
ಬೆಂಗಳೂರು: ರೋಗಿಗಳ ಜೀವ ಉಳಿಸಬೇಕಾದ ಔಷಧಿಗಳ ಹೆಸರಿನಲ್ಲಿ ನಡೆಯುತ್ತಿದ್ದ ದಂಧೆಯೊಂದನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ಬಿಡದಿ ಸಮೀಪದ ಕುರುಬಕೇರನಹಳ್ಳಿಯ ಫಾರ್ಮ್‌ಹೌಸ್‌ವೊಂದರ ಮೇಲೆ ದಾಳಿ ನಡೆಸಲಾಗಿದ್ದು, ಬರೋಬ್ಬರಿ 4.91 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ, ಇದೊಂದು ಅಂತರರಾಜ್ಯ ಜಾಲವಾಗಿದೆ. ಹಿಮಾಚಲ ಪ್ರದೇಶ ಮತ್ತು ತೆಲಂಗಾಣದ ನಕಲಿ ಉತ್ಪಾದನಾ ಘಟಕಗಳಿಂದ ಅಗ್ಗದ ದರದಲ್ಲಿ ಔಷಧಿಗಳನ್ನು ತಂದು, ಇಲ್ಲಿ ದುಬಾರಿ ಬೆಲೆಯ ಹೆಸರಾಂತ ಕಂಪನಿಗಳ ಲೇಬಲ್ ಹಚ್ಚಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ದಾಳಿಯ ವೇಳೆ ಪತ್ತೆಯಾದ ಅತ್ಯಂತ ಭಯಾನಕ ವಿಚಾರವೆಂದರೆ, ಐಸಿಯುನಲ್ಲಿ (ICU) ದಾಖಲಾಗಿರುವ ಗಂಭೀರ ಸ್ಥಿತಿಯ ರೋಗಿಗಳಿಗೆ ನೀಡುವ ಔಷಧಿಗಳಲ್ಲೂ ನಕಲಿ ಲೇಬಲ್ ಹಚ್ಚಿ ಮಾರಾಟ ಮಾಡಲಾಗುತ್ತಿತ್ತು. ಕಡಿಮೆ ಬೆಲೆಯ ಜೆನೆರಿಕ್ ಔಷಧಿಗಳನ್ನು ಹೊಸ ಸೀಸೆಗಳಿಗೆ (Vials) ತುಂಬಿಸಿ, ಅವುಗಳಿಗೆ ವಿದೇಶಿ ಬ್ರ್ಯಾಂಡ್ ಹಾಗೂ ದುಬಾರಿ ಕಂಪನಿಗಳ ಮೊಹರು ಒತ್ತಲಾಗುತ್ತಿತ್ತು. ಅವಧಿ ಮುಗಿದ (Expired) ಔಷಧಿಗಳನ್ನು ಕೂಡ ಹೊಸ ಲೇಬಲ್ ಹಚ್ಚಿ ಮತ್ತೆ ಮಾರುಕಟ್ಟೆಗೆ ಬಿಡಲಾಗುತ್ತಿತ್ತು ಎಂಬ ಸಂಶಯ ವ್ಯಕ್ತವಾಗಿದೆ.
ಈ ದಂಧೆಯ ಆಳ-ಅಗಲ ಪತ್ತೆಹಚ್ಚಲು ವಿಶೇಷ ತನಿಖಾ ತಂಡ (SIT) ರಚಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸಚಿವ ಖಾದರ್ ತಿಳಿಸಿದರು. ಕಳೆದ ಒಂದೂವರೆ ವರ್ಷದಿಂದ ಈ ಘಟಕ ಕಾರ್ಯಾಚರಣೆ ನಡೆಸುತ್ತಿದೆ. ಈ ಅವಧಿಯಲ್ಲಿ ಯಾವೆಲ್ಲಾ ಆಸ್ಪತ್ರೆಗಳ ಐಸಿಯುನಲ್ಲಿ ಈ ನಕಲಿ ಔಷಧಿಗಳನ್ನು ಬಳಸಲಾಗಿದೆ ಮತ್ತು ಅಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಆರೋಗ್ಯದ ಸ್ಥಿತಿ ಏನಾಗಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪ್ರಭುದೇವ್ ಎಂದು ಗುರುತಿಸಲಾಗಿದ್ದು, ಈ ಜಾಲದ ಮುಖ್ಯಸ್ಥ ಪ್ರಶಾಂತ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಪ್ರಶಾಂತ್ ವೃತ್ತಿಯಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದು, ತನಗಿದ್ದ ಜ್ಞಾನವನ್ನೇ ದುರ್ಬಳಕೆ ಮಾಡಿಕೊಂಡು ಕಳೆದ 1.5 ವರ್ಷದಿಂದ ಈ ದಂಧೆ ನಡೆಸುತ್ತಿದ್ದ. ಕುರುಬಕೇರನಹಳ್ಳಿಯ 10 ಎಕರೆ ಜಮೀನನ್ನು ವರ್ಷಕ್ಕೆ 10 ಲಕ್ಷ ರೂಪಾಯಿ ಬಾಡಿಗೆಗೆ ಪಡೆದು ಈ ಅಕ್ರಮ ವ್ಯವಹಾರ ನಡೆಸಲಾಗುತ್ತಿತ್ತು ಎಂದು ಎಸ್‌ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. ಈ ಘಟನೆಯು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು, ರೋಗಿಗಳು ಹಾಗೂ ಆಸ್ಪತ್ರೆಗಳು ಔಷಧಿ ಖರೀದಿ ಮಾಡುವಾಗ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ