ಪ್ರಧಾನಿಯಾದ ಬಳಿಕ ನರಸಿಂಹರಾವ್ ಅವರಿಗೆ ಬಾಬ್ರಿ ಮಸೀದಿ ಧ್ವಂಸ ದೊಡ್ಡ ಮುಳುವಾಯಿತು. ಅದಾದ ಬಳಿಕ ದೇಶದಲ್ಲಿ ಭಯೋತ್ಪಾದಕ ದಾಳಿಗಳು ನಡೆದವು. ಷೇರುಪೇಟೆ ಹಗರಣ, ಜೆಎಂಎಂ ಲಂಚ ಹಗರಣಗಳೂ ಕೇಳಿಬಂದವು. ಇದೆಲ್ಲದರ ನಡುವೆ ಪಂಜಾಬ್‌ನಲ್ಲಿನ ಉಗ್ರವಾದವನ್ನು ಯಶಸ್ವಿಯಾಗಿ ರಾವ್ ಸರ್ಕಾರ ಹತ್ತಿಕ್ಕಿತು.
ಆರ್ಥಿಕ ಸುಧಾರಣೆಗಳ ಪಿತಾಮಹ ನರಸಿಂಹರಾವ್
ನವದೆಹಲಿ: ವಿದೇಶಾಂಗ ವಿನಿಮಯ ಬರಿದಾಗಿತ್ತು. ಮೂರು ವಾರಗಳಲ್ಲಿ ಇಡೀ ಸಂಗ್ರಹ ಖಾಲಿಯಾಗುವ ಹಂತದಲ್ಲಿತ್ತು. ಸರ್ಕಾರ ಚಿನ್ನವನ್ನು ಒತ್ತೆ ಇಟ್ಟು ವಿದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ತಲುಪಿತ್ತು. ಋಣಭಾರಗಳನ್ನು ಚುಕ್ತಾ ಮಾಡಲು ದುಡ್ಡಿಗೆ ಪರದಾಡುವಂತಹ ಸ್ಥಿತಿ. ತೀರಾ ಇತ್ತೀಚೆಗೆ ಅಂದರೆ ಕೇವಲ ಒಂದೂವರೆ ವರ್ಷದ ಹಿಂದೆ ಶ್ರೀಲಂಕಾ ಅನುಭವಿಸಿದ್ದಂತದ್ದೇ ದೈನೇಸಿ ಸ್ಥಿತಿ 3 ದಶಕಗಳ ಹಿಂದೆ ಭಾರತವನ್ನು ಕಾಡಿತ್ತು. ಭಾರತದ ಕತೆ ಮುಗಿಯಿತು ಎಂದು ಷರಾ ಬರೆಯುವ ವೇಳೆಯೇ ಧುತ್ತನೇ ಒಬ್ಬರು ಬಂದರು. ಆರ್ಥಿಕ ಸುಧಾರಣೆಗಳನ್ನು ಮಾಡಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಈಗ ಭಾರತ ವಿಶ್ವದ 3ನೇ ಆರ್ಥಿಕತೆಯತ್ತ ದಾಪುಗಾಲು ಇಡುತ್ತಿದೆಯಲ್ಲ, ಅದಕ್ಕೆ ಭದ್ರ ಬುನಾದಿಯನ್ನು ಹಾಕಿದ್ದೇ ಅವರು. ಹೆಸರು- ಪಾಮುಲಪರ್ತಿ ವೆಂಕಟನರಸಿಂಹ ರಾವ್ ಅರ್ಥಾತ್ ಪಿ.ವಿ.ನರಸಿಂಹರಾವ್ ಅಲಿಯಾಸ್ ಪಿವಿಎನ್!
ಪಿ.ವಿ.ನರಸಿಂಹರಾವ್ ಬಗ್ಗೆ ಹಲವಾರು ದಾಖಲೆಗಳು ಇವೆ. ಹತ್ತಾರು ದಂತಕತೆಗಳು ಇವೆ. ಅದರಿಂದಾಚೆಗೆ ಅವರೊಬ್ಬ ದಕ್ಷ ಆಡಳಿತಗಾರ, ಪ್ರಾಮಾಣಿಕ ವ್ಯಕ್ತಿ ಎಂದು ಅವರನ್ನು ಹತ್ತಿರದಿಂದ ಕಂಡವರು ಇವತ್ತಿಗೂ ಹೇಳುತ್ತಾರೆ. ಪಿವಿಎನ್ ಅವರು ದಕ್ಷಿಣ ಭಾರತದಿಂದ ಪ್ರಧಾನಿಯಾದ ಮೊದಲ ವ್ಯಕ್ತಿ. ನೆಹರು-ಗಾಂಧಿ ಕುಟುಂಬಕ್ಕೆ ಸೇರಿಲ್ಲದಿದ್ದರೂ ಪ್ರಧಾನಿ ಗದ್ದುಗೆಯಲ್ಲಿ ಕುಳಿತು ಐದು ವರ್ಷಗಳ ಕಾಲ ದರ್ಬಾರ್ ನಡೆಸಿದ ಮೊತ್ತ ಮೊದಲ ಕಾಂಗ್ರೆಸ್ ರಾಜಕಾರಣಿ. ಅವರೊಬ್ಬ ತಂತ್ರಜ್ಞಾನ ಪ್ರೇಮಿ. ಸುಧಾರಣಾವಾದಿ. ವಾಸ್ತವವನ್ನು ಅರ್ಥ ಮಾಡಿಕೊಳ್ಳುತ್ತಿದ್ದ, ಜ್ಯೋತಿಷ್ಯವನ್ನು ಅಪಾರವಾಗಿ ನಂಬುತ್ತಿದ್ದ, ನಿರ್ಧಾರ ಕೈಗೊಳ್ಳದೇ ಇರುವುದು ಕೂಡ ಒಂದು ಉತ್ತಮವಾದ ನಿರ್ಧಾರ ಎಂದು ನಂಬಿದ್ದ ವ್ಯಕ್ತಿ ಎಂಬ ಬಗ್ಗೆ ಸಾಕಷ್ಟು ಬರಹಗಳು ಸಿಗುತ್ತವೆ.
ಆಂಧ್ರಪ್ರದೇಶದ ಮೂಲದವರು
1921ರ ಜೂ.28ರಂದು ಅವಿಭಜಿತ ಆಂಧ್ರಪ್ರದೇಶದ, ಈಗ ತೆಲಂಗಾಣದಲ್ಲಿರುವ ಕರೀಂನಗರ ಜಿಲ್ಲೆಯ ವಂಗಾರಾ ಗ್ರಾಮದಲ್ಲಿ ಜನಿಸಿದವರು ನರಸಿಂಹರಾವ್. ತಂದೆ ಪಿ. ರಂಗಾರಾವ್, ತಾಯಿ ರುಕ್ಮಿಣಮ್ಮ. ರೈತ ಕುಟುಂಬದಲ್ಲಿ ಹುಟ್ಟಿದ ನರಸಿಂಹರಾವ್ ಅವರು ಪಿಯುಸಿಯಲ್ಲಿದ್ದಾಗಲೇ ನಿಜಾಮ್ ಸರ್ಕಾರದ ವಿರುದ್ಧ ವಂದೇ ಮಾತರಂ ಹೋರಾಟದಲ್ಲಿ ಭಾಗಿಯಾಗಿದ್ದರು. ಇದರಿಂದಾಗಿ ಅವರ ಶಿಕ್ಷಣವೇ ನಿಂತು ಹೋಗಿತ್ತು. ಬಳಿಕ ಪುಣೆ, ನಾಗಪುರಕ್ಕೆ ತೆರಳಿ ಬಿಎಸ್ಸಿ, ಎಲ್‌ಎಲ್‌ಬಿಯನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಮಾಡಿದ್ದರು. ಮ್ಯಾಜಿಸ್ಟ್ರೇಟ್ ಹುದ್ದೆ ಅವರನ್ನು ಹುಡುಕಿಕೊಂಡು ಬಂದರೂ ಅದನ್ನು ತಿರಸ್ಕರಿಸಿ, ವಕೀಲರಾದರು.
ಜವಾಹರಲಾಲ್ ನೆಹರು ಅವರ ಬೆಂಬಲಿಗರಾಗಿದ್ದ ರಾವ್ ಅವರು ಕಾಂಗ್ರೆಸ್ ಸೇರಿದರು. 1957ರಲ್ಲಿ ಶಾಸಕರಾಗಿ ಆಯ್ಕೆಯಾದರು. 1962ರಲ್ಲಿ ಮಂತ್ರಿಯಾಗಿ ಕಾನೂನು ಖಾತೆ ನಿರ್ವಹಿಸಿದರು. 1971ರಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದಾಗ ಎಲ್ಲರಿಗೂ ಅಚ್ಚರಿ. ಜಾತಿ ರಾಜಕಾರಣವೇ ಮೇಳೈಸುತ್ತಿದ್ದ ಆಂಧ್ರಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯದಿಂದ ಬಂದ ನರಸಿಂಹರಾವ್ ಅತ್ಯುನ್ನತ ಗದ್ದುಗೆಗೇರಿದ್ದು ಹಲವರನ್ನು ಚಕಿತಗೊಳಿಸಿತ್ತು.
ನರಸಿಂಹರಾವ್ ಕೋಮುವಾದಿ, ಭಾರತ ಹಿಂದೂ ದೇಶ ಎಂದಿದ್ದರು: ತನ್ನದೇ ಪಕ್ಷದ ಮಾಜಿ ಪ್ರಧಾನಿ ಬಗ್ಗೆ ಅಯ್ಯರ್ ಕಿಡಿ
ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರಿಗೂ ರಾವ್ ಅವರು ಆಪ್ತರಾಗಿದ್ದರು. 1977ರಲ್ಲಿ ತುರ್ತು ಪರಿಸ್ಥಿತಿ ತೆರವಾದ ಬಳಿಕವೂ ಚುನಾಯಿತರಾದ ಕಾಂಗ್ರೆಸ್ಸಿಗರಲ್ಲಿ ನರಸಿಂಹರಾವ್ ಕೂಡ ಒಒ್ಬರು. 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೇರಿದಾಗ ರಾವ್ ಅವರನ್ನು ವಿದೇಶಾಂಗ ಮಂತ್ರಿ ಮಾಡಿದರು. ಇಂದಿರಾ ಹತ್ಯೆ ಬಳಿಕ ರಾಜೀವ್‌ಗಾಂಧಿ ಸಂಪುಟದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದರು.
ಆ್ಯಕ್ಸಿಡೆಂಟಲ್ ಪ್ರಧಾನಿ
ಮನಮೋಹನ ಸಿಂಗ್ ಅವರನ್ನು ಅಚಾನಕ್ ಪ್ರಧಾನಿ ಎಂದು ಬಿಜೆಪಿಗರು ಮೂದಲಿಸುತ್ತಾರೆ. ಆದರೆ ದೇಶದ ಮೊದಲ ಆ್ಯಕ್ಸಿಡೆಂಟಲ್ ಪ್ರಧಾನಿ ಎಂದರೆ ನರಸಿಂಹರಾವ್ ಎಂದು ರಾಜಕೀಯ ವಿಶ್ಲೇಷಕರು ಕಾರಣ ಸಮೇತ ಹೇಳುತ್ತಾರೆ. ಅದಕ್ಕೆ ಕಾರಣವೂ ಇದೆ. 1991ರ ಚುನಾವಣೆಗೂ ಮುನ್ನ ಯುವಕರಿಗೆ ಮನ್ನಣೆ ನೀಡಬೇಕು ಎಂಬ ನಿಲುವಿಗೆ ರಾಜೀವ್ ಗಾಂಧಿ ಬಂದಿದ್ದರು. ಹೀಗಾಗಿ ತಮ್ಮ ರಾಜಕೀಯ ಜೀವನ ಮುಗಿಯಿತು ಎಂದು ನರಸಿಂಹರಾವ್ ಅವರು ಗಂಟುಮೂಟೆ ಕಟ್ಟಿಕೊಂಡು ದೆಹಲಿಯಿಂದ ಹೊರಡಲು ಅಣಿಯಾಗಿದ್ದರು. ಆದರೆ 1991ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಎಲ್‌ಟಿಟಿಇ ಉಗ್ರರ ದಾಳಿಗೆ ಬಲಿಯಾದ ಸುದ್ದಿ ತಿಳಿಯಿತು. ಆ ವೇಳೆ ನೂತನ ನಾಯಕ ಯಾರು ಎಂಬ ಪ್ರಶ್ನೆ ಮೂಡಿತು. ಶರದ್ ಪವಾರ್, ಮಾಧವರಾವ್ ಸಿಂಧಿಯಾ, ಅರ್ಜುನ್ ಸಿಂಗ್ ಹಾಗೂ ಎನ್.ಡಿ.ತಿವಾರಿ ಅವರಂತಹ ಘಟಾನುಘಟಿ ನಾಯಕರು ರೇಸ್‌ನಲ್ಲಿದ್ದರು. ಆದರೆ ಹಿರಿಯರ ಸಲಹೆ ಮೇರೆಗೆ, ಸೋನಿಯಾ ಗಾಂಧಿ ಅವರು ನರಸಿಂಹರಾವ್ ಅವರಿಗೆ ಪಟ್ಟ ಕಟ್ಟಿದರು.
ಹೊಸ ಪ್ರಯೋಗ ನಡೆಸಿದ ಪಿವಿಎನ್
ತಮ್ಮದು ಅಲ್ಪಮತದ ಸರ್ಕಾರವಾಗಿದ್ದರೂ ಪಿವಿಎನ್ ತಲೆಕೆಡಿಸಿಕೊಳ್ಳಲಿಲ್ಲ. ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲೇಬೇಕು ಎಂಬ ಜಿದ್ದಿಗೆ ಬಿದ್ದ ಅವರು, ಆರ್ಥಿಕ ತಜ್ಞರಾಗಿದ್ದ ಮನಮೋಹನಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿ ಮುಕ್ತ ಸ್ವಾತಂತ್ರ್ಯ ನೀಡಿದರು. ಇದರಿಂದಾಗಿ ಭಾರತದಲ್ಲಿ ಲೈಸೆನ್ಸ್ ರಾಜ್ ಕೊನೆಗಾಣಿತು. ಉದಾರೀಕರಣ, ಜಾಗತೀಕರಣಕ್ಕೆ ಭಾರತದ ಆರ್ಥಿಕತೆ ತೆರೆದುಕೊಂಡಿತು. ಆ ಸಂದರ್ಭದಲ್ಲಿ ಪಿವಿಎನ್ ಕೈಗೊಂಡ ತೀರ್ಮಾನಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಆದರೆ ಅಂದಿನ ಅವರ ನಿರ್ಧಾರದ ಫಲವನ್ನು ಭಾರತ ಈಗ ಉಣ್ಣುವಂತಾಗಿದೆ. ಹೀಗಾಗಿ ಅವರನ್ನು ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ ಎಂದು ಬಣ್ಣಿಸಲಾಗುತ್ತದೆ.
ಮತ್ತೆ ಪಿವಿ ನರಸಿಂಹರಾವ್ ಕಡೆಗಣಿಸಿದ ಕಾಂಗ್ರೆಸ್; 100ನೇ ಜಯಂತಿಗೆ ರಾಹುಲ್ ಗಾಂಧಿ ಮೌನ!
ವಿವಾದಗಳಿಗೆ ಸಿಲುಕಿದ್ದ ಪಿವಿಎನ್
ಪ್ರಧಾನಿಯಾದ ಬಳಿಕ ನರಸಿಂಹರಾವ್ ಅವರಿಗೆ ಬಾಬ್ರಿ ಮಸೀದಿ ಧ್ವಂಸ ದೊಡ್ಡ ಮುಳುವಾಯಿತು. ಅದಾದ ಬಳಿಕ ದೇಶದಲ್ಲಿ ಭಯೋತ್ಪಾದಕ ದಾಳಿಗಳು ನಡೆದವು. ಷೇರುಪೇಟೆ ಹಗರಣ, ಜೆಎಂಎಂ ಲಂಚ ಹಗರಣಗಳೂ ಕೇಳಿಬಂದವು. ಇದೆಲ್ಲದರ ನಡುವೆ ಪಂಜಾಬ್‌ನಲ್ಲಿನ ಉಗ್ರವಾದವನ್ನು ಯಶಸ್ವಿಯಾಗಿ ರಾವ್ ಸರ್ಕಾರ ಹತ್ತಿಕ್ಕಿತು. 1996ರಲ್ಲಿ ಅಧಿಕಾರ ಕಳೆದುಕೊಂಡ ನಂತರ ರಾವ್ ಅವರು ರಾಜಕೀಯವಾಗಿ ದೂರ ಸರಿದರು. 2004ರ ಡಿ.23ರಂದು ತಮ್ಮ 83ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಮಾಜಿ ಪ್ರಧಾನಿಯಾಗಿದ್ದರೂ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿಲ್ಲ. ಕುಟುಂಬ ವರ್ಗ ದೆಹಲಿಯಲ್ಲೇ ವಿಧಿವಿಧಾನ ನಡೆಸಲು ನಿರ್ಧರಿಸಿತ್ತಾದರೂ ಕಾಂಗ್ರೆಸ್ ನಾಯಕರು ಹೈದರಾಬಾದ್‌ನಲ್ಲಿ ಆ ಕಾರ್ಯ ನೆರವೇರಿಸುವಂತೆ ಸೂಚಿಸಿದರು. ಕಾಂಗ್ರೆಸ್ ಕಚೇರಿಗೆ ಅವರ ಶವವನ್ನು ಒಯ್ಯಲಿಲ್ಲ ಎಂಬುದು ವಿವಾದಕ್ಕೂ ಕಾರಣವಾಗಿತ್ತು.
ರಾವ್ ವಿಶೇಷ ಗುಣಗಳು
ರಾವ್ ಅವರು ತಂತ್ರಜ್ಞಾನ ಪ್ರೇಮಿಯಾಗಿದ್ದರು. ತಮ್ಮ 70ನೇ ವಯಸ್ಸಿನಲ್ಲಿ ಕಂಪ್ಯೂಟರ್ ಕಲಿತಿದ್ದರು. ಅವರಿಗೆ ಭಾರತದ 9, ವಿದೇಶಗಳ 8 ಸೇರಿ 17 ಭಾಷೆಗಳು ಗೊತ್ತಿದ್ದವು. ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾದಿಂದಲೂ ಸಂಸದರಾಗಿ ಆಯ್ಕೆಯಾಗಿದ್ದರು. 1991ರಲ್ಲಿ ಪ್ರಧಾನಿಯಾದಾಗ ಅವರು ಸಂಸದರಾಗಿರಲಿಲ್ಲ. ಆಂಧ್ರಪ್ರದೇಶದ ನಂದ್ಯಾಲದಿಂದ ಉಪಚುನಾವಣೆಗೆ ಸ್ಪರ್ಧಿಸಿದ್ದರು. 5.80 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಅದು ಆ ಕಾಲಕ್ಕೆ ಐತಿಹಾಸಿಕ ದಾಖಲೆಯ ಜಯವಾಗಿತ್ತು.