ಫೋನ್‌ನಲ್ಲೇ ಮುಳುಗಿರುತ್ತಿದ್ದ ಪತ್ನಿ, ಶೀಲ ಶಂಕಿಸಿ ಕೊಂದ ಪತಿ!

By Suvarna NewsFirst Published Apr 22, 2022, 5:09 AM IST
Highlights

* ಕೊಲೆ- ಶೀಲ ಶಂಕಿಸಿ ಕತ್ತು ಹಿಸುಕಿ ಪತ್ನಿಯ ಹತ್ಯೆ

* ಸದಾ ಮೊಬೈಲಲ್ಲಿ ಮಾತನಾಡುತ್ತಾಳೆಂದು ಪತ್ನಿಯ ಕೊಂದ

* 3 ದಿನದ ಬಳಿಕ ಕೊಳಕ ಸ್ಥಿತಿಯಲ್ಲಿ ಶವ ಪತ್ತೆ

ಬೆಂಗಳೂರು(ಏ.22): ಸದಾ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಶೀಲ ಶಂಕಿಸಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕ್ಯಾಬ್‌ ಚಾಲಕನೊಬ್ಬ ಕೊಂದಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾವೇರಿಪುರದ 13ನೇ ಅಡ್ಡರಸ್ತೆ ನಿವಾಸಿ ವನಜಾಕ್ಷಿ(31) ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಮೃತಳ ಪತಿ ಅಶೋಕ್‌ನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್‌ ಮಾತುಕತೆ ವಿಚಾರವಾಗಿ ಭಾನುವಾರ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಕೆರಳಿದ ಅಶೋಕ್‌, ಪತ್ನಿ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದ. ಮೃತಳ ಮನೆಗೆ ಬುಧವಾರ ರಾತ್ರಿ ಆಕೆಯ ಸೋದರ ಬಂದಾಗ ಹತ್ಯೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

13 ವರ್ಷಗಳ ಹಿಂದೆ ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗಾ ಹೋಬಳಿ ಕೆಂಚೇನಹಳ್ಳಿ ಗ್ರಾಮದ ಅಶೋಕ್‌ ಹಾಗೂ ವನಜಾಕ್ಷಿ ವಿವಾಹವಾಗಿದ್ದು, ಈ ದಂಪತಿಗೆ ಮೂರು ಮಕ್ಕಳಿದ್ದಾರೆ‡. ಕಾವೇರಿಪುರದಲ್ಲಿ ಈ ಕುಟುಂಬ ನೆಲೆಸಿತ್ತು. ಮನೆ ಸಮೀಪದ ಗಾರ್ಮೆಂಟ್ಸ್‌ನಲ್ಲಿ ವನಜಾಕ್ಷಿ ನೌಕರಿಯಲ್ಲಿದ್ದರೆ, ಅಶೋಕ್‌ ಕ್ಯಾಬ್‌ ಚಾಲಕನಾಗಿದ್ದ. ಕೆಲ ದಿನಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಸದಾ ಕಾಲ ಯಾರೊಂದಿಗೋ ಪತ್ನಿ ಮೊಬೈಲ್‌ನಲ್ಲಿ ಮಾತನಾಡುತ್ತಾಳೆ ಎಂಬುದು ಅಶೋಕ್‌ ಆಕ್ಷೇಪವಾಗಿತ್ತು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ್ಗೆ ಜಗಳಗಳು ನಡೆದಿದ್ದವು. ಪತ್ನಿಗೆ ಗೊತ್ತಾಗದಂತೆ ಆಕೆಯ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಆತ ಮಾತುಕತೆ ಕೇಳಿಸಿಕೊಂಡಿದ್ದ.

ಅಂತೆಯೇ ಭಾನುವಾರ ರಾತ್ರಿ 9.45ರ ಸುಮಾರಿಗೆ ಅಶೋಕ್‌ ಮನೆಗೆ ಬಂದಾಗ ವನಜಾಕ್ಷಿ ಮೊಬೈಲ್‌ ಮಾತುಕತೆಯಲ್ಲಿ ನಿರತಳಾಗಿದ್ದಳು. ಆಗ ಯಾರೊಂದಿಗೆ ಮಾತನಾಡುತ್ತಿರುವುದು ಎಂದು ಪತ್ನಿಯನ್ನು ಆತ ಪ್ರಶ್ನಿಸಿದ್ದಾನೆ. ಈ ಮಾತಿಗೆ ಆಕೆ ಸಿಟ್ಟಿನಿಂದ ಉತ್ತರಿಸಿದ್ದಾಳೆ. ಆಗ ಕೆರಳಿದ ಅಶೋಕ್‌, ಪತ್ನಿ ಕಪಾಳಕ್ಕೆ ಬಿಗಿದಿದ್ದಾನೆ. ಆಗ ರೊಚ್ಚಿಗೆದ್ದ ಆಕೆ, ಅಡುಗೆ ಮನೆಯಿಂದ ಇಟ್ಟಿನ ಕೋಲು ತಂದು ಪತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾಳೆ. ಈ ಹಂತದಲ್ಲಿ ಇಟ್ಟಿನ ಕೋಲು ಕಸಿದುಕೊಂಡ ಅಶೋಕ್‌, ಪತ್ನಿಗೆ ತಿರುಗಿ ಬಾರಿಸಿದ್ದಾನೆ. ಆ ವೇಳೆ ಕೆಳಗೆ ಬಿದ್ದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಮಾಗಡಿ ತಾಲೂಕಿನ ಅಗಲಕೋಟೆ ತೆರಳಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

ಇತ್ತ ಸೋಮವಾರದಿಂದ ವನಜಾಕ್ಷಿ ಹಾಗೂ ಅಶೋಕ್‌ಗೆ ಊರಿನಲ್ಲಿದ್ದ ಮಕ್ಕಳು ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಮೃತಳ ಸೋದರ, ಬುಧವಾರ ರಾತ್ರಿ ಅಕ್ಕನ ಮನೆಗೆ ಬಂದಾಗ ದುರ್ವಾಸನೆ ಬಂದಿದೆ. ಆಗ ಅನುಮಾನಗೊಂಡ ಆತ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮನೆ ಬೀಗ ಮುರಿದು ಒಳ ಪ್ರವೇಶಿಸಿದಾಗ ಕೊಳತೆ ಸ್ಥಿತಿಯಲ್ಲಿ ವನಜಾಕ್ಷಿ ಮೃತದೇಹ ಪತ್ತೆಯಾಯಿತು. ಈ ಕೃತ್ಯ ಬೆಳಕಿಗೆ ಬಂದ ಕೆಲವೇ ತಾಸಿನಲ್ಲಿ ಮೊಬೈಲ್‌ ಕರೆಗಳನ್ನಾಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

click me!