ನಾರಾಯಣಪುರದಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಇಬ್ಬರು ಬಾಲಾಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಆರೋಗ್ಯ ಸ್ಥಿರವಾಗಿದೆ.
ದೆಹಲಿ (ಜ.14) : ಛತ್ತೀಸ್‌ಗಢದ ನಾರಾಯಣಪುರದಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಆಟ ಆಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಇಬ್ಬರು ಬಾಲಾಪರಾಧಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ 10 ಮತ್ತು 13 ವರ್ಷದ ಇಬ್ಬರು ಬಾಲಾಪರಾಧಿಗಳನ್ನು ಜನವರಿ 10ರಂದು ಕೋತ್ವಾಲಿ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಭಾನುವಾರ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನ ಕುಟುಂಬ ಬಾಲಕಿಯ ಕುಟುಂಬದ ಬಾಡಿಗೆದಾರರು ಮತ್ತು ಇನ್ನೊಬ್ಬ ಆಕೆಯ ನೆರೆಹೊರೆಯವನು ಎಂದು ತಿಳಿದುಬಂದಿದೆ.
ಆಟವಾಡುವ ನೆಪದಲ್ಲಿ ಕರೆದೊಯ್ದು ಕೃತ್ಯ: ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಆಟವಾಡುವುದಕ್ಕೆ ಹೊರಗೆ ಬಿಟ್ಟಿದ್ದಾರೆ. ಈ ವೇಳೆ 5ನೇ ಮತ್ತು 8ನೇ ತರಗತಿ ಓದುತ್ತಿದ್ದ ಇಬ್ಬರು ಬಾಲಕರು 4 ವರ್ಷದ ಬಾಲಕಿಯನ್ನು ಆಟವಾಡೋಣ ಬಾ ಎಂದು ಕರೆದುಕೊಂಡು ಹೋಗಿದ್ದಾರೆ. ಆರಂಭದಲ್ಲಿ ಮೈದಾನದಲ್ಲಿ ಆಟವಾಡುತ್ತಿದ್ದುದನ್ನು ಬಾಲಕಿಯ ಅಮ್ಮ ಕೂಡ ನೋಡಿದ್ದಾರೆ. ಇದಾದ ನಂತರ ಬಾಲಕಿಯನ್ನು ಹೊಲದ ಬಳಿ ಆಟವಾಡಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಲಕಿಯ ಮೇಲೆ ಇಬ್ಬರೂ ಬಾಲಕರು ಅತ್ಯಾಚಾರ ಮಾಡಿದ್ದಾರೆ.
ಇದನ್ನೂ ಓದಿ: Bengaluru: 6 ವರ್ಷದ ಬಾಲಕಿಯ ರೇಪ್ & ಮರ್ಡರ್, ದಾರುಣ ಘಟನೆಗೆ ಸಾಕ್ಷಿಯಾದ ರಾಜಧಾನಿ!
ಇನ್ನು ಬಾಲಕಿ ಅಳುತ್ತಾ ಮನೆಗೆ ಬಂದಾಗ ಆಕೆಯ ಗುಂಪ್ತಾಂಗದಲ್ಲಿ ನೋವು ಉಂಟಾಗಿದ್ದು, ಏನಾದರೂ ತಾಗಿ ಗಾಯವಾಗಿರಬಹುದು ಎಂದು ಕೂಡಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದಾದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದಾಗ ವೈದ್ಯರು ಬಾಲಕಿಯ ಪೋಷಕರ ಬಳಿ ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಏನಾಗಿದೆ? ಹೇಗೆ ಆಗಿದೆ ಗೊತ್ತಿಲ್ಲವೆಂದು ಹೇಳಿದ್ದಾರೆ. ಆಗ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ. ನಂತರ, ಆಸ್ಪತ್ರೆಯವರೇ ಪೊಲೀಸರಿಗೆ ಬಾಲಕಿಯ ಮೇಲೆ ಅತ್ಯಾಚಾರ ನಡೆದ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ವೈದ್ಯರ ಪರೀಕ್ಷಾ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಂತರ, ಆರೋಗ್ಯದಲ್ಲಿ ಸುಧಾರಿಸಿಕೊಂಡ ಬಾಲಕಿಯನ್ನು ವಿಚಾರಣೆ ಮಾಡಿದಾಗ ಘಟನೆಯ ಬಗ್ಗೆ ಹಾಗೂ ಅತ್ಯಾಚಾರ ಮಾಡಿದ ಬಾಲಕರ ಹೆಸರನ್ನು ಹೇಳಿದ್ದಾರೆ. ಆಗ ಪೊಲೀಸರು ಗ್ರಾಮಕ್ಕೆ ತೆರಳಿ ಇಬ್ಬರೂ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಪೋಕ್ಸೋ ಕೇಸ್ ಕೂಡ ದಾಖಲಿಸಿಕೊಂಡಿದ್ದು, ಬಾಲಕರನ್ನು ಬಾಲಾಪರಾಧಿಗಳು ಎಂದು ಪರಿಗಣಿಸಲಾಗಿದೆ. ಮುಂದೆ ಯಾವ ಕ್ರಮ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಮಗಳ ಮನೆಗೆ ಬಂದ ಅತ್ತೆಯನ್ನೇ ಹತ್ಯೆಗೈದ ಅಳಿಯ!