
ಅಹಮದಾಬಾದ್(ಸೆ.12): ವಿಜಯ್ ರೂಪಾನಿ ರಾಜೀನಾಮೆಯಿಂದ ತೆರವಾಗಿದ್ದ ಗುಜರಾತ್‌ನ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಹೆಸರು ಆಯ್ಜೆಯಾಗಿದೆ. ಭೂಪೇಂದ್ರ ಭಾಯಿ ಪಟೇಲ್ ರಾಜ್ಯದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಹಿರಿಯ ನಾಯಕರ ಸಮ್ಮುಖದಲ್ಲಿ, ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ಸಿಎಂ ಆಯ್ಕೆ ಮಾಡಲಾಗಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಭೂಪೇಂದ್ರಭಾಯಿ ರಜನಿಕಾಂತ್ ಪಟೇಲ್ ಅವರು ಅಹಮದಾಬಾದ್ ಜಿಲ್ಲೆಯ ಘಟ್ಲೋಡಿಯಾ ಕ್ಷೇತ್ರದಿಂದ ಕಾಂಗ್ರೆಸ್ ನ ಶಶಿಕಾಂತ್ ವಾಸುದೇವಭಾಯ್ ಪಟೇಲ್ ಅವರನ್ನು ಸೋಲಿಸಿದ್ದರು ಎಂಬುವುದು ಉಲ್ಲೇಖನೀಯ.
"
ರಾಜೀನಾಮೆ ಶಾಕ್ ಬಳಿಕ ಮನಬಿಚ್ಚಿ ಮಾತನಾಡಿದ ಸಿಎಂ ವಿಜಯ್ ರೂಪಾನಿ!
ಪಕ್ಷದ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ
ವಿಜಯ್ ರೂಪಾನಿ ರಾಜೀನಾಮೆ ಬಳಿಕ, ಪಕ್ಷದ ಪ್ರಧಾನ ಕಚೇರಿಯಲ್ಲಿ ಭಾನುವಾರ ಗುಜರಾತ್‌ನ ಹೊಸ ಸಿಎಂ ಯಾರಾಗಬೇಕು ಎಂಬ ಬಗ್ಗೆ ಸಭೆ ನಡೆದಿತ್ತು. ಕೇಂದ್ರೀಯ ವೀಕ್ಷಕರಾಗಿ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ತರುಣ್ ಚುಗ್ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಸಿಎಂ ರೇಸ್‌ನಲ್ಲಿ ಯಾರು?
ಜೈನ ಸಮುದಾಯಕ್ಕೆ ಸೇರಿದ ರೂಪಾನಿ ರಾಜೀನಾಮೆ ಬೆನ್ನಲ್ಲೇ ಈ ಹುದ್ದೆಯ ರೇಸ್‌ನಲ್ಲಿ ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಖಾತೆ ಸಚಿವರಾಗಿ ಆಯ್ಕೆಯಾದ ಮೋದಿ ಅವರ ಪರಮಾಪ್ತ ಮನ್‌ಸುಖ್ ಮಾಂಡವೀಯ, ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಸಚಿವ ಆರ್.ಸಿ. ಫಲ್ಡು, ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್, ಹಾಲಿ ಲಕ್ಷದ್ವೀಪ ಕೇಂದ್ರಾಡಳಿತದ ಮುಖ್ಯಸ್ಥ ಪ್ರಫುಲ್ ಪಟೇಲ್ ಹಾಗೂ ಕೇಂದ್ರ ಸಚಿವ ಪುರುಷೋತ್ತಮ ರೂಪಾಲಾ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಈ ಬಾರಿ ಪಾಟಿದಾರ್ (ಪಟೇಲ್) ಸಮುದಾಯಕ್ಕೆ ಸಿಎಂ ಪಟ್ಟನೀಡುವ ಮೂಲಕ, ಮುಂದಿನ ಚುನಾವಣೆಯಲ್ಲಿ ಆ ಸಮುದಾಯದ ಬೆಂಬಲವನ್ನು ತನ್ನಲ್ಲೇ ಉಳಿಸಿಕೊಳ್ಳುವ ಯತ್ನವನ್ನು ಪಕ್ಷ ಮಾಡಲಿದೆ ಎನ್ನಲಾಗುತ್ತಿದೆ. ಫಲ್ಡು ಹಾಗೂ ನಿತಿನ್ ಪಟೇಲ್ ಪಾಟಿದಾರ್ ಸಮುದಾಯದವರು.
"
ಮೋದಿ ತವರಲ್ಲಿ ರಾಜಕೀಯ ಬೆಳವಣಿಗೆ; ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ!
ಬಿಜೆಪಿ ಸಿಎಂ ಬದಲಾದ 3ನೇ ರಾಜ್ಯ
ಈ ಮೊದಲು ಉತ್ತರಾಖಂಡ ಮತ್ತು ಕರ್ನಾಟಕದಲ್ಲೂ ಸಿಎಂ ಬದಲಾವಣೆ ಆಗಿತ್ತು. ಉತ್ತರಾಖಂಡದಲ್ಲಿ ತೀರ್ಥಸಿಂಗ್ ರಾವತ್ ಹಾಗೂ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸಿ ಯುವ ಪೀಳಿಗೆಯ ಪುಷ್ಕರ್ ಸಿಂಗ್ ಧಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕಲಾಗಿತ್ತು.
ಹೊಸ ಶಕ್ತಿ ಬೇಕು
ಕಾಲಕಾಲಕ್ಕೆ ಹೊಣೆಗಾರಿಕೆ ಬದಲಾಯಿಸುವ ಸಂಪ್ರದಾಯ ಬಿಜೆಪಿಯಲ್ಲಿದೆ. ಅದರಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಹೊಸ ಶಕ್ತಿ ಹಾಗೂ ಉತ್ಸಾಹದೊಂದಿಗೆ ಹೊಸ ನೇತೃತ್ವದಲ್ಲಿ ಇನ್ನು ಮುನ್ನಡೆಯಬೇಕಿದೆ. ಮುಂದೆ ಪಕ್ಷ ವಹಿಸಿದ ಕಾರ್ಯ ನಿರ್ವಹಿಸಲು ಬದ್ಧ. ನನ್ನಂಥ ಸಾಮಾನ್ಯ ವ್ಯಕ್ತಿಗೆ ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು.
- ವಿಜಯ್ ರೂಪಾನಿ, ನಿರ್ಗಮಿತ ಸಿಎಂ
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ