
ಪಾಟ್ನಾ: ಭಾರತೀಯ ರಾಜಕೀಯ ಇತಿಹಾಸದಲ್ಲಿ ಪ್ರಭಾವಿ ಚುನಾವಣಾ ರಣತಂತ್ರಜ್ಞ ಹಾಗೂ ಜನ ಸುರಾಜ್ ಪಕ್ಷದ (JSP) ಸಂಸ್ಥಾಪಕ ಪ್ರಶಾಂತ್ ಕಿಶೋರ್ (ಪಿ.ಕೆ.) ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಚುನಾವಣಾ ಕಣಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ಬಿಹಾರದ ಅತ್ಯಂತ ಹೈಪ್ರೊಫೈಲ್ ಕ್ಷೇತ್ರವಾಗಿರುವ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜುಲೈ 13, 2026ರ ಸೋಮವಾರದಂದು ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಅಫಿಡವಿಟ್‌ನಲ್ಲಿ ತಮ್ಮ ಮತ್ತು ಕುಟುಂಬದ ಕೋಟ್ಯಂತರ ರೂಪಾಯಿ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಿದ್ದು, ಇದು ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಚುನಾವಣಾ ಅಧಿಕಾರಿಗಳಿಗೆ ಸಲ್ಲಿಕೆಯಾಗಿರುವ ಅಧಿಕೃತ ಅಫಿಡವಿಟ್ ಪ್ರಕಾರ, ಪ್ರಶಾಂತ್ ಕಿಶೋರ್ ಮತ್ತು ಅವರ ಪತ್ನಿ ಡಾ. ಜಹಾನ್ವಿ ದಾಸ್ ಅವರ ಒಟ್ಟು ಚರ ಮತ್ತು ಸ್ಥಿರ ಆಸ್ತಿಯ ಮೌಲ್ಯ ₹208 ಕೋಟಿಗೂ ಹೆಚ್ಚು ಆಗಿದೆ. ಇದರಲ್ಲಿ ವೈಯಕ್ತಿಕವಾಗಿ ಪ್ರಶಾಂತ್ ಕಿಶೋರ್ ಅವರ ಒಟ್ಟು ಆಸ್ತಿ ಮೌಲ್ಯ ₹96.06 ಕೋಟಿ ದಾಟುತ್ತದೆ.ಇನ್ನು ಇವರ 16 ವರ್ಷದ ಪುತ್ರ ದೈಬಿಕ್ ಭಾರದ್ವಾಜ್ ಹೆಸರಿನಲ್ಲಿ ₹7,19,281 ಮೌಲ್ಯದ ಚರಾಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದರಲ್ಲಿ ಪ್ರಶಾಂತ್ ಕಿಶೋರ್ ಅವರು ₹5.77 ಕೋಟಿ ಸಾಲ ಹೊಂದಿದ್ದರೆ, ಅವರ ಪತ್ನಿ ₹55.38 ಲಕ್ಷ ಸಾಲ ಹೊಂದಿದ್ದಾರೆ. ಪತ್ನಿ ಜಹಾನ್ವಿ ದಾಸ್ ಅವರ ಬಳಿ ₹64.12 ಲಕ್ಷ ಮೌಲ್ಯದ 475 ಗ್ರಾಂ ಚಿನ್ನ ಮತ್ತು ₹46,000 ಮೌಲ್ಯದ 200 ಗ್ರಾಂ ಬೆಳ್ಳಿಯ ಆಭರಣಗಳಿವೆ. ಜಹಾನ್ವಿ ದಾಸ್ ಅವರು ಎಂಬಿಬಿಎಸ್ ಪದವೀಧರೆಯಾಗಿದ್ದು, ಸದ್ಯ ನವದೆಹಲಿಯ ಅಪೊಲೊ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ವಿಶೇಷ ಯೋಜನೆಗಳ ಹಿರಿಯ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಿ.ಕೆ. ಅವರು 'ವೇದಾಸ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್' (Vedhas Ventures Private Limited) ಎಂಬ ಖಾಸಗಿ ಕಂಪನಿಯಲ್ಲಿ ಶೇ. 100 ರಷ್ಟು ನಿಯಂತ್ರಣ ಪಾಲನ್ನು (ಷೇರುಗಳನ್ನು) ಹೊಂದಿದ್ದಾರೆ. ಕುತೂಹಲಕಾರಿ ವಿಷಯವೆಂದರೆ, ಈ ಕಂಪನಿಯು 2024-25ರ ಆರ್ಥಿಕ ವರ್ಷದಲ್ಲಿ ಇವರದ್ದೇ ಆದ 'ಜನ್ ಸುರಾಜ್ ಪಕ್ಷ'ಕ್ಕೆ ಬರೋಬ್ಬರಿ ₹85 ಕೋಟಿ ಹಣವನ್ನು ದೇಣಿಗೆಯಾಗಿ ನೀಡಿದೆ. ಇದರೊಂದಿಗೆ 'ಜನ್ ಸುರಾಜ್ ಫೌಂಡೇಶನ್'ಗೆ ₹50 ಲಕ್ಷ ಹಾಗೂ 2023-24ರಲ್ಲಿ 'ಜಾಯ್ ಆಫ್ ಗಿವಿಂಗ್ ಗ್ಲೋಬಲ್ ಫೌಂಡೇಶನ್'ಗೆ ₹2.75 ಕೋಟಿ ದೇಣಿಗೆ ನೀಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ದಾಖಲಿಸಲಾಗಿದೆ.
ಅಫಿಡವಿಟ್‌ನಲ್ಲಿ ಬಹಿರಂಗವಾಗಿರುವಂತೆ ಪ್ರಶಾಂತ್ ಕಿಶೋರ್ ಅವರ ಶೈಕ್ಷಣಿಕ ಹಿನ್ನೆಲೆ ಅತ್ಯಂತ ಪ್ರಭಾವಶಾಲಿಯಾಗಿದೆ. ಹೈದರಾಬಾದ್‌ನ 'ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ' (ASCI) ಸಂಸ್ಥೆಯಿಂದ 2001-2003 ರಲ್ಲಿ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ಸ್ ಪದವಿ (MHA) ಪಡೆದಿದ್ದಾರೆ. ಅಮೆರಿಕದ ಪ್ರತಿಷ್ಠಿತ 'ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ' ಮತ್ತು ಮುಂಬೈನ ಹಿಂದೂಜಾ ಆಸ್ಪತ್ರೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ವಿಶೇಷ ಆರೋಗ್ಯ ರಕ್ಷಣಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ. ಫ್ರಾನ್ಸ್‌ನ ಕ್ಲೆರ್ಮಾಂಟ್ ಫೆರಾಂಡ್ ವಿಶ್ವವಿದ್ಯಾಲಯದ ಕ್ಯಾವಿಲಂ ವಿಚಿಯಿಂದ ತೀವ್ರತರವಾದ ಫ್ರೆಂಚ್ ಭಾಷಾ ಕೋರ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇವರ ವಿರುದ್ಧ ಸದ್ಯ 8 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ಹೆಚ್ಚಿನವು ಸಾರ್ವಜನಿಕವಾಗಿ ಕಾನೂನುಬಾಹಿರವಾಗಿ ಸಭೆ ಸೇರಿಸಿದ ಆರೋಪಕ್ಕೆ ಸಂಬಂಧಿಸಿದ್ದಾಗಿದ್ದು, ಯಾವುದೇ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗಿಲ್ಲ.
ಬಿಜೆಪಿಯ ರಾಷ್ಟ್ರೀಯ ನಾಯಕರಾಗಿದ್ದ ನಿತಿನ್ ನಬಿನ್ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಬಂಕಿಪುರ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈ ಸ್ಥಾನಕ್ಕೆ ಸದ್ಯ ಉಪಚುನಾವಣೆ ಘೋಷಣೆಯಾಗಿದ್ದು, ಪ್ರಶಾಂತ್ ಕಿಶೋರ್ ಅವರ ರಾಜಕೀಯ ಪ್ರವೇಶಕ್ಕೆ ಈ ಕ್ಷೇತ್ರ ಸಾಕ್ಷಿಯಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ (ಜುಲೈ 13, 2026), ಬಿಜೆಪಿ ಅಭ್ಯರ್ಥಿಯಾಗಿ ನೀರಜ್ ಕುಮಾರ್ ಸಿನ್ಹಾ ಹಾಗೂ ಜನ ಸ್ವರಾಜ್ ಪಕ್ಷದಿಂದ ಪ್ರಶಾಂತ್ ಕಿಶೋರ್ ಭರ್ಜರಿ ರೋಡ್ ಶೋ ನಡೆಸಿ ತಮ್ಮ ನಾಮಪತ್ರ ಸಲ್ಲಿಸಿದರು. ಬಿಜೆಪಿಯ ಹಿರಿಯ ನಾಯಕರಾದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಸರೋಗಿ ಈ ವೇಳೆ ಉಪಸ್ಥಿತರಿದ್ದರು.
ಬಂಕಿಪುರ ಉಪಚುನಾವಣೆಗೆ ಜುಲೈ 30ರಂದು ನಡೆಯಲಿದ್ದು, ಆಗಸ್ಟ್ 3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ತಂತ್ರ ರೂಪಿಸುವುದರಲ್ಲೇ ಚಾಣಕ್ಯ ಎಂದು ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಈಗ ತಾವೇ ಮೊದಲ ಬಾರಿಗೆ ತಮ್ಮದೇ ಪಕ್ಷದಿಂಸ ಕಣಕ್ಕಿಳಿದಿದ್ದು, ಜಯಶಾಲಿಯಾಗುತ್ತಾರಾ ಎಂದು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ