ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಇರಿಸಲಾದ ದೇಶದ ಹೆಸರಿನ ಫಲಕದಲ್ಲಿ ಇಂಡಿಯಾ ಬದಲು ಭಾರತ್ ಎಂದು ನಮೂದಿಸಲಾಗಿದೆ.
ನವದೆಹಲಿ (ಸೆಪ್ಟೆಂಬರ್ 9, 2023): ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ಜಿ20 ನಾಯಕರ ಶೃಂಗಸಭೆಯಲ್ಲಿ ಇಂಡಿಯಾವನ್ನು ಭಾರತ ಬದಲಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಇರಿಸಲಾದ ದೇಶದ ಹೆಸರಿನ ಫಲಕದಲ್ಲಿ ಇಂಡಿಯಾ ಬದಲು ಭಾರತ್ ಎಂದು ನಮೂದಿಸಲಾಗಿದೆ. ಆ ಮೂಲಕ ಭಾರತ್ ಬಳಕೆಯನ್ನು ಅಧಿಕೃತವಾಗಿ ವಿಸ್ತರಿಸುವ ಸರ್ಕಾರದ ಉದ್ದೇಶವನ್ನು ಮತ್ತೊಮ್ಮೆ ದೃಢಪಡಿಸಿದೆ.
ಇನ್ನು, ಭಾರತದ ಜಿ 20 ಅಧ್ಯಕ್ಷ ಸ್ಥಾನವು ದೇಶದೊಳಗೆ ಮತ್ತು ಪ್ರಪಂಚಕ್ಕಾಗಿ ಒಗ್ಗಟ್ಟಿನ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನವದೆಹಲಿಯಲ್ಲಿ ಆರಂಭವಾದ G20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶಿ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳುಹಿಸಿದ ಔತಣಕೂಟದ ಆಹ್ವಾನವು ಭಾರತಕ್ಕೆ ಸಂಸ್ಕೃತದ ಹೆಸರಾದ "ಭಾರತದ ರಾಷ್ಟ್ರಪತಿ’ ಎಂದು ಉಲ್ಲೇಖಿಸಿದ್ದು ವಿವಾದವನ್ನು ಹುಟ್ಟುಹಾಕಿತ್ತು.
ಇದನ್ನು ಓದಿ: ಒಡಿಶಾ ಕೋನಾರ್ಕ್ ಚಕ್ರದ ಮುಂದೆಯೇ ವಿಶ್ವದ ನಾಯಕರಿಗೆ ಪ್ರಧಾನಿ ಮೋದಿ ಸ್ವಾಗತ: ಕಾಲ ಚಕ್ರದ ಮಹಿಮೆ ಹೀಗಿದೆ ನೋಡಿ..
ಈ ರಾಜತಾಂತ್ರಿಕ ಆಹ್ವಾನದಲ್ಲಿ "ಭಾರತ" ಎಂದು ಸೇರಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರ ಹಿಂದೂ-ರಾಷ್ಟ್ರೀಯವಾದಿ ಸರ್ಕಾರವು ದೇಶದ ಅಧಿಕೃತ ಇಂಗ್ಲಿಷ್ ಹೆಸರನ್ನು ಬಳಸುವುದರಿಂದ ದೂರ ಸರಿಯಲು ಉದ್ದೇಶಿಸಿದೆ ಎಂಬ ಕಳವಳ ಹುಟ್ಟುಹಾಕಿದೆ. ಇದರ ಜೊತೆಗೆ, "ಭಾರತ" ಎಂಬ ಹೆಸರಿನ ಬಳಕೆಗೆ ಒತ್ತು ನೀಡುವ ನಿರ್ಣಯವನ್ನು ಪ್ರಸ್ತಾಪಿಸಲು ಸರ್ಕಾರವು ಈ ತಿಂಗಳ ಕೊನೆಯಲ್ಲಿ ಐದು ದಿನಗಳ ವಿಶೇಷ ಸಂಸತ್ ಅಧಿವೇಶನವನ್ನು ನಿಗದಿಪಡಿಸಿದೆ ಎಂದೂ ಹೇಳಲಾಗ್ತಿದೆ.
ಈ ಮಧ್ಯೆ, ‘’ಇಂಡಿಯಾ’’ ಬದಲಿಗೆ ‘’ಭಾರತ’’ ಎಂದು ಬಳಸುವುದರಿಂದ ರಾಷ್ಟ್ರೀಯ ಹೆಮ್ಮೆಯ ಬಲವಾದ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ ಮತ್ತು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುತ್ತದೆ ಎಂದು ಬಿಜೆಪಿ ವಾದಿಸಿದೆ. ಮೋದಿ ಸಂಪುಟದ ಸದಸ್ಯ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಹ ಈ ಬಗ್ಗೆ ಬೆಂಬಲ ವ್ಯಕ್ತಪಡಿಸಿ, "ಇದು ಮೊದಲೇ ಆಗಬೇಕಿತ್ತು. ರಾಷ್ಟ್ರಪತಿಗಳು 'ಭಾರತ್'ಗೆ ಆದ್ಯತೆ ನೀಡಿದ್ದಾರೆ. ಇದು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವ ದೊಡ್ಡ ಹೇಳಿಕೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ವಿಶ್ವದ ದೊಡ್ಡಣ್ಣನಿಗೆ ಅದ್ಧೂರಿ ಔತಣಕೂಟ: ಚಂದ್ರಯಾನ -3 ಯಶಸ್ಸಿಗೆ ಮೋದಿ, ಭಾರತೀಯರ ಶ್ಲಾಘಿಸಿದ ಜೋ ಬೈಡೆನ್
ಇನ್ನು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, "ಭಾರತ" ಬಳಕೆಯನ್ನು ವಿರೋಧಿಸುವವರನ್ನು ಟೀಕಿಸಿದರು, "ಅವರು ವಿದೇಶಕ್ಕೆ ಹೋದಾಗ ಭಾರತವನ್ನು ಟೀಕಿಸುತ್ತಾರೆ, ಅವರು ಭಾರತದಲ್ಲಿದ್ದಾಗ, ಭಾರತ್ ಹೆಸರಿಗೆ ಆಕ್ಷೇಪಿಸುತ್ತಾರೆ" ಎಂದು ವ್ಯಂಗ್ಯವಾಡಿದ್ದರು.
ಇತ್ತೀಚೆಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತೀಯರು "ಇಂಡಿಯಾ" ಎಂಬ ಹೆಸರನ್ನು ಬಳಸುವುದನ್ನು ನಿಲ್ಲಿಸಿ ಮತ್ತು ಬದಲಿಗೆ "ಭಾರತ" ಅನ್ನು ಅಳವಡಿಸಿಕೊಳ್ಳುವಂತೆ ಹೇಳಿದರು. "ನಮ್ಮ ದೇಶ ಭಾರತ, ಮತ್ತು ನಾವು "ಇಂಡಿಯಾ" ಎಂಬ ಪದವನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ಎಲ್ಲಾ ಪ್ರಾಯೋಗಿಕ ಕ್ಷೇತ್ರಗಳಲ್ಲಿ ಭಾರತವನ್ನು ಬಳಸಲು ಪ್ರಾರಂಭಿಸಬೇಕು, ಆಗ ಮಾತ್ರ ಬದಲಾವಣೆಯಾಗುತ್ತದೆ, ನಾವು ನಮ್ಮ ದೇಶವನ್ನು ಭಾರತ ಎಂದು ಕರೆಯಬೇಕು ಮತ್ತು ಅದನ್ನು ಇತರರಿಗೆ ವಿವರಿಸಬೇಕು." ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.
ಇದನ್ನೂ ಓದಿ: G20 Summit: ಭಾರತವನ್ನು ಜಾಗತಿಕವಾಗಿ ಪ್ರದರ್ಶಿಸಿ ರಾಜಕೀಯ ಲಾಭ ಮಾಡಿಕೊಳ್ತಿದ್ಯಾ ಮೋದಿ ಸರ್ಕಾರ?