ಅಂತೂ ರಾಜಧಾನಿಯ ಕಸದ ಸಮಸ್ಯೆ ಪರಿಹಾರ! ಡಂಪಿಂಗ್ ಯಾರ್ಡ್‌ ಕ್ಷೇತ್ರಗಳಿಗೆ ₹350 ಕೋಟಿ ಬಿಡುಗಡೆಗೆ ಜಿಬಿಎ ಒಪ್ಪಿಗೆ

Kannadaprabha News   | Kannada Prabha
Published : Feb 20, 2026, 07:02 AM IST
Bengaluru Garbage Dump

ಸಾರಾಂಶ

ಡಂಪಿಂಗ್ ಯಾರ್ಡ್‌ಗಳಿರುವ ವಿಧಾನಸಭಾ ಕ್ಷೇತ್ರಗಳಿಗೆ ₹350 ಕೋಟಿ ಅನುದಾನ ಬಿಡುಗಡೆ ಮಾಡುವ ಭರವಸೆಯ ಹಿನ್ನೆಲೆಯಲ್ಲಿ, ಸ್ಥಳೀಯರು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯಗೊಂಡಿದೆ. ಇದರಿಂದಾಗಿ ಸ್ಥಗಿತಗೊಂಡಿದ್ದ ಕಸದ ಲಾರಿಗಳ ಸಂಚಾರ ಪುನರಾರಂಭವಾಗಿದ್ದು, ಉಂಟಾಗಿದ್ದ ಕಸದ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ.

ಬೆಂಗಳೂರು: ನಗರದ ಕಸವನ್ನು ಡಂಪ್ ಮಾಡುವ ಡಂಪಿಂಗ್ ಯಾರ್ಡ್‌ಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ನಗರದ ಕಸದ ಸಮಸ್ಯೆ ಪರಿಹಾರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಲಹಂಕ, ಮಹಾದೇವಪುರ, ಬ್ಯಾಟರಾಯನಪುರ, ದೊಡ್ಡಬಳ್ಳಾಪುರ, ಆನೇಕಲ್, ಯಶವಂತಪುರ ಸೇರಿದಂತೆ ಡಂಪಿಂಗ್ ಯಾರ್ಡ್‌ಗಳಿರುವ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 350 ಕೋಟಿ ರು. ಅನುದಾನ ಬಿಡುಗಡೆ ಮಾಡುವುದಾಗಿ ಜಿಬಿಎ ಆಯುಕ್ತರು ಭರವಸೆ ಹೇಳಿರುವ ನೀಡಿರುವ ಹಿನ್ನೆಲೆಯಲ್ಲಿ ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿ, ಕಣ್ಣೂರು, ದೊಡ್ಡಬಳ್ಳಾಪುರ ಡಂಪಿಂಗ್ ಯಾರ್ಡ್‌ಗಳಲ್ಲಿ ಕಸ ಸುರಿಯಲು ಕಸದ ಲಾರಿಗಳಿಗೆ ಅನುವು ಮಾಡಿಕೊಡಲಾಗಿದೆ.

ಬುಧವಾರ ರಾತ್ರಿಯಿಂದಲೇ ಕಸದ ಲಾರಿಗಳು ಕಸವನ್ನು ಡಂಪ್ ಮಾಡಿ ನಗರಕ್ಕೆ ಹಿಂದಿರುಗಿವೆ. ನಗರದ ವಿವಿಧೆಡೆ ಮಸ್ಟರಿಂಗ್ ಕೇಂದ್ರಗಳಿಂದ ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸುವ ಪ್ರಕ್ರಿಯೆ ಆರಂಭವಾಗಿದೆ. ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಶೇ.90ರಷ್ಟು ಪರಿಹಾರವಾಗಿದೆ. ಬಹುತೇಕ ಮಸ್ಟರಿಂಗ್ ಕೇಂದ್ರಗಳಿಂದ ಕಸವನ್ನು ಸಾಗಿಸಲಾಗಿದೆ. ಕೆಲವೆಡೆ ಬಾಕಿ ಉಳಿದಿದ್ದು, ಶುಕ್ರವಾರದ ವೇಳೆಗೆ ಎಲ್ಲಾ ಕಡೆಗಳಿಂದಲೂ ಕಸವನ್ನು ಸಾಗಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಡಂಪಿಂಗ್ ಯಾರ್ಡ್‌ಗಳ ಅಸಮರ್ಪಕ ನಿರ್ವಹಣೆ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಿಗದಿಗಿಂತ ಹೆಚ್ಚಿನ ಕಸದ ಲಾರಿಗಳ ಸಂಚಾರದಿಂದ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಬೆಳ್ಳಹಳ್ಳಿ ಮತ್ತು ಮಿಟ್ಟಗಾನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಬಳಿಯ ಡಂಪಿಂಗ್ ಯಾರ್ಡ್‌ ವ್ಯಾಪ್ತಿಯ ನಾಗರಿಕರು ಹಾಗೂ ಸ್ಥಳೀಯ ಶಾಸಕರು ಕಸದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.

ಏಕಾಏಕಿ 150ಕ್ಕೂ ಹೆಚ್ಚು ಲಾರಿಗಳನ್ನು ಡಂಪಿಂಗ್ ಯಾರ್ಡ್‌ಗಳಲ್ಲಿ ತಡೆದು ನಿಲ್ಲಿಸಿದ್ದರಿಂದ ನಗರದ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿತ್ತು. ಅನೇಕ ಮಸ್ಟರಿಂಗ್ ಕೇಂದ್ರಗಳು ಹಾಗೂ ಕಸ ಸಾಗಿಸುವ ಆಟೋಗಳಲ್ಲೇ ನಗರದ ಕಸ ಉಳಿದುಕೊಂಡಿತ್ತು. ಗುರುವಾರವೂ ಮಲ್ಲೇಶ್ವರ, ಕೆ.ಆರ್. ಮಾರುಕಟ್ಟೆ, ಜೆ.ಸಿ. ರಸ್ತೆ ಗಾಂಧಿ ನಗರ ಮುಂತಾದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುವ ಆಟೋಗಳಲ್ಲಿ ಕಸ ಇರುವುದು ಕಂಡು ಬಂತು.

ಎಂದಿನಂತೆ ಕಸ ಸಂಗ್ರಹ: 

ಇನ್ನು ಮನೆ ಮನೆಗಳಿಂದ ಕಸ ಸಂಗ್ರಹಿಸುವ ಪ್ರಕ್ರಿಯೆಯು ಎಂದಿನಂತೆ ಮುಂದುವರಿದಿದೆ. ಯಾವುದೇ ಅಡಚಣೆ ಆಗಿಲ್ಲ. ವಾಣಿಜ್ಯ ಮಳಿಗೆಗಳಿಂದಲೂ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಸ ವಿಲೇಗೆ ಬಿಡದಿದ್ದರೆ ಆ ಕ್ಷೇತ್ರದಲ್ಲಿ ಕಸವನ್ನೇ ತೆಗೆಸಲ್ಲ: ಡಿ.ಕೆ. ಎಚ್ಚರಿಕೆ

ಬೆಂಗಳೂರು: ಬಿಜೆಪಿ ನಾಯಕರು ಕಸ ವಿಲೇವಾರಿಗೆ ಬಿಡುವುದು ಬೇಡ. ಅವರೇ ಕಸವನ್ನು ಇಟ್ಟುಕೊಳ್ಳಲಿ. ಯಾರು ಕಸ ವಿಲೇವಾರಿಗೆ ಬಿಡುವುದಿಲ್ಲವೋ ಅವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಸುವುದಿಲ್ಲ. ಈ ಬಗ್ಗೆ ಮೈಕ್‌ ಹಾಕಿ ಕ್ಷೇತ್ರದಲ್ಲಿ ಪ್ರಚಾರ ಮಾಡಿಸುತ್ತೇನೆ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಯಾರ ಕಾಲನ್ನೂ ಹಿಡಿಯಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಮೊದಲಿನಿಂದಲೂ ಯಾವ ಸಂಪ್ರದಾಯವಿತ್ತೋ ಅದೇ ರೀತಿ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಮತ್ತು ನಮ್ಮ ಸಮಯದಲ್ಲಿ ತೀರ್ಮಾನ ಮಾಡಿದ ರೀತಿಯನ್ನೇ ಅನುಸರಿಸಲಾಗುತ್ತಿದೆ. ಇನ್ನು, ಯಾರು ಕಸ ಹಾಕಲು ಅವಕಾಶ ನೀಡುವುದಿಲ್ಲವೋ ಅಲ್ಲಿ ಕಸವನ್ನೇ ತೆಗೆಯುವುದಿಲ್ಲ. ಆಗ ಜನರೇ ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದರು.

ನಾವು ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡಿದ್ದೇವೆ. 20-30 ಕೋಟಿ ರು.ಗಳು ಸೇರಿದಂತೆ 100 ಕೋಟಿ ರು. ಹಣವನ್ನು ಅಭಿವೃದ್ಧಿಗೆ ಕೊಡುತ್ತಾ ಬಂದಿದ್ದೇವೆ. ಬಿಜೆಪಿ ಶಾಸಕರು ಅರ್ಥ ಮಾಡಿಕೊಳ್ಳಬೇಕು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ನಾವು ಕೂಡ ಅಲ್ಲಿನ ಕಸವನ್ನು ಮೂರು ದಿನ ತೆಗೆಯಬೇಡಿ ಎಂದರೆ ಏನಾಗಬಹುದು. ಕಸ ವಿಲೇವಾರಿಗೆ ನಾಲ್ಕು ಕಡೆ ಜಾಗ ಗುರುತಿಸಲಾಗಿದೆ. ಭೂಮಿ ಸಮಸ್ಯೆ ಬಂದ ಕಾರಣಕ್ಕೆ ಎರಡು ಕಡೆ ಅಂತಿಮ ಮಾಡಿದ್ದೇವೆ. ಟೆಂಡರ್‌ ಕೂಡ ಕರೆಯಲಾಗಿದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಏಪ್ರಿಲಿಂದ ಎಸ್‌ಐಆರ್ ಆರಂಭ? ಮತಪಟ್ಟಿ ವಿಶೇಷ ಪರಿಷ್ಕರಣೆಗೆ ಆಯೋಗ ಸಜ್ಜು
ಉಚಿತ ಕೊಡುಗೆ ಅಭಿವೃದ್ದಿಗೆ ಮಾರಕ, ಎಷ್ಟು ದಿನ ಹೀಗೆ ಘೋಷಿಸುತ್ತಾ ಇರ್ತಿರಾ? ಸುಪ್ರೀಂ ಕೋರ್ಟ್ ಚಾಟಿ!