Uttar Pradesh elections : ಬಿಜೆಪಿಗೆ ಆಘಾತ, ಒಂದೇ ದಿನ ನಾಲ್ವರು ಶಾಸಕರ ರಾಜೀನಾಮೆ!

By Suvarna NewsFirst Published Jan 11, 2022, 8:24 PM IST
Highlights

ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸೇರಿ ನಾಲ್ವರ ರಾಜೀನಾಮೆ
ಎಲ್ಲರೂ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಸಾಧ್ಯತೆ
2017ರಲ್ಲಿ ಬಿಎಸ್ ಪಿ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದ ಸ್ವಾಮಿ ಪ್ರಸಾದ್

ಲಖನೌ (ಜ.11): ಉತ್ತರ ಪ್ರದೇಶ (Uttar Pradesh)ಈಗ ಅಕ್ಷರಶಃ ಕುರುಕ್ಷೇತ್ರವಾಗಿದೆ. ವಿಧಾನಸಭೆಗೆ ಚುನಾವಣೆಗಳು (assembly elections 2022) ಘೋಷಣೆ ಆದ ಬೆನ್ನಲ್ಲಿಯೇ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಗರಿಗೆದರಿದ್ದು, ಮಂಗಳವಾರ ಒಂದೇ ದಿನ ಆಡಳಿತಾರೂಢ ಭಾರತೀಯ ಜನತಾಪಕ್ಷದ (Bharatiya Janata Party ) ನಾಲ್ವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿದಿದ್ದಾರೆ. ಇದರಲ್ಲಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ಕೂಡ ಸೇರಿರುವುದು ಯೋಗಿ ಆದಿತ್ಯನಾಥ್ ( Yogi Adiyanath)ಸರ್ಕಾರಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ನಾಲ್ವರೂ ಅಖಿಲೇಶ್ ಯಾದವ್ (Akhilesh Yadav) ನೇತೃತ್ವದ ಸಮಾಜವಾದಿ ಪಕ್ಷವನ್ನು (Samajwadi Party)ಸೇರ್ಪಡೆಯಾಗಲಿದ್ದಾರೆ ಎನ್ನುವುದು ಖಚಿತವಾಗಿದೆ.

ಶಹಜಹಾನ್ ಪುರ ಶಾಸಕ ರೋಶನ್ ಲಾಲ್ ವರ್ಮ (Roshan Lal Verma), ಬಂಡಾ ಶಾಸಕ ಬ್ರಿಜೇಶ್ ಪ್ರಜಾಪತಿ (Brijesh Prajapati ) ಮತ್ತು ಕಾನ್ಪುರದ ಶಾಸಕ ಭಗವತಿ ಸಾಗರ್ ( Bhagwati Sagar )ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್ ಪಿಗೆ ಸೇರ್ಪಡೆಯಾಗಲಿರುವ ವ್ಯಕ್ತಿಗಳಾಗಿದ್ದಾರೆ. ಇದಕ್ಕೂ  ಮುನ್ನ ಬಹ್ರೈಚ್ ಶಾಸಕಿ ಮಾಧುರಿ ವರ್ಮ (Madhuri Verma), ಬಡಯುನ್ ಶಾಸಕ ರಾಧಾ ಕೃಷ್ಣ ಶರ್ಮ (Radha Krishna Sharma )ಹಾಗೂ ಸಂತ ಕಬೀರ ನಗರ ಶಾಸಕ ದಿಗ್ವಿಜಯ್ ನಾರಾಯಣ್ ಚೌಬೆ (Digvijay Narayan Chaubey)ಬಿಜೆಪಿಯನ್ನು (BJP) ತೊರೆದು ಎಸ್ ಪಿಗೆ ಸೇರ್ಪಡೆಯಾಗಿದ್ದರು.

ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಯನ್ನು ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾದ ಕುರಿತು ಪ್ರತಿಕ್ರಿಯೆ ನೀಡಿರುವ, ಬಿಜೆಪಿ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ( Harnath Singh Yadav ), ಮೌರ್ಯ ಅವರು "ಕಸ" ಎಂದು ಟೀಕೆ ಮಾಡಿದ್ದಾರೆ. ಜಿನ್ನಾವಾದಿ ಧೋರಣೆಯನ್ನು ಹೊಂದಿರುವ ವ್ಯಕ್ತಿಗಳೆಲ್ಲರೂ ಉತ್ತರ ಪ್ರದೇಶ ಚುನಾವಣೆಯಲ್ಲಿ ನಿಲ್ಲಲು ಮುಂದಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಪಕ್ಷದ ಸಾಲು ಸಾಲು ರಾಜೀನಾಮೆಗಳಿಗೆ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವ ಯಾದವ್, ಮುಂಬರುವ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಸ್ಥಾಪನೆ ಮಾಡಲಿದೆ ಎಂದಿದ್ದಾರೆ.

UP Elections: ಯುಪಿ ಚುನಾವಣಾ ಕಣದಿಂದ ಘಟಾನುಘಟಿ ನಾಯಕರು ಔಟ್!
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (Keshav Prasad Maurya ), ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಸಂಧಾನ ನಡೆಸಲು ಪ್ರಯತ್ನ ಪಟ್ಟಿದ್ದರು. ತಕ್ಷಣಕ್ಕೆ ರಾಜೀನಾಮೆ ನೀಡುವ ಯಾವುದೇ ಸಾಹಸ ಮಾಡಬೇಡಿ, ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದರು. ಆದರೆ, ಇದಕ್ಕೆ ಸಮಾಧಾನಗೊಳ್ಳದ ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ನೀಡಿದ್ದರು.  ದಲಿತರು, ಹಿಂದುಳಿದ ಜಾತಿಗಳು, ರೈತರು ಮತ್ತು ನಿರುದ್ಯೋಗಿ ಯುವಕರ ಅಭ್ಯುದಯಕ್ಕೆ ಆಡಳಿತಾರೂಢ ಬಿಜೆಪಿ ಗಮನ ಹರಿಸುತ್ತಿಲ್ಲ ಎಂದು ಯೋಗಿ ಸರ್ಕಾರದಲ್ಲಿ ಕಾರ್ಮಿಕ, ಉದ್ಯೋಗ, ಸಮನ್ವಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸ್ವಾಮಿ ಪ್ರಸಾದ್ ಮೌರ್ಯ ಆರೋಪ ಮಾಡಿದ್ದರು.

UP Elections: ಇದು ಡಿಜಿಟಲ್ ಯುಗದ ಚುನಾವಣೆ, ಪ್ರಚಾರದ ವೈಖರಿಯೇ ಬದಲು!
2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ತೊರೆದು ಬಿಜೆಪಿ ಟಿಕೆಟ್ ನಲ್ಲಿ ಚುನಾವಣೆ ಗೆದ್ದಿದ್ದರು. ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆಯಿಂದಾಗಿ ಕುಶಿನಗರ, ಪ್ರತಾಪ್ ಗಢ, ಕಾನ್ಪುರ ದೆಹಾತ್ ಮತ್ತು ಶಹಜಹಾನ್ ಪುರದಲ್ಲಿ ಬಿಜೆಪಿ ಗೆಲುವಿನ ನಿರೀಕ್ಷೆಯ ಮೇಲೆ ಪರಿಣಾಮ ಬೀರಲಿದೆ. ಡಿಸೆಂಬರ್ 2021 ರಲ್ಲಿ, ಖಲೀಲಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ದಿಗ್ವಿಜಯ್ ನಾರಾಯಣ್ ಚೌಬೆ, ಬಿಎಸ್ ಪಿ ನಾಯಕರಾದ ವಿನಯ್ ಶಂಕರ್ ತಿವಾರಿ, ಕುಶಾಲ್ ತಿವಾರಿ ಮತ್ತು ಗಣೇಶ್ ಶಂಕರ್ ಪಾಂಡೆ ಅವರೊಂದಿಗೆ ರಾಜ್ಯ ರಾಜಧಾನಿ ಲಖನೌನಲ್ಲಿ ನಡೆದ ಸಮಾರಂಭದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

click me!