
ಪಾಟ್ನಾ: ಬಿಹಾರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆ ದೊಡ್ಡ ಗಲಾಟೆಗೆ ಕಾರಣವಾಗಿದೆ. ಪಾಟಲಿಪುತ್ರ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ಮತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯ್ತು. ಅಭ್ಯರ್ಥಿಗಳು ಕಲ್ಲು ತೂರಾಟ ನಡೆಸಿ, ರೈಲು ಹಳಿಗಳ ಮೇಲೆ ಇಳಿದು ರೈಲು ಸಂಚಾರಕ್ಕೆ ಅಡ್ಡಿಪಡಿಸಿದರು. ಪರೀಕ್ಷೆಗೆ ಹೋಗಲು ಸರಿಯಾದ ಪ್ರಯಾಣ ವ್ಯವಸ್ಥೆ ಮಾಡಿಲ್ಲ ಎಂಬುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣ. ಪರೀಕ್ಷಾರ್ಥಿಗಳಿಗಾಗಿಯೇ ಬಿಟ್ಟಿದ್ದ 'ಎಕ್ಸಾಂ ಸ್ಪೆಷಲ್' ರೈಲನ್ನು ಪ್ರತಿಭಟನಾಕಾರರು ಜಖಂಗೊಳಿಸಿದರು. ಪದೇ ಪದೇ ರೈಲುಗಳ ಎಮರ್ಜೆನ್ಸಿ ಚೈನ್ ಎಳೆದು ಸೇವೆಗೆ ಅಡ್ಡಿಪಡಿಸಿದರು.
ಅಧಿಕಾರಿಗಳಿಗೂ ಮುತ್ತಿಗೆ ಹಾಕಿದಾಗ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಹಳಿಗಳಿಂದ ಕದಲಲು ಒಪ್ಪದ ಪ್ರತಿಭಟನಾಕಾರರು, ಪೊಲೀಸರ ಮೇಲೆಯೇ ಭಾರಿ ಕಲ್ಲು ತೂರಾಟ ನಡೆಸಿದರು. ಈ ಕಲ್ಲು ತೂರಾಟದಲ್ಲಿ ಪಾಟ್ನಾ ವಲಯದ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಜಿತೇಂದ್ರ ರಾಣಾ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ.
ಗಲಾಟೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ. ಭಾನುವಾರ ಬೆಳಿಗ್ಗೆ ಲಭ್ಯವಾದ ದೃಶ್ಯಗಳಲ್ಲಿ, ನಿಲ್ದಾಣದ ಆವರಣ ಪೂರ್ತಿ ಕಲ್ಲುಗಳು ಚದುರಿ ಬಿದ್ದಿದ್ದು, ರೈಲ್ವೇ ಆಸ್ತಿಪಾಸ್ತಿಗೆ ದೊಡ್ಡ ಹಾನಿಯಾಗಿರುವುದು ಕಂಡುಬಂದಿದೆ.
"ಪ್ರತಿಭಟನಾಕಾರರ ಗುಂಪಿನಲ್ಲಿ ಕೆಲವು ಸಮಾಜವಿರೋಧಿ ಶಕ್ತಿಗಳು ನುಸುಳಿದ್ದೇ ಈ ಹಿಂಸಾಚಾರಕ್ಕೆ ಕಾರಣ" ಎಂದು ಪಾಟ್ನಾ ಜಿಲ್ಲಾಧಿಕಾರಿ ಡಾ. ತ್ಯಾಗರಾಜನ್ ಹೇಳಿದ್ದಾರೆ. ಅಭ್ಯರ್ಥಿಗಳ ಮನವಿಯಂತೆ ವಿಶೇಷ ರೈಲುಗಳನ್ನು ನಿಲ್ದಾಣದಲ್ಲಿ ಸಿದ್ಧಪಡಿಸಲಾಗಿತ್ತು ಎಂದೂ ಅವರು ಮಾಹಿತಿ ನೀಡಿದರು. ಬಿಹಾರದ 38 ಜಿಲ್ಲೆಗಳಲ್ಲಿ ಭಾನುವಾರ ನಡೆಯಬೇಕಿದ್ದ ಬಿಹಾರ ಪೊಲೀಸ್ ಪ್ರೊಹಿಬಿಷನ್, ಜೈಲ್ ವಾರ್ಡರ್ ಮತ್ತು ಮೊಬೈಲ್ ಸ್ಕ್ವಾಡ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಯ ಮುನ್ನಾದಿನ ಈ ದೊಡ್ಡ ಗಲಾಟೆ ನಡೆದಿದೆ.
ಸುಮಾರು 200-250 ವಿದ್ಯಾರ್ಥಿಗಳು ರೈಲುಗಳನ್ನು ತಡೆದಿದ್ದರು. ಪೊಲೀಸರು, ಆರ್‌ಪಿಎಫ್, ಜಿಆರ್‌ಪಿ ಮತ್ತು ಜಿಲ್ಲಾ ಪೊಲೀಸ್ ಪಡೆಗಳೊಂದಿಗೆ ಸೇರಿ ದಾರಿ ತೆರವುಗೊಳಿಸಲು ಮನವೊಲಿಸಲು ಪ್ರಯತ್ನಿಸಿದಾಗ, ಅವರಲ್ಲಿ ಕೆಲವರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಜೀವ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಡೆಯಲು ಪೊಲೀಸರು ಅಗತ್ಯ ಕ್ರಮ ಕೈಗೊಂಡರು. ಪೊಲೀಸ್ ಕ್ರಮದ ನಂತರ, ಜನಸಮೂಹವನ್ನು ಚದುರಿಸಲಾಯಿತು ಮತ್ತು ಈಗ ಎಲ್ಲಾ ರೈಲುಗಳು ಮತ್ತೆ ಓಡುತ್ತಿವೆ ಎಂದು ಐಜಿ ಜಿತೇಂದ್ರ ರಾಣಾ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ