
ಪಾಟ್ನಾ (ಜೂ.5): ಗಂಗಾ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಒಂದು ದಿನದ ನಂತರ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದರೊಂದಿಗೆ ಸೇತುವೆ ವಿನ್ಯಾಸವೇ ದೋಷಪೂರಿತವಾಗಿತ್ತು ಎಂದು ಹೇಳಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕುಮಾರ್, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 2022ರಲ್ಲಿಯೂ ಇದೇ ಸೇತುವೆ ಕುಸಿದು ಬಿದ್ದಿತ್ತು ಎನ್ನುವ ಮಾಹಿತಿಯನ್ನೂ ನೀಡಿದ್ದಾರೆ. ನಿನ್ನೆ ಕುಸಿದ ಸೇತುವೆ ಕಳೆದ ವರ್ಷವೂ ಕುಸಿದಿತ್ತು. ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಸೇತುವೆಯ ನಿರ್ಮಾಣ ಕಾರ್ಯ ಸರಿಯಾಗಿ ಆಗದ ಕಾರಣ ಮತ್ತೆ ಮತ್ತೆ ಕುಸಿಯುತ್ತಿದೆ. ಇಲಾಖೆಯು ಈ ಕುರಿತಾಗಿ ಪರಿಶೀಲನೆ ನಡೆಸಲಿದ್ದು, ಆ ಬಳಿಕ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ. ಘಟನೆಯ ನಂತರ ನಿತೀಶ್ ಕುಮಾರ್ ತಕ್ಷಣವೇ ತನಿಖೆಗೆ ಆದೇಶ ನೀಡಿದ್ದಾರೆ. ಇದಕ್ಕೆ ಯಾರು ಕಾರಣ ಅನ್ನೋದನ್ನು ಗುರುತಿಸುವಂತೆಯೂ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ನಿತೀಶ್ ಕುಮಾರ್ ಅವರು 2014ರಲ್ಲಿ ಸೇತುವೆಯನ್ನು ಉದ್ಘಾಟಿಸಿದ್ದರು.
ಆಗುವನಿಘಾಟ್ ಮತ್ತು ಸುಲ್ತಂಗಂಜ್‌ಗೆ ಸಂಪರ್ಕ ಕಲ್ಪಿಸುವ ಭಾಗಲ್‌ಪುರ ಸೇತುವೆ ಭಾನುವಾರ ಕುಸಿದು ಬೀಳುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದೇನು?: ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ತಜ್ಞರು ಇದರಲ್ಲಿ ದೊಡ್ಡ ಮಟ್ಟದ ನ್ಯೂನತೆಗಳನ್ನು ಕಂಡ ಕಾರಣದಿಂದಾಗಿ, ಯೋಜಿತವಾಗಿ ಇದನ್ನು ಕೆಡವಲು ಸೂಚನೆ ನೀಡಿದ್ದರು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, ರಸ್ತೆ ನಿರ್ಮಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ್ ಅಮೃತ್, 2022 ರಲ್ಲಿ ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಅದೇ ಸೇತುವೆಯ ಒಂದು ಭಾಗ ಕುಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ನಂತರ ಸರ್ಕಾರವು ಐಐಟಿ-ರೂರ್ಕಿಯಲ್ಲಿ ಸಂಶೋಧಕರನ್ನು ನಿಯೋಜನೆ ಮಾಡಿ ಸೇತುವೆಯ ಪರಾಮರ್ಶೆ ನಡೆಸಿತ್ತು.
ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ, ವಿಡಿಯೋ ವೈರಲ್!
ವಿಪಕ್ಷಗಳ ಟೀಕೆ: ಇನ್ನು ಸೇತುವೆ ಕುಸಿದ ಬೆನ್ನಲ್ಲಿಯೇ ರಾಜ್ಯದಲ್ಲಿ ದೊಡ್ಡ ವಿರೋಧಪಕ್ಷವವಾದ ಬಿಜೆಪಿ, ಹಳೆಯ ಮಿತ್ರ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನ್‌ವಾಲಾ ಇದನ್ನು "ಭ್ರಷ್ಟಾಚಾರದ ಸೇತುವೆ" ಎಂದು ಬಣ್ಣಿಸಿದರೆ, ಸುಲ್ತಂಗಂಜ್‌ನ ಜೆಡಿಯು ಶಾಸಕ ಲಲಿತ್ ನಾರಾಯಣ್ ಮಂಡಲ್, "ಈ ವರ್ಷದ ನವೆಂಬರ್-ಡಿಸೆಂಬರ್‌ನಲ್ಲಿ ಸೇತುವೆಯ ಉದ್ಘಾಟನೆ ನಡೆಯಬೇಕಿತ್ತು. ಇದರ ಸಂಪೂರ್ಣ ತನಿಖೆ ನಡೆಯಬೇಕು. ಇದಲ್ಲಿ ದೋಷವಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ' ಎಂದಿದ್ದಾರೆ.
'ಗಂಡನನ್ನು ರಿಲೀಸ್ ಮಾಡಿ, ಇಲ್ದಿದ್ರೆ ಬಂಜೆ ಆಗ್ತೇನೆ..' ಮಹಿಳೆಯ ಮನವಿಗೆ ಒಪ್ಪಿ ಕೊಲೆ ಅಪರಾಧಿಗೆ 90 ದಿನದ ಪೆರೋಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ