
ಪಟ್ನಾ: ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಸರ್ಕಾರ, ಮಹಿಳೆಯರು ಮತ್ತು ಯುವಕರನ್ನು ಸೆಳೆಯುವ ಮಹತ್ವದ ಯೋಜನೆಗಳನ್ನು ಮಂಗಳವಾರ ಘೋಷಿಸಿದೆ. ಅದರನ್ವಯ ರಾಜ್ಯದ ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.35ರಷ್ಟು ಮೀಸಲನ್ನು ಕೇವಲ ರಾಜ್ಯದಲ್ಲಿ ವಾಸ ಮಾಡುವ ಮಹಿಳೆಯರಿಗೆ ನೀಡುವ ಮತ್ತು ಯುವಕರಿಗೆ ಉದ್ಯೊಗ ಕಲ್ಪಿಸಲು ಯುವಜನ ಆಯೋಗ ರಚಿಸುವುದಾಗಿ ಪ್ರಕಟಿಸಿದ್ದಾರೆ. ಇದು ಸೇರಿದಂತೆ 43 ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಶೇ.35 ಮಹಿಳಾ ಮೀಸಲು:
2016ರಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ಸರ್ಕಾರಿ ಉದ್ಯೋಗದಲ್ಲಿ ಶೇ.35ರಷ್ಟು ಮೀಸಲಾತಿಯನ್ನು ಇದೀಗ ಬಿಹಾರದಲ್ಲೇ ಶಾಶ್ವತವಾಗಿ ನೆಲೆಸಿರುವ ಅಭ್ಯರ್ಥಿಗಳಿಗಷ್ಟೇ ಸೀಮಿತಗೊಳಿಸುವ ಬೇಡಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಹಿಂದೆ ರಾಜ್ಯದಲ್ಲಿ ನೆಲೆಸಿದ ಯಾವುದೇ ಮಹಿಳೆಯರು ಇದರ ಸದುಪಯೋಗ ಪಡೆಯಬಹುದಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಸ್ಥಳೀಯರಿಗಷ್ಟೇ ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ಸೌಲಭ್ಯ ಸಿಗಬೇಕೆಂಬ ಒತ್ತಡ ಜೋರಾಗಿತ್ತು. ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್, ಎಲ್‌ಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದರು.
ಯುವಜನ ಆಯೋಗ:
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಪ್ರತಿಪಕ್ಷಗಳಿಂದ ಆರೋಪ ಹೆಚ್ಚಾಗುತ್ತಿರುವ ನಡುವೆಯೇ ಯುವಕರಿಗೆ ತರಬೇತಿ ನೀಡಿ, ಉದ್ಯೋಗಕ್ಕೆ ಸಕ್ಷಮಗೊಳಿಸುವ ಉದ್ದೇಶದಿಂದ ಬಿಹಾರ ಯೂಥ್ ಕಮಿಷನ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಇವರ ವಯಸ್ಸಿನ ಮಿತಿ 45 ಆಗಿರಲಿದೆ. ಖಾಸಗಿ ಉದ್ಯೋಗಗಳಲ್ಲಿ ಬಿಹಾರದ ಯುವಜನರಿಗೆ ಹೆಚ್ಚಿನ ಆದ್ಯತೆ ಸಿಗುವಂತೆ ನೋಡಿಕೊಳ್ಳುವುದು ಮತ್ತು ರಾಜ್ಯದ ಹೊರಗೆ ಓದುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಬಿಹಾರದ ಯುವಜನರ ಹಿತಾಸಕ್ತಿ ಕಾಪಾಡುವ ಕೆಲಸ ಆಯೋಗ ಮಾಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ