ಗಠಬಂಧನ್‌ಗೆ ‘ತವರೂರಲ್ಲೇ’ ಆಘಾತ: ಯಾವ ಪಕ್ಷಕ್ಕೆ ಏನು ಸಂದೇಶ?

By Kannadaprabha News  |  First Published Nov 11, 2020, 9:19 AM IST

ಜೆಡಿಯು ಹಿಂದಿಕ್ಕಿ ನಂ.1 ಪಕ್ಷವಾಗಿ ಹೊರಹೊಮ್ಮಿದರೂ ಇನ್ನು ಮುಂದೆ ಕೇವಲ ನಿತೀಶ್‌ ನಂಬಿ ಕೂರಲಾಗದು. ಪಕ್ಷವನ್ನು ಇನ್ನಷ್ಟು ಬೆಳೆಸುವ ಅವಶ್ಯಕತೆ ಇದೆ. 


ಪಟನಾ (ನ. 11):  5 ವರ್ಷಗಳ ಹಿಂದೆ ಮೊದಲ ಬಾರಿಗೆ ಬಿಹಾರದಲ್ಲಿ ತಲೆ ಎತ್ತಿ, ಭರ್ಜರಿ ಯಶಸ್ಸು ಕಂಡಿದ್ದ ಮಹಾಗಠಬಂಧನ್‌ (ಮಹಾಮೈತ್ರಿಕೂಟ)ಗೆ ಇದೀಗ ಅದೇ ರಾಜ್ಯದಲ್ಲಿ ತೀವ್ರ ಹಿನ್ನಡೆಯಾಗಿದೆ.

2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯನ್ನು ಸೋಲಿಸುವ ಸಲುವಾಗಿ, ಬದ್ಧವೈರಿಗಳಾದ ಜೆಡಿಯು- ಆರ್‌ಜೆಡಿ ಕೈಜೋಡಿಸಿದ್ದವು. ಇದರ ಜೊತೆಗೆ ಕಾಂಗ್ರೆಸ್‌, ಎಡಪಕ್ಷಗಳು ಕೂಡ ಸೇರಿಕೊಂಡು ಚುನಾವಣೆ ಎದುರಿಸಿದ್ದವು. ಪರಿಣಾಮ 243 ಸ್ಥಾನಗಳ ಪೈಕಿ 178 ಸ್ಥಾನ ಗೆದ್ದುಕೊಂಡಿದ್ದವು. ಇದು ದೇಶದ ರಾಜಕೀಯದಲ್ಲಿ ಹೊಸ ಬದಲಾವಣೆಯ ಸುಳಿವು ನೀಡಿತ್ತು.

Tap to resize

Latest Videos

ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಏಕಾಂಗಿ ಹೋರಾಟದ ಬದಲು ವಿಪಕ್ಷಗಳ ಸಂಘಟಿತ ಹೋರಾಟ ಅನಿವಾರ್ಯ ಎಂಬ ಸಂದೇಶವನ್ನು ಎಲ್ಲಾ ರಾಜ್ಯಗಳಿಗೂ ರವಾನಿಸಿತ್ತು. ಜೊತೆಗೆ ಈ ಮೈತ್ರಿ ಯಶಸ್ವಿಯಾದ ಬೆನ್ನಲ್ಲೇ, ಜೆಡಿಯು ನಾಯಕ ನಿತೀಶ್‌ ಕುಮಾರ್‌ 2019ರ ಲೋಕಸಭಾ ಚುನಾವಣೆ ವೇಳೆಗೆ ಮಹಾಗಠಬಂಧನದ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವ ಮಾತುಗಳು ಕೇಳಿಬಂದಿದ್ದವು.

ಆದರೆ ಅಧಿಕಾರಕ್ಕೆ ಬಂದ ವರ್ಷದಲ್ಲೇ ಎರಡೂ ಪಕ್ಷಗಳ ನಡುವೆ ತಾಳ-ಮೇಳ ಸರಿಹೊಂದಿಲ್ಲದ ಕಾರಣ ನಿತೀಶ್‌ ಅವರು ಗಠಬಂಧನಕ್ಕೆ ವಿದಾಯ ಹೇಳಿದರು. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮತ್ತೆ ಅಧಿಕಾರಕ್ಕೆ ಬಂದರು. ಈ ಮಧ್ಯೆ ಗಠಬಂಧನ ಪ್ರಯೋಗ ಉತ್ತರಪ್ರದೇಶ, ಕರ್ನಾಟಕದಲ್ಲೂ ನಡೆಯಿತಾದರೂ ಯಶಸ್ಸು ಸಿಕ್ಕಿರಲಿಲ್ಲ.

ನಿರೀಕ್ಷೆಗೂ ಮೀರಿದ ಸಾಧನೆ : ಮೊದಲ ಬಾರಿ ಜೆಡಿಯುವನ್ನು ಹಿಂದಿಕ್ಕಿದ ಬಿಜೆಪಿ!

ಯಾವ ಪಕ್ಷಕ್ಕೆ ಏನು ಸಂದೇಶ?

ಬಿಜೆಪಿ

- ಜೆಡಿಯು ಹಿಂದಿಕ್ಕಿ ನಂ.1 ಪಕ್ಷವಾಗಿ ಹೊರಹೊಮ್ಮಿದರೂ ಇನ್ನು ಮುಂದೆ ಕೇವಲ ನಿತೀಶ್‌ ನಂಬಿ ಕೂರಲಾಗದು. ಪಕ್ಷವನ್ನು ಇನ್ನಷ್ಟುಬೆಳೆಸುವ ಅವಶ್ಯಕತೆ ಇದೆ

- ಲಾಲು ಅನುಪಸ್ಥಿತಿಯಲ್ಲೂ ಪಕ್ಷ ಪೂರ್ಣ ಕುಸಿಯದಂತೆ ತಡೆಯುವಲ್ಲಿ ತೇಜಸ್ವಿ ಯಾದವ್‌ ಯಶಸ್ವಿ. ಇದು ಮುಂದಿನ ದಿನಗಳಲ್ಲಿ ಎನ್‌ಡಿಎಗೆ ಎಚ್ಚರಿಕೆ ಕರೆ ಗಂಟೆ

- ರಾಜ್ಯದಲ್ಲಿ ಈಗಲೂ ಬಿಜೆಪಿಗೆ ಸೂಕ್ತ ಸಿಎಂ ಅಭ್ಯರ್ಥಿ ಇಲ್ಲ. ಡಿಸಿಎಂ ಸುಶೀಲ್‌ ಮೋದಿ ಅವರು ನಿತೀಶ್‌ ನೆರಳಲ್ಲೇ ಇದ್ದಾರೆ. ಶೀಘ್ರವೇ ಹೊಸ ನಾಯಕನ ಆಯ್ಕೆ ಅನಿವಾರ್ಯ

- ಈ ಬಾರಿ ಯುವ ಸಮೂಹ ಆರ್‌ಜೆಡಿ ಕಡೆ ವಾಲಿದ ಸೂಚನೆ ಚುನಾವಣಾ ರಾರ‍ಯಲಿಗಳಲ್ಲಿ ಕಂಡಿತ್ತು. ತನ್ನ ಮತಬ್ಯಾಂಕ್‌ ಕೈತಪ್ಪದಂತೆ ನೋಡಿಕೊಳ್ಳುವ ಅವಶ್ಯಕತೆ

ಜೆಡಿಯು

- ಮತದಾರರು ಸದಾ ಹೊಸತು ಬಯಸುತ್ತಾರೆ. 15 ವರ್ಷಗಳ ಉತ್ತಮ ಆಡಳಿತವೊಂದೇ ಕೈಹಿಡಿಯದು. ಬದಲಾದ ಕಾಲಕ್ಕೆ ತಕ್ಕಂತೆ ಚಿಂತನೆ, ಆಡಳಿತ ಬದಲಾಗಬೇಕಿದೆ

- ಬಿಹಾರದಲ್ಲಿ ಎನ್‌ಡಿಎ ಕೂಟದ ಅತಿದೊಡ್ಡ ಪಕ್ಷ ಎಂಬ ಹಿರಿಮೆ ಕೈತಪ್ಪಿದೆ. ಇದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಕಳವಳಕಾರಿ. ಹೀಗಾಗಿ ಪಕ್ಷಕ್ಕೀಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ

- ನಿತೀಶ್‌ ಬಿಟ್ಟರೆ ಪಕ್ಷ ಮುನ್ನಡೆಸುವ ಇತರೆ ನಾಯಕರಿಲ್ಲ. ಭವಿಷ್ಯದ ನಾಯಕನನ್ನು ಬೆಳೆಸಿಲ್ಲ. ಇದು ಮುಂದಿನ ಚುನಾವಣೆ ವೇಳೆಗೆ ಜೆಡಿಯುದ ಪತನಕ್ಕೂ ಕಾರಣವಾಗಬಲ್ಲದು

- ಮೋದಿ ಅಲೆಯಲ್ಲಿ ಬಿಹಾರದ ಆಡಳಿತದ ವೈಫಲ್ಯಗಳು ಮುಚ್ಚಿಹೋಗಿವೆ. ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ, ಸುಧಾರಣಾ ಕ್ರಮಗಳು ಅನಿವಾರ್ಯ

ಬಿಹಾರ ಚುನಾವಣೆ : ಎಲ್ಲಾ ಸಮೀಕ್ಷೆಗಳೂ ಸುಳ್ಳಾದವು!

ಆರ್‌ಜೆಡಿ

- ಕುಟುಂಬ ಕಲಹ ಚುನಾವಣೆ ಗೆಲ್ಲಲು ನೆರವಾಗದು. ಲಾಲು ಪುತ್ರರ ಕಲಹ ಕಳೆದ 5 ವರ್ಷಗಳಲ್ಲಿ ಪಕ್ಷ ಬೆಳವಣಿಗೆ ಮಾರಕವಾಗಿದೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ನೆರವಿಗೆ ಬರಲ್ಲ

- ಎನ್‌ಡಿಎ ಸರ್ಕಾರದ ವೈಫಲ್ಯ ಎತ್ತಿತೋರಿಸುವಲ್ಲಿ ವೈಫಲ್ಯ ಸಾಬೀತು. 5 ವರ್ಷಗಳಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸದ್ದು ಜಯದ ಹಾದಿಗೆ ಅಡ್ಡಿ

- ಕೊರೋನಾ ನಿರ್ವಹಣೆ, ಲಾಕ್ಡೌನ್‌ ಬಳಿಕ ತವರಿಗೆ ಬಂದವರ ನಿರ್ವಹಣೆ ವಿಷಯದಲ್ಲಿ ಸರ್ಕಾರದ ವೈಫಲ್ಯ, ಶ್ರೀಜನ್‌ ಹಗರಣದ ಮೊದಲಾದ ವಿಷಯಗಳ ಬಗ್ಗೆ ಜನರ ಗಮನ ಸೆಳೆಯುವಲ್ಲಿ ವಿಫಲ

- ಆರ್‌ಜೆಡಿ ಕೇವಲ ಲಾಲು ಕುಟುಂಬದ ಆಸ್ತಿ ಎನ್ನುವ ನಂಬಿಕೆ ದೂರ ಮಾಡುವ ಕೆಲಸ ಆಗಬೇಕಿದೆ. ಹೊಸ ನಾಯಕರ ಆಯ್ಕೆ ನಡೆಯಬೇಕಿದೆ. ಜನರಲ್ಲಿ ಕನಸು ತುಂಬುವ ಕೆಲಸ ನಡೆಯಬೇಕಿದೆ.

ಕಾಂಗ್ರೆಸ್‌

- ಹಂಗಾಮಿ ಅಧ್ಯಕ್ಷೆ ಸೋನಿಯಾ ಊರೂರು ಸುತ್ತಿ ಪ್ರಚಾರ ಮಾಡಲಾಗದು. ರಾಹುಲ್‌ಗೆ ಕಾಲಿಗೆ ಚಕ್ರ ಸುತ್ತಿಕೊಂಡು ಸುತ್ತುವ ಅಭ್ಯಾಸವಿಲ್ಲ. ಇದರಿಂದ ಪ್ರಚಾರದ ಮೇಲೆ ಪರಿಣಾಮ

- ಬಹುತೇಕ ರಾಜ್ಯಗಳಲ್ಲಿ ಪ್ರಾಂತೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಪಾಲುದಾರನಂತೆ ಹಿಂದೆ ಬೀಳುವುದು ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟುಅವನತ್ತಿಯತ್ತ ತಳ್ಳಬಲ್ಲದು

- ಕೇವಲ ಮೋದಿ ಟೀಕಿಸಿದರೆ ಗೆಲ್ಲಲಾಗದು. ಮುಂದೇನು ಎಂದು ಜನರಿಗೆ ಭರವಸೆ ನೀಡಬೇಕು. ಓಲೈಕೆ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕೀಯ ಅನಿವಾರ್ಯ

- ತಳಮಟ್ಟದಲ್ಲಿ ಪಕ್ಷ ಸಂಘಟನೆ ಅನಿವಾರ್ಯ. ಹಳೆ ತಲೆಮಾರಿನ ನಾಯಕರ ಜೊತೆಗೆ ಹೊಸ ಯುವ ನಾಯಕರ ಬೆಳವಣಿಗೆ ಆಗಬೇಕಿದೆ. ಚುನಾವಣೆ ಎದುರಾದಾಗ ಮಾತ್ರ ರಾಜಕೀಯ ಮಾಡಿದರೆ ಗೆಲ್ಲಲಾಗದು

ಎಲ್‌ಜೆಪಿ

- ತಂದೆ ರಾಂ ವಿಲಾಸ್‌ ಪಾಸ್ವಾನ್‌ ಇಲ್ಲದೇ ಚುನಾವಣೆ ಎದುರಿಸುವುದು ಅಷ್ಟುಸುಲಭವಲ್ಲ. ರಾಜಕೀಯ ಹವಾಮಾನ ಅರಿಯುವುದರಲ್ಲಿ ಖ್ಯಾತರಾಗಿದ್ದ ಪಾಸ್ವಾನ್‌ ಕಲೆ ಪುತ್ರ ಚಿರಾಗ್‌ಗೆ ಇನ್ನೂ ಕರಗತವಾಗಬೇಕಿದೆ

- ಎಲ್‌ಜೆಪಿ ಮೊದಲಿನಿಂದಲೂ ಹಿಂದುಳಿದ ಮತಗಳನ್ನೇ ಅವಲಂಬಿಸಿದೆ. ಆದರೆ ಅದರಲ್ಲಿ ಇದೀಗ ಬಿಜೆಪಿ, ಜೆಡಿಯು, ಕಾಂಗ್ರೆಸ್‌, ಆರ್‌ಜೆಡಿ ಎಲ್ಲವೂ ಪಾಲು ಹಂಚಿಕೊಳ್ಳುತ್ತಿವೆ. ಹೀಗಾಗಿ ಹೊಸ ಮತ ಬ್ಯಾಂಕ್‌ ಹುಡುವುದು ಅನಿವಾರ್ಯ

- ತಕ್ಷಣಕ್ಕೆ ಜೆಡಿಯು ಬದಿಗಿಟ್ಟು ಬಿಜೆಪಿ ಜೊತೆ ಮೈತ್ರಿ ಅಸಾಧ್ಯದ ಮಾತು. ಹೀಗಾಗಿ ಪಕ್ಷ ಮುಂಚೂಣಿಗೆ ಬರುವವರೆಗೂ ಬಿಜೆಪಿ- ಜೆಡಿಯು ಜೊತೆ ಹೊಂದಾಣಿಕೆ ಅನಿವಾರ್ಯ

- ಎನ್‌ಡಿಎಗಿಂತ ಮಹಾಗಠಬಂಧನ್‌ನಲ್ಲೇ ಹೆಚ್ಚು ಬೆಳವಣಿಗೆ ಸಾಧ್ಯತೆ ಎಂದಾದಲ್ಲಿ ಕಾಲ ನೋಡಿ ಬಣ ಬದಲಾವಣೆ ಅನಿವಾರ್ಯ

click me!