ಸನಾತನ ಧರ್ಮದ ವಿರುದ್ಧ ಉದಯನಿಧಿ ಸ್ಟ್ಯಾಲಿನ್ ನೀಡಿದ್ದ ಹೇಳಿಕೆಯ ಕುರಿತು ಬೆಂಗಳೂರು ಕೋರ್ಟ್ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಬೆಂಗಳೂರು (ಫೆ.2): ಸನಾತನ ಧರ್ಮ ಡೆಂಗ್ಯೂ ಹಾಗೂ ಮಲೇರಿಯಾ ಇದ್ದಂತೆ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರ ಪುತ್ರ ಹಾಗೂ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟ್ಯಾಲಿನ್‌ಗೆ ಬೆಂಗಳೂರು ಕೋರ್ಟ್ ಶಾಕ್ ನೀಡಿದೆ. ಉದಯನಿಧಿ ಸ್ಟ್ಯಾಲಿನ್ ನೀಡಿದ್ದ ಹೇಳಿಕೆಯ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಹಂತದಲ್ಲಿ ಅವರ ವಿರುದ್ಧ ಬೆಂಗಳೂರಿನಲ್ಲೂ ಕೇಸ್ ದಾಖಲಾಗಿತ್ತು. ಶುಕ್ರವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಅರ್ಜಿಯ ವಿಚಾರಣೆ ನಡೆಸಿದ್ದಲ್ಲದೆ, ಉದಯನಿಧಿ ಸ್ಟ್ಯಾಲಿನ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಮಾರ್ಚ್ 4 ರಂದು ಅವರು ಖುದ್ದಾಗಿ ಕೋರ್ಟ್‌ಗೆ ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದೆ. ಇದೇ ವಿಚಾರದಲ್ಲಿ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಸ್ಟ್ಯಾಲಿನ್ ಅವರು ನೀಡಿದ್ದ ಹೇಳಿಕೆಯ ಕುರಿತು ಬೆಂಗಳೂರಿನ ಪರಮೇಶ್ ಎಂಬುವವರು ಖಾಸಗಿ ದೂರು ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ 42 ನೇ ಎಸಿಎಂಎಂ ಕೋರ್ಟ್ ಶುಕ್ರವಾರ ಈ ಆದೇಶ ನೀಡಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶೆಯಾಗಿರುವ ಜೆ.ಪ್ರೀತ್ ಅವರಿಂದ ಅದೇಶ ಪ್ರಕವಾಗಿದೆ. ಕಳೆದ ಸೆ.4ರಂದು ಚನ್ನೈನಲ್ಲಿ ಉದಯನಿಧಿ ಸ್ಟ್ಯಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸನಾತನ ಧರ್ಮವನ್ನು ಸಾಂಕ್ರಾಮಿಕ ರೋಗಕ್ಕೆ ಹೋಲಿಸುವ ಮೂಲಕ ದೊಡ್ಡ ವಿವಾದ ಸೃಷ್ಟಿಸಿದ್ದರು.