ವಾಯುಪಡೆ ಬತ್ತಳಿಕೆಗೆ ಇಂದು ರಫೇಲ್| ಭಾರತ, ಫ್ರಾನ್ಸ್ ರಕ್ಷಣಾ ಸಚಿವರ ಸಮ್ಮುಖ ಅಧಿ ಕೃತ ಸೇರ್ಪಡೆ| ಫ್ರಾನ್ಸ್‌ನಿಂದ ಇನ್ನೂ 36 ರಫೇಲ್ ಖರೀದಿ ಬಗ್ಗೆ ಮಾತುಕತೆ?
ನವದೆಹಲಿ(ಸೆ.10): ವಿಶ್ವದ ಅತ್ಯಂತ ಶಕ್ತಿಶಾಲಿ ವಿಮಾನಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹಾಗೂ ಅತ್ಯಂತ ಕರಾರುವಾಕ್ಕು ದಾಳಿಗೆ ಪ್ರಸಿದ್ಧವಾಗಿರುವ 5 ರಫೇಲ್ ಯುದ್ಧ ವಿಮಾನಗಳು ಗುರುವಾರ ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಯಾಗಲಿವೆ. ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ಏರ್ಪಟ್ಟಿರುವಾಗಲೇ ಈ ಕಾರ್ಯಕ್ರಮ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲೋರೆನ್ಸ್ ಪಾರ್ಲಿ ಅವರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಇಬ್ಬರೂ ಸಚಿವರು ದ್ವಿಪಕ್ಷೀಯ ರಕ್ಷಣೆ ಹಾಗೂ ಭದ್ರತಾ ಸಹಕಾರ ವೃದ್ಧಿ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಇನ್ನೂ 36 ರಫೇಲ್‌ಗಳನ್ನು ಖರೀದಿಸುವ ಸಾಧ್ಯತೆ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಕ್ರಮದ ಮುನ್ನಾ ದಿನ ಪ್ರತಿಕ್ರಿಯಿಸಿರುವ ಫ್ರಾನ್ಸ್, ಭಾರತವು ನಮಗೆ ಏಷ್ಯಾದಲ್ಲಿ ಅತಿ ಪ್ರಮುಖ ವ್ಯೂಹಾತ್ಮಕ ಪಾಲುದಾರ ದೇಶವಾಗಿದೆ ಎಂದು ಬಣ್ಣಿಸಿದೆ.
undefined
5 ರಫೇಲ್ ಬಲ:
59 ಸಾವಿರ ಕೋಟಿ ರು. ವೆಚ್ಚದಲ್ಲಿ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿಯಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಸಂಬಂಧ ಭಾರತ 4 ವರ್ಷಗಳ ಹಿಂದೆ ಫ್ರಾನ್ಸ್ ಸರ್ಕಾರದ ಜತೆಗೇ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಮೊದಲ ಬ್ಯಾಚ್‌ನಲ್ಲಿ 10 ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಿವೆ. ಅದರಲ್ಲಿ 5 ವಿಮಾನಗಳು ಜು.29ರಂದು ಅಂಬಾಲಾ ವಾಯುನೆಲೆಗೆ ಬಂದಿಳಿದಿದ್ದವು. ಅವುಗಳನ್ನು ಅಧಿಕೃತವಾಗಿ ಗುರುವಾರ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.
ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲೇ ಇದ್ದು, ತರಬೇತಿಗೆ ಬಳಕೆಯಾಗುತ್ತಿವೆ. ಒಟ್ಟಾರೆ 2021ರೊಳಗೆ ಎಲ್ಲ 36 ವಿಮಾನಗಳು ಫ್ರಾನ್ಸ್‌ನಿಂದ ಭಾರತಕ್ಕೆ ಹಸ್ತಾಂತರವಾಗಲಿವೆ. 2ನೇ ಬ್ಯಾಚ್‌ನಲ್ಲಿ 4ರಿಂದ 5 ವಿಮಾನಗಳು ನವೆಂಬರ್‌ನೊಳಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.
ರಷ್ಯಾದ ಸುಖೋಯ್ ಬಳಿಕ 23 ವರ್ಷಗಳಲ್ಲಿ ಭಾರತ ಖರೀದಿಸಿದ ಮೊದಲ ಯುದ್ಧ ವಿಮಾನಗಳು ಇವಾಗಿವೆ. ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಇವು ಹೊಂದಿದ್ದು, ಚೀನಾ ಬಳಿ ಇರುವ ವಿಮಾನಕ್ಕಿಂತ ಶಕ್ತಿಯುತವಾಗಿವೆ. ಹೀಗಾಗಿ ಗಡಿ ಸಂಘರ್ಷದ ಸಂದರ್ಭದಲ್ಲಿ ಇವುಗಳ ಸೇರ್ಪಡೆ ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ.