
ಕೊಚ್ಚಿ(ಸೆ.10): ಕನ್ನಡ ಚಿತ್ರರಂಗದ ತಾರೆಯರಿಗೆ ಉರುಳಾಗಿರುವ ಬೆಂಗಳೂರಿನ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೂ ಕೇರಳದ ಬಹುಕೋಟಿ ಚಿನ್ನದ ಸ್ಮಗ್ಲಿಂಗ್ ಪ್ರಕರಣಕ್ಕೂ ನಂಟಿರುವುದು ಇದೀಗ ಅಧಿಕೃತವಾಗಿದ್ದು, ಸ್ವತಃ ಜಾರಿ ನಿರ್ದೇಶನಾಲಯ (ಇ.ಡಿ.) ಈ ಕುರಿತು ಕೇರಳದ ಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ. ಇದೇ ವೇಳೆ, ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿಯನ್ನು ಬೆಂಗಳೂರಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಇ.ಡಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು ಡ್ರಗ್ಸ್ ಪ್ರಕರಣಕ್ಕೂ ಬಿನೀಶ್‌ಗೂ ನಂಟಿದೆ ಎಂದು ಕೇರಳದ ಮುಸ್ಲಿಂ ಲೀಗ್‌ನ ಯುವ ಘಟಕ ಕೆಲ ದಿನಗಳ ಹಿಂದೆ ಆರೋಪಿಸಿತ್ತು. ಅಲ್ಲದೆ, ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಮೊಹಮ್ಮದ್ ಅನೂಪ್‌ಗೂ ಬಿನೀಶ್‌ಗೂ ನಡುವೆ ವ್ಯಾವಹಾರಿಕ ಸಂಬಂಧವಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಕುರಿತು ಕೇರಳ ಇ.ಡಿ. ಘಟಕ ಬುಧವಾರ ಬಿನೀಶ್‌ನನ್ನು ವಿಚಾರಣೆಗೆ ಒಳಪಡಿಸಿದೆ.
ನಂತರ ಚಿನ್ನ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿರುವ ಇ.ಡಿ. ಅಧಿಕಾರಿಗಳು, ಬೆಂಗಳೂರಿನ ಡ್ರಗ್ಸ್ ಪ್ರಕರಣದ ಆರೋಪಿಗಳು ಕೇರಳದ ಚಿನ್ನ ಸ್ಮಗ್ಲಿಂಗ್ ಕೇಸ್‌ನ ಆರೋಪಿಗಳಿಗೆ ನೆರವು ನೀಡಿರುವ ಅನುಮಾನಗಳಿವೆ. ಹೀಗಾಗಿ ಬೆಂಗಳೂರಿನ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ದ ಬೆಂಗಳೂರು ಘಟಕಕ್ಕೆ ಆ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಮೊಹಮ್ಮದ್ ಅನೂಪ್ 2015ರಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಹೋಟೆಲ್ ಆರಂಭಿಸಿದ್ದು, ಅದರಲ್ಲಿ ಬಿನೀಶ್ ಹೂಡಿಕೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಬಿನೀಶ್ ಕೂಡ ತನಗೆ ಅನೂಪ್ ಮತ್ತು ಆತನ ಕುಟುಂಬದ ಪರಿಚಯವಿದ್ದು, ಅನೂಪ್ ಬೆಂಗಳೂರಿನಲ್ಲಿ ಹೋಟೆಲ್ ಆರಂಭಿಸಲು ತನ್ನಿಂದ ಹಣ ಪಡೆದಿದ್ದ ಎಂದು ಹೇಳಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ