲಿಕೆಯಾಗುವ ಅರ್ಜಿಯನ್ನು ಆಧಾರ್‌ ಇಲ್ಲ ಎಂಬ ಕಾರಣಕ್ಕೆ ತಿರಸ್ಕರಿಸುವಂತಿಲ್ಲ. ಆಧಾರ್‌ ಸಂಖ್ಯೆ ಒದಗಿಸಿಲ್ಲ ಎಂದು ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ತೆಗೆಯುವಂತಿಲ್ಲ. ಬೇರೆ ದಾಖಲೆಗಳನ್ನು ಒದಗಿಸಲು ಅವಕಾಶ ನೀಡಬೇಕು ಎಂಬ ಪ್ರಸ್ತಾಪವೂ ವಿಧೇಯಕದಲ್ಲಿದೆ.

4 ಕಟಾಫ್‌ ಡೇಟ್‌:

ಪ್ರತಿ ವರ್ಷ ಜ.1ರಂದು ಅಥವಾ ಅದಕ್ಕಿಂತ ಮುಂಚೆ 18 ತುಂಬಿದವರಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ಅವಕಾಶವಿದೆ. ಆದರೆ ಆನಂತರ 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಒಂದು ವರ್ಷ ಕಾಯಬೇಕಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಜ.1, ಏ.1, ಜು.1 ಹಾಗೂ ಅ.1ರಂದು 18 ವರ್ಷ ತುಂಬಿದವರು ಕೂಡ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಮಸೂದೆ ಹೇಳುತ್ತದೆ.

ಸೇನಾ ಸಿಬ್ಬಂದಿಯ ಪತ್ನಿಯನ್ನು ‘ಸೇವಾ ಮತದಾರರು’ ಎಂದು ನೋಂದಣಿ ಮಾಡಲು ಅವಕಾಶವಿದೆ. ಆದರೆ ಸೇನೆಯಲ್ಲಿರುವ ಮಹಿಳಾ ಸಿಬ್ಬಂದಿಯ ಪತಿಗೆ ಈ ಅವಕಾಶವಿಲ್ಲ. ಹೀಗಾಗಿ ಕಾಯ್ದೆಯಲ್ಲಿರುವ ‘ಪತ್ನಿ’ ಎಂಬ ಪದವನ್ನು ತೆಗೆದು ‘ಸಂಗಾತಿ’ ಎಂದು ಬದಲಿಸುವ ಪ್ರಸ್ತಾಪವೂ ವಿಧೇಯಕದಲ್ಲಿದೆ.

ವೋಟರ್‌ ಐಡಿ ಜತೆ ಆಧಾರ್‌ ಜೋಡಣೆ ಕಡ್ಡಾಯವಲ್ಲ!

ಚುನಾವಣಾ ಗುರುತಿನ ಚೀಟಿಯೊಂದಿಗೆ)Election Voter ID) ಆಧಾರ್‌ ಸಂಖ್ಯೆಯನ್ನು (Aadhaar Number) ಸಂಯೋಜಿಸುವ ಮಹತ್ವದ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ವಿಷಯವೂ ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಸುಧಾರಣೆ ತರುವ ಕರಡು ಮಸೂದೆಗೆ (Cabinet clears bill on electoral reforms) ಬುಧವಾರ (ಡಿ.15) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

1) Goa Liberation Day: ಪಟೇಲರು ಇನ್ನೂ ಕೆಲ ವರ್ಷ ಬದುಕಿದ್ದರೆ ಗೋವಾ ವಿಮೋಚನೆಗಾಗಿ ಕಾಯಬೇಕಾಗುತ್ತಿರಲಿಲ್ಲ!

2) ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಆರ್‌ಎಸ್‌ಎಸ್‌ ನಿಯಂತ್ರಣವಿಲ್ಲ: ಮೋಹನ್‌ ಭಾಗವತ್‌

3) National Judicial Data Grid : ಹೈಕೋರ್ಟ್ ಗಳಲ್ಲಿ ಕಳೆದ 3 ವರ್ಷದಿಂದ ಶೇ.55ರಷ್ಟು ಕೇಸ್ ಪೆಂಡಿಂಗ್, ಕರ್ನಾಟಕದಲ್ಲೆಷ್ಟು?

click me!