
ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ಭಾರತರತ್ನ ಕೊಟ್ಟರೆ ಪ್ರಶಸ್ತಿಯ ಘನತೆ ಹೆಚ್ಚುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ಭಾನುವಾರ ಮುಂಬೈನಲ್ಲಿ ಮಾತನಾಡಿದ ಅವರು, ‘ಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಬೇಕು. ಅದರಿಂದ ಪ್ರಶಸ್ತಿಯ ಘನತೆ ಹೆಚ್ಚುತ್ತದೆ’ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆರ್‌ಎಸ್‌ಎಸ್‌ಗೆ ಅಚ್ಛೇ ದಿನ್ ದಿನ ಬಂದಿದೆಯೇ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ, ‘ಅದು ಇನ್ನೊಂದು ಮಾರ್ಗ. ಸಂಘವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬದ್ಧವಾಗಿತ್ತು. ಅದನ್ನು ಬೆಂಬಲಿಸಿದವರು ಪ್ರಯೋಜನ ಪಡೆದರು’ ಎಂದರು.
ಮುಂಬೈ: ‘ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ರೂಪಿಸಬೇಕು. ಅದು ವಿಭಜನೆಗೆ ಅವಕಾಶ ಮಾಡಿಕೊಡಬಾರದು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಭಾನುವಾರ ಹೇಳಿದ್ದಾರೆ.ಮುಂಬೈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉತ್ತರಾಖಂಡದಲ್ಲಿ 3 ಲಕ್ಷ ಸಲಹೆಗಳನ್ನು ಪಡೆದು, ಪ್ರಮುಖರ ಜೊತೆ ಮಾತನಾಡಿದ ಬಳಿಕ ಯುಸಿಸಿ ಕಾನೂನನ್ನು ರೂಪಿಸಲಾಯಿತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇದನ್ನು ಮಾಡಬೇಕು. ವಿಭಜನೆಯನ್ನು ಸೃಷ್ಟಿಸಬಾರದು’ ಎಂದು ತಿಳಿಸಿದರು.
‘ಇಸ್ಲಾಂ ಅನ್ನು ಶಾಂತಿಯ ಧರ್ಮ ಎಂದು ಕರೆಯಲಾಗುತ್ತದೆ, ಆದರೆ ಶಾಂತಿ ಕಾಣುವುದಿಲ್ಲ. ಧರ್ಮದಲ್ಲಿ ಆಧ್ಯಾತ್ಮಿಕತೆ ಇಲ್ಲದಿದ್ದರೆ, ಅದು ದಬ್ಬಾಳಿಕೆ ಮತ್ತು ಆಕ್ರಮಣಕಾರಿಯಾಗುತ್ತದೆ. ಇಂದು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದಲ್ಲಿ ಏಸುಕ್ರಿಸ್ತ ಮತ್ತು ಪ್ರವಾದಿ ಮುಹಮ್ಮದ್ ಅವರ ಬೋಧನೆಗಳು ಕಂಡುಬರುತ್ತಿಲ್ಲ. ನಮಗೆ ನಿಜವಾದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಆಚರಣೆ ಬೇಕು’ ಎಂದು ಹೇಳಿದರು.
ಮುಂಬೈ: ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸಲ್ಮಾನ್ ಖಾನ್ ಹಾಗೂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಸಂಘದ ನಡೆಯನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ ರಾವುತ್ ಪ್ರಶ್ನಿಸಿದ್ದು, ಉಭಯತರಿಂದ ಸ್ಪಷ್ಟನೆ ಕೇಳಿದ್ದಾರೆ.ಭಾನುವಾರ ಮಾತನಾಡಿದ ರಾವುತ್, ‘ಖಾನ್ ಅವರನ್ನು ಆಹ್ವಾನಿಸಿದ್ದು ಜನಸಮೂಹವನ್ನು ಸೆಳೆಯಲೆಂದೋ ಅಥವಾ ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ಸ್ವಾಗತವಿದೆ ಎಂದು ಬಿಂಬಿಸಲೋ’ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ‘ಮೊದಲಿನಿಂದಲೂ ಸಂಘ ಮುಸ್ಲಿಂ ವಿರೋಧಿ ರಾಜಕೀಯ ಅನುಸರಿಸಿಕೊಂಡು ಬಂದಿದೆ. ಅಂಥದ್ದರಲ್ಲಿ ಖಾನ್ ಅವರು ಸಂಘದ ಸಭೆಗೆ ಹೋಗಿದ್ದೇಕೆ? ಮಹಾರಾಷ್ಟ್ರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳನ್ನು ಮೆಚ್ಚಿಸಲೆಂದೇ?’ ಎಂದೂ ರಾವುತ್ ಪ್ರಶ್ನಿಸಿದ್ದಾರೆ.
3 ಮಕ್ಕಳಿರಬೇಕೆಂದು ಅಧ್ಯಯನ ಹೇಳುತ್ತದೆ: ಭಾಗವತ್
ಮುಂಬೈ : ಧಾರ್ಮಿಕ ಮತಾಂತರ, ಒಳನುಸುಳುವಿಕೆ ಮತ್ತು ಕಡಿಮೆ ಜನನ ಪ್ರಮಾಣ ಜನಸಂಖ್ಯಾ ಅಸಮತೋಲನದ ಹಿಂದಿನ ಮೂರು ಪ್ರಮುಖ ಅಂಶಗಳಾಗಿವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಗುರುತಿಸಿದ್ದಾರೆ.
ಆರೆಸ್ಸೆಸ್ ಸಮಾರಂಭದಲ್ಲಿ ಮಾತನಾಡಿದ ಅವರು, ‘ವೈಜ್ಞಾನಿಕ ಸಂಶೋಧನೆಯು ನಾವು ಒಂದು ಕುಟುಂಬದಲ್ಲಿ ಮೂವರು ಮಕ್ಕಳನ್ನು ಹೊಂದಿರಬೇಕು ಎಂದು ಸೂಚಿಸುತ್ತದೆ. ಆದಾಗ್ಯೂ, ಇದು ಆಯ್ಕೆಯ ವಿಷಯವಾಗಿದೆ’ ಎಂದರು.ಜನರನ್ನು ಮತಾಂತರಿಸಲು ಮತ್ತು ಒಂದು ಪಂಥದ ಸಂಖ್ಯೆಯನ್ನು ಹೆಚ್ಚಿಸಲು ಬಲವಂತ, ಪ್ರಚೋದನೆ ಅಥವಾ ವಂಚನೆಯ ಮಾರ್ಗ ಅನುಸರಿಸಲಾಗುತ್ತಿದೆ. ಇದು ಖಂಡನಾರ್ಹ. ತಮ್ಮ ಮೂಲ ಧರ್ಮಕ್ಕೆ ಮರಳಲು ಬಯಸುವವರಿಗೆ ‘ಘರ್ ವಾಪಸಿ’ ಉತ್ತರವಾಗಿದೆ ಎಂದು ಹೇಳಿದರು.
‘19ರಿಂದ 25 ವರ್ಷದೊಳಗಿನ ವಿವಾಹಗಳು ಮತ್ತು 3 ಮಕ್ಕಳನ್ನು ಹೊಂದುವುದು ಪೋಷಕರು ಮತ್ತು ಮಕ್ಕಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ’ ಎಂದು ಭಾಗವತ್ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ