
ಪಾಟ್ನಾ(ಡಿ.15): ಬಿಹಾರದ ಸಿಎಂ ನಿತೀಶ್ ಕುಮಾರ್ ಹೊಸ ವಿವಾದ ಸೃಷ್ಟಿಸಿದ್ದಾರೆ. ವೇದಿಕೆಯಲ್ಲಿಯೇ ನೂತನವಾಗಿ ನೇಮಕವಾದ ವೈದ್ಯೆಯೊಬ್ಬರ ಹಿಜಾಬ್ ತೆಗೆಯಲು ಯತ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸೋಮವಾರ ನಿತೀಶ್ ಕುಮಾರ್, ಹೊಸದಾಗಿ ನೇಮಕವಾದ ಅಯುಷ್ ವೈದ್ಯರಿಗೆ ನೇಮಕಾತಿ ಪತ್ರವನ್ನು ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವೈದ್ಯೆ ಧರಿಸಿದ್ದ ಹಿಜಾಬ್ ತೆಗೆಯಲು ಅವರು ಮುಂದಾಗಿದ್ದಾರೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಖ್ಯಮಂತ್ರಿಗಳ ಸಚಿವಾಲಯದ 'ಸಂವಾದ್' ನಲ್ಲಿ 1,000 ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು. ವೀಡಿಯೊದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸಾಧ್ಯವಾಗಲಿಲ್ಲ.
ಮುಖ್ಯಮಂತ್ರಿ ಕಚೇರಿಯ ಪ್ರಕಾರ, ನೇಮಕಗೊಂಡವರಲ್ಲಿ 685 ಆಯುರ್ವೇದ ವೈದ್ಯರು ಸೇರಿದ್ದಾರೆ, 393 ಹೋಮಿಯೋಪತಿ ವೈದ್ಯರು ಮತ್ತು 205 ಜನರು ಯುನಾನಿ ವೈದ್ಯಕೀಯ ಪದ್ಧತಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಅವರಲ್ಲಿ 10 ನೇಮಕಾತಿದಾರರಿಗೆ ನಿತೀಸ್ ಕುಮಾರ್ ಅವರು ಉದ್ಯೋಗ ಪತ್ರಗಳನ್ನು ಹಸ್ತಾಂತರಿಸಿದರು, ಉಳಿದವರು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಪಡೆದರು.
10 ಮಂದಿಯ ಪೈಕಿ ನುಸ್ರತ್ ಪರ್ವೀನ್ ಸರದಿ ಬಂದಾಗ, 75 ವರ್ಷದ ಮುಖ್ಯಮಂತ್ರಿ ಹುಬ್ಬು ಗಂಟಿಕ್ಕಿಕೊಂಡು 'ಇದೇನಿದು?' ಎಂದು ಉದ್ಘರಿಸಿದ್ದಾರೆ. ಎತ್ತರದ ವೇದಿಕೆಯ ಮೇಲೆ ನಿಂತ ಮುಖ್ಯಮಂತ್ರಿ, ನಂತರ ಬಾಗಿ ಹಿಜಾಬ್ ಅನ್ನು ಕೆಳಗೆ ಎಳೆಯಲು ಯತ್ನಿಸಿದ್ದಾರೆ.
ಈ ಹಂತದಲ್ಲಿ ಗೊಂದಲಕ್ಕೆ ಒಳಗಾದ ನುಸ್ರತ್ ಪರ್ವೀನ್‌ರನ್ನು ಅಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ತರಾತುರಿಯಲ್ಲಿ ಪಕ್ಕಕ್ಕೆ ಎಳೆದಿದ್ದಾರೆ. ಆದರೆ, ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಈ ಸಂದರ್ಭದಲ್ಲಿ ನಿತೀಶ್‌ಕುಮಾರ್ ಸಹಾಯಕ್ಕೆ ಬಂದಿದ್ದರು.
ಇದರ ನಡುವೆ, ಆರ್‌ಜೆಡಿ ಮತ್ತು ಕಾಂಗ್ರೆಸ್‌ನಂತಹ ವಿರೋಧ ಪಕ್ಷಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿವೆ ಮತ್ತು ಈ ಘಟನೆಯು ಜೆಡಿ (ಯು) ಮುಖ್ಯಸ್ಥರ "ಅಸ್ಥಿರ ಮಾನಸಿಕ ಆರೋಗ್ಯ" ದ ಇತ್ತೀಚಿನ ಪುರಾವೆಯಾಗಿದೆ ಎಂದು ಹೇಳಿಕೊಂಡಿವೆ.
ಈ ಘಟನೆಯ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ರಾಷ್ಟ್ರೀಯ ಜನತಾ ದಳ, ನಿತೀಶ್ ಕುಮಾರ್ ಅವರನ್ನು ಟೀಕಿಸುತ್ತಾ, "ನಿತೀಶ್ ಜೀ ಅವರಿಗೆ ಏನಾಯಿತು? ಅವರ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆಯೇ ಅಥವಾ ನಿತೀಶ್ ಬಾಬು ಈಗ 100% ಸಂಘಿಯಾಗಿದ್ದಾರೆಯೇ?" ಎಂದು ಪ್ರಶ್ನೆ ಮಾಡಿದೆ. "ಅಸಹ್ಯಕರ ಕೃತ್ಯ" ಎಂದು ಕರೆದು ಬಿಹಾರ ಮುಖ್ಯಮಂತ್ರಿಯನ್ನು ಟೀಕಿಸಿದ ಕಾಂಗ್ರೆಸ್ ಪಕ್ಷ, ನಿತೀಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಹೇಳಿದೆ.
"ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಇಷ್ಟೊಂದು ಅವಮಾನಕರ ರೀತಿಯಲ್ಲಿ ವರ್ತಿಸಿದರೆ, ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆಂದು ಊಹಿಸಬಹುದು" ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
"ಈ ನಾಚಿಕೆಯಿಲ್ಲದ ಕೃತ್ಯ ನೋಡಿ. ಒಬ್ಬ ಮಹಿಳಾ ವೈದ್ಯೆ ನೇಮಕಾತಿ ಪಡೆಯಲು ಬಂದಾಗ, ನಿತೀಶ್ ಕುಮಾರ್ ಆಕೆಯ ಹಿಜಾಬ್ ಅನ್ನು ಬಿಚ್ಚಿದರು. ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಇಷ್ಟೊಂದು ಅವಮಾನಕರ ರೀತಿಯಲ್ಲಿ ವರ್ತಿಸಿದರೆ, ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆಂದು ಊಹಿಸಬಹುದು. ಈ ಖಂಡನೀಯ ಕೃತ್ಯಕ್ಕಾಗಿ ನಿತೀಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು. ಈ ರೀತಿಯ ದುಷ್ಕೃತ್ಯ ಕ್ಷಮಿಸಲಾಗದು" ಎಂದು ಕಾಂಗ್ರೆಸ್ ಪಕ್ಷವು ಎಕ್ಸ್ ನಲ್ಲಿ ಬರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ